ಬೀಚ್ ಉಡುಪಿನಲ್ಲಿ ಓಂ ಚಿಹ್ನೆ; ಭಾರತೀಯರ ಕೆಂಗಣ್ಣಿಗೆ ಗುರಿಯಾದ ವಿದೇಶಿ ಮಾಡೆಲ್

ಬಹಾಮಾಸ್ ಪ್ರವಾಸದ ವೇಳೆ ಹಿಂದೂಗಳ ಪವಿತ್ರ ಓಂ ಚಿಹ್ನೆ ಇರುವ ಬೀಚ್ ಉಡುಪು ಧರಿಸಿದ ಸೂಪರ್ ಮಾಡೆಲ್ ಕೆಂಡಾಲ್ ಜೆನ್ನರ್ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಟೀಕೆ ಮಾಡುತ್ತಿದ್ದಾರೆ.

ಬೀಚ್ ಉಡುಪಿನಲ್ಲಿ ಓಂ ಚಿಹ್ನೆ; ಭಾರತೀಯರ ಕೆಂಗಣ್ಣಿಗೆ ಗುರಿಯಾದ ವಿದೇಶಿ ಮಾಡೆಲ್
ವಿವಾದಕ್ಕೊಳಾದ ಮಾಡೆಲ್

Updated on: Nov 26, 2026 | 11:38 AM

ವಿದೇಶಿ ಮಾಡೆಲ್ ಕೆಂಡಾಲ್ ಜೆನ್ನರ್ ತಮ್ಮ ಹೊಸ ಉಡುಪಿನಿಂದಾಗಿ ಭಾರಿ ವಿವಾದಕ್ಕೆ ಸಿಲುಕಿದ್ದಾರೆ. ಬಹಾಮಾಸ್ ಪ್ರವಾಸದಲ್ಲಿರುವ ಅವರು ಹಿಂದೂಗಳ ಪವಿತ್ರ ‘ಓಂ’ ಚಿಹ್ನೆ ಇರುವ ಬೀಚ್ ಉಡುಪು ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಕಿಡಿಕಾರುತ್ತಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿವಾದಾತ್ಮಕ ಉಡುಪು

ಕೆಂಡಾಲ್ ಜೆನ್ನರ್ ತಮ್ಮ ಸಹೋದರಿ ಕೈಲಿ ಜೆನ್ನರ್ ಜೊತೆ ಬಹಾಮಾಸ್‌ನಲ್ಲಿ ರಜೆ ಕಳೆಯುತ್ತಿದ್ದಾರೆ. ಗೆಳತಿ ಹೈಲಿ ಬೀಬರ್ ಅವರ 30ನೇ ಹುಟ್ಟುಹಬ್ಬದ ಆಚರಣೆಗಾಗಿ ಈ ತಂಡ ಅಲ್ಲಿಗೆ ತೆರಳಿದೆ. ಈ ವೇಳೆ ಕೆಂಡಾಲ್ ಧರಿಸಿದ್ದ ಸೊಂಟಕ್ಕೆ ಸುತ್ತುವ ಬಟ್ಟೆಯ ಮೇಲೆ ಓಂ ಚಿಹ್ನೆ ಮುದ್ರಿತವಾಗಿತ್ತು. ಫ್ಯಾಷನ್ ಹೆಸರಿನಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಳಸುವುದು ಎಷ್ಟು ಸರಿ ಎಂಬ ಚರ್ಚೆ ಈಗ ಶುರುವಾಗಿದೆ.

Loading...

ಹಿಂದೂ ಧರ್ಮದಲ್ಲಿ ‘ಓಂ’ ಚಿಹ್ನೆಯ ಮಹತ್ವ

ಹಿಂದೂ ಧರ್ಮದಲ್ಲಿ ‘ಓಂ’ ಎಂಬುದು ಅತ್ಯಂತ ಪವಿತ್ರವಾದ ಮಂತ್ರ ಮತ್ತು ಚಿಹ್ನೆಯಾಗಿದೆ. ಇದನ್ನು ಬ್ರಹ್ಮಾಂಡದ ಮೂಲ ಶಬ್ದ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಸಂಕೇತವೆಂದು ಪೂಜಿಸಲಾಗುತ್ತದೆ. ಪ್ರತಿಯೊಂದು ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆಗಳ ಆರಂಭದಲ್ಲಿ ಓಂಕಾರವನ್ನು ಪಠಿಸಲಾಗುತ್ತದೆ. ಮಾಂಡೂಕ್ಯ ಉಪನಿಷತ್ತಿನ ಪ್ರಕಾರ ಇದು ಜಾಗೃತ, ಸ್ವಪ್ನ ಮತ್ತು ಸುಷುಪ್ತಿ ಎಂಬ ಮೂರು ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ಇಂತಹ ಪವಿತ್ರ ಚಿಹ್ನೆಯ ಅರ್ಥ ತಿಳಿಯದೆ ಬೀಚ್ ಉಡುಪಿನಲ್ಲಿ ಬಳಸಿರುವುದು ಸರಿಯಲ್ಲ ಎಂಬುದು ಭಕ್ತರ ವಾದವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶ

ಕೆಂಡಾಲ್ ಅವರ ಈ ಫೋಟೋಗಳಿಗೆ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಪರ-ವಿರೋಧದ ಕಾಮೆಂಟ್‌ಗಳು ಹರಿದುಬರುತ್ತಿವೆ. ‘ಓಂ ಎಂಬುದು ಪೂಜನೀಯ ಚಿಹ್ನೆಯೇ ಹೊರತು ನಿಮ್ಮ ಫ್ಯಾಷನ್ ಟ್ರೆಂಡ್ ಅಲ್ಲ. ಇದು ಸಂಪೂರ್ಣವಾಗಿ ಅಗೌರವದ ನಡೆ’ ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ಭಾರತದಲ್ಲಿ ಸುಲಭವಾಗಿ ಪ್ರಚಾರ ಪಡೆಯಲು ಇಂತಹ ತಂತ್ರ ಮಾಡಿದ್ದಾರೆ ಎಂದು ಮತ್ತೊಬ್ಬರು ಆರೋಪಿಸಿದ್ದಾರೆ. ಹಿಂದೂಗಳ ಸಹಿಷ್ಣುತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

ಇದನ್ನೂ ಓದಿ: 420 ಕೋಟಿ ರೂ. ಮೌಲ್ಯದ ವಜ್ರದ ಒಳ ಉಡುಪು ಧರಿಸಿ ರ‍್ಯಾಂಪ್ ಮೇಲೆ ಮಿಂಚಿದ ಮಾಡೆಲ್!

ಭಾರತಕ್ಕೆ ಭೇಟಿ ನೀಡಿದ್ದ ಮಾಡೆಲ್

ಇನ್ನೊಂದೆಡೆ ಕೆಲವರು ಇದು ಕೇವಲ ಒಂದು ಚಿಹ್ನೆ ಮಾತ್ರ ಎಂದು ಕೆಂಡಾಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ 2017ರ ಫೆಬ್ರವರಿಯಲ್ಲಿ ಕೆಂಡಾಲ್ ಜೆನ್ನರ್ ಭಾರತಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು. ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ ಅವರು ಅಲ್ಲಿ ಆಭರಣಗಳನ್ನು ಖರೀದಿಸಿದ್ದರು. ಆಗಲೂ ಅವರ ಶಾಪಿಂಗ್ ಫೋಟೋಗಳು ವೈರಲ್ ಆಗಿದ್ದವು. ಆದರೆ ಈ ಬಾರಿ ಅವರು ಭಾರತೀಯ ಸಂಸ್ಕೃತಿಯ ಚಿಹ್ನೆಯನ್ನು ತಪ್ಪಾಗಿ ಬಳಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us