ಕಮಲ್ ಹಾಸನ್ ವಿವಾದ: ಕೋರ್ಟ್ ವಿಚಾರಣೆ ಬಳಿಕ ಫಿಲ್ಮ್ ಚೇಂಬರ್ ಸಭೆ

ಕರ್ನಾಟಕದಲ್ಲಿ ಜೂನ್ 5ರಂದು ತಮಿಳು ಭಾಷೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಕಮಲ್ ಹಾಸನ್ ಅವರ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದ್ದು, ಅವರು ಕೋರ್ಟ್​ ಮೆಟ್ಟಿಲು ಏರಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸಿನಿಮಾ ಬಿಡುಗಡೆ ಬಗ್ಗೆ ವಾಣಿಜ್ಯ ಮಂಡಳಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.

ಕಮಲ್ ಹಾಸನ್ ವಿವಾದ: ಕೋರ್ಟ್ ವಿಚಾರಣೆ ಬಳಿಕ ಫಿಲ್ಮ್ ಚೇಂಬರ್ ಸಭೆ
Kfcc, Kamal Haasan

Updated on: Jun 03, 2025 | 6:44 PM

ಕಾಲಿವುಡ್ ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡದ ಬಗ್ಗೆ ಮಾತನಾಡುವ ಮೂಲಕ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡರು. ತಮಿಳಿನಿಂದಲೇ ಕನ್ನಡ (Kannada) ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ (Thug Life) ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಆದರೆ ಕಮಲ್ ಹಾಸನ್ ಅವರು ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜೂನ್ 10ಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ಮಾಡಲಾಗಿದೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ​​ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿ ಆಗಿದ್ದಾರೆ. ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿಯುವಲ್ಲಿ ವಾಣಿಜ್ಯ ಮಂಡಳಿ ಕೂಡ ಮುಂದಾಳತ್ವ ವಹಿಸಿದೆ. ‘ಕಮಲ್​ ಅವರು ಕ್ಷಮೆ ಕೇಳಿ, ಆಡಿದ ಮಾತನ್ನು ಹಿಂಪಡೆಯಬೇಕು’ ಎಂದು ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಸಭೆ ಬಳಿಕ ಹೇಳಿದ್ದಾರೆ.

‘ಥಗ್ ಲೈಫ್ ಸಿನಿಮಾದ ಬಿಡುಗಡೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಕಮಲ್​ ಸಿನಿಮಾ ತಂಡ ಸಂಧಾನಕ್ಕೆ ಬಂದರೆ ನಾವು ಸಿದ್ಧ. ಕ್ಷಮೆ ಕೇಳಬೇಕು ಅನ್ನೋದು ನಮ್ಮ ಆಗ್ರಹ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ. ಈಗಾಗಲೇ ಕಮಲ್ ಹಾಸನ್ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಆದರೆ ಕ್ಷಮೆ ಕೇಳಿಲ್ಲ.

ಇದನ್ನೂ ಓದಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ
ರಾಜ್ಯಸಭೆಗೆ ಕಮಲ್ ಹಾಸನ್; ಮೇಲ್ಮನೆ ಪ್ರವೇಶಕ್ಕೆ ನಾಮ ನಿರ್ದೇಶನ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
ಸೋನು ನಿಗಮ್ ಬೆನ್ನಲ್ಲೇ ಕಮಲ್ ಹಾಸನ್ ವಿವಾದ: ಕೆರಳಿ ಕೆಂಡವಾದ ಕನ್ನಡಿಗರು

ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳದ ಕಾರಣ ‘ಥಗ್ ಲೈಫ್’ ಸಿನಿಮಾಗೆ ಕರ್ನಾಟಕದಲ್ಲಿ ವಿರೋಧ ಇದೆ. ಅಲ್ಲದೇ, ನಿರ್ಮಾಪಕರು ಸದ್ಯಕ್ಕೆ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದೇ ಇರಲು ತೀರ್ಮಾನಿಸಿದ್ದಾರೆ. ಜೂನ್ 10ರಂದು ನಡೆಯಲಿರುವ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದರ ಮೇಲೆ ‘ಥಗ್ ಲೈಫ್’ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

ಇದನ್ನೂ ಓದಿ: ‘ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ?’; ಕಮಲ್ ಹಾಸನ್​ಗೆ ಕೋರ್ಟ್ ತರಾಟೆ

ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆಗಬಾರದು ಎಂದು ‘ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು’ ಕೂಡ ಆಗ್ರಹಿಸಿದೆ. ಒಂದು ವೇಳೆ ಈ ಸಿನಿಮಾ ಬಿಡುಗಡೆ ಆದರೆ ತಮಿಳರು ಮತ್ತು ಕನ್ನಡಿಗರ ಮಧ್ಯೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಎಂದು ಕಾರ್ಮಿಕ ಪರಿಷತ್ತು ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.