ಅನ್ಯ ಧರ್ಮೀಯ ವಿವಾಹ ಎಂದಾಗ ಮನೆಯಲ್ಲಾದ ಕಿರಿಕ್ಗಳೇನು? ವಿವರಿಸಿದ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್ ಬಾಲ್ಯದ ಗೆಳೆಯ ಆಂಟನಿ ಜೊತೆ ಇತ್ತೀಚೆಗೆ ಅಂತರ್ ಧರ್ಮೀಯ ವಿವಾಹವಾದರು. ಕ್ರಿಶ್ಚಿಯನ್ ಧರ್ಮದ ಆಂಟನಿ ಜೊತೆ ಕೀರ್ತಿ ಮದುವೆಯಾಗಲು ಮನೆಯಲ್ಲಿ ತೊಂದರೆ ಆಗಬಹುದು ಎಂದು ಅವರು ಭಾವಿಸಿದ್ದರು. ಆದರೆ, ಅವರ ಪೋಷಕರು ಧರ್ಮದ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ, ಪ್ರೀತಿಗೆ ಮನ್ನಣೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಬಾಲ್ಯದ ಗೆಳೆಯ ಆ್ಯಂಟನಿ ಜೊತೆ ಮದುವೆ ಆದರು. 2024ರಲ್ಲಿ ಈ ವಿವಾಹ ನೆರವೇರಿತು. ಕೀರ್ತಿ ಸುರೇಶ್ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ಅವರು ಅನ್ಯ ಧರ್ಮದವನ ಜೊತೆ ವಿವಾಹ ಆಗುತ್ತಾರೆ ಎಂದಾಗ ಸಾಕಷ್ಟು ಚರ್ಚೆಗಳು ನಡೆದವು. ಹಾಗಾದರೆ ಮನೆಯಲ್ಲಿ ಈ ವಿಚಾರವಾಗಿ ತೊಂದರೆ ಆಯ್ತಾ? ಈ ಬಗ್ಗೆ ಕೀರ್ತಿ ಸುರೇಶ್ ವಿವರಿಸಿದ್ದಾರೆ.
ಕೀರ್ತಿ ಸುರೇಶ್ಗೆ ಈಗ 32 ವರ್ಷ. ಅವರು 15-16ನೇ ವಯಸ್ಸಿನಲ್ಲಿರುವಾಗಲೇ ಆ್ಯಂಟನಿ ಜೊತೆ ಪರಿಚಯ ಬೆಳೆಯಿತು. ಕಾಲೇಜಿನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. 2010ರಲ್ಲಿ ಇವರ ಪ್ರೀತಿ ಆರಂಭ ಆಯಿತಂತೆ. ಆಗ ಕೀರ್ತಿ ನಟಿ ಆಗುವ ಕನಸು ಹೊಂದಿರಲಿಲ್ಲ. ನಟಿಯಾದ ಬಳಿಕವೂ ಅವರು ತಮ್ಮ ಸಂಬಂಧವನ್ನು ಉಳಿಸಿಕೊಂಡು ಬಂದರು.
‘ನಮಗೆ ಸಮಯ ಬೇಕಿತ್ತು. ನಮ್ಮ ಕಾಲೇಜ್ನ ಮುಗಿಸಿ, ಕರಿಯರ್ನ ಗಟ್ಟಿ ಮಾಡಿಕೊಳ್ಳಬೇಕಿತ್ತು. ಐದರಿಂದ ಆರು ವರ್ಷ ನಾವಿಬ್ಬರೂ ಲಾಂಗ್ ಡಿಸ್ಟನ್ಸ್ ರಿಲೇಶನ್ಶಿಪ್ನಲ್ಲಿ ಇದ್ದೆವು. ಅವನು ಕತಾರ್ನಲ್ಲಿ ಇದ್ದ, ನಾನು ಚೆನ್ನೈನಲ್ಲಿದ್ದೆ. ಅವನು ಭಾರತಕ್ಕೆ ಮರಳಿದ. ಆಗ ನಮಗೆ ಸೆಟಲ್ ಆಗೋಕೆ ಸಮಯ ಬೇಕಿತ್ತು’ ಎಂದಿದ್ದಾರೆ ಕೀರ್ತಿ.
ಆ್ಯಂಟನಿ ಕ್ರಿಶ್ಚಿಯನ್. ಕೀರ್ತಿ ಹಿಂದು. ಈ ವಿಚಾರ ಮನೆಯಲ್ಲಿ ದೊಡ್ಡ ತೊಂದರೆ ಆಗಬಹುದು ಎಂಬುದು ಇವರ ಊಹೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. ‘ಧರ್ಮ ಎಂಬುದು ಮನೆಯಲ್ಲಿ ದೊಡ್ಡ ಸಮಸ್ಯೆ ಆಗಬಹುದು ಎಂದು ನಾವು ಭಾವಿಸಿದ್ದೆವು. ನನ್ನ ತಂದೆ ಬಳಿ ಆ್ಯಂಟನಿ ಬಗ್ಗೆ ಹೇಳಿದೆ. ಆದರೆ, ಧರ್ಮದ ವಿಚಾರವನ್ನು ಅವರು ಅಷ್ಟು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ನಾವು ಕಲ್ಪಿಸಿಕೊಂಡಂತೆ ಏನೂ ಆಗಿರಲಿಲ್ಲ’ ಎಂದಿದ್ದಾರೆ ಕೀರ್ತಿ ಸುರೇಶ್. ಕೀರ್ತಿ ಸುರೇಶ್ ತಂದೆ ಜಿ. ಸುರೇಶ್ ಕುಮಾರ್ ಖ್ಯಾತ ನಿರ್ಮಾಪಕ. ಅವರ ತಾಯಿ ಮೇನಕಾ ನಟಿ.
ಇದನ್ನೂ ಓದಿ: ನಟಿ ಕೀರ್ತಿ ಸುರೇಶ್ ಡಬ್ಬಿಂಗ ಮಾಡುವುದು ನೋಡಿ ನಗದೇ ಇರಲಾರಿರಿ
ಕೀರ್ತಿಯ ಫೇವರಿಟ್ ಶ್ವಾನ ಒಂದಿದೆ. 2018ರಲ್ಲಿ ‘ಮಹಾನಟಿ’ ಸಿನಿಮಾ ಯಶಸ್ಸು ಕಂಡ ಬಳಿಕ ಈ ನಾಯಿಯನ್ನು ಆ್ಯಂಟನಿ ಗಿಫ್ಟ್ ಆಗಿ ನೀಡಿದ್ದರು. ಈ ಶ್ವಾನಕ್ಕೆ Nyke ಎಂದು ಹೆಸರು ಇಟ್ಟಿದ್ದಾರೆ. ಆ್ಯಂಟನಿ (Antony) ಶಬ್ದದಿಂದ NY ಹಾಗೂ ಕೀರ್ತಿ ಶಬ್ದದಿಂದ (Keerthy) Ke ಅಕ್ಷರವನ್ನು ತೆಗೆದುಕೊಂಡು ಈ ಹೆಸರನ್ನು ಇಡಲಾಗಿದೆ. ಕೀರ್ತಿ ಹಾಗೂ ಆ್ಯಂಟನಿ ಕಳೆದ ವರ್ಷ ಡಿಸೆಂಬರ್ 12ರಂದು ಗೋವಾದಲ್ಲಿ ಮದುವೆ ಆದರು. ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಪ್ರಕಾರ ಈ ಮದುವೆ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








