‘ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ?’; ಕಮಲ್ ಹಾಸನ್ಗೆ ಕೋರ್ಟ್ ತರಾಟೆ
Thug Life Movie: ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾದ ಕರ್ನಾಟಕದಲ್ಲಿನ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಕನ್ನಡ ಭಾಷೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಕೋರ್ಟ್ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕ್ಷಮೆಯಾಚನೆ ಮಾಡದೆ ಪೊಲೀಸ್ ರಕ್ಷಣೆ ಕೋರಿರುವುದನ್ನು ಕೋರ್ಟ್ ಖಂಡಿಸಿದೆ.

ಕಮಲ್ ಹಾಸನ್ ಅವರ ನಟನೆಯ ‘ಥಗ್ ಲೈಫ್’ (Thug Life Movie) ಸಿನಿಮಾಗೆ ಕರ್ನಾಟಕದಲ್ಲಿ ಬಿಡುಗಡೆ ಆಗಲು ಅಡಚಣೆ ಉಂಟಾಗಿದೆ. ಕನ್ನಡದ ಬಗ್ಗೆ ತಪ್ಪು ಹೇಳಿಕೆ ನೀಡಿ ಆ ಬಳಿಕ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹಾಸನ್ ವಾದ ಮಾಡಿದ್ದೇ ಇದಕ್ಕೆ ಕಾರಣ. ಈ ಮಧ್ಯೆ ‘ಥಗ್ ಲೈಫ್ ‘ ರಿಲೀಸ್ಗೆ ಭದ್ರತೆ ಕೋರಿ ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಅರ್ಜಿಯ ವಿಚಾರಣೆ ಇಂದು (ಜೂನ್ 3) ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ. ಈ ವೇಳೆ ಕಮಲ್ ಹಾಸನ್ಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಧ್ಯಾಹ್ಹ 2.30ರವರೆಗೆ ಕಮಲ್ ಹಾಸನ್ ವಕೀಲರಿಗೆ ಗಡುವು ನೀಡಿದ್ದು, ನಿಲುವು ತಿಳಿಸುವಂತೆ ಕೋರ್ಟ್ ಸೂಚಿಸಿದೆ.
‘ಸಿ. ರಾಜಗೋಪಾಲಚಾರಿ ಇದೇ ರೀತಿಯ ಹೇಳಿಕೆ ನೀಡಿದ್ದರು. ನಂತರ ಅವರು ಕ್ಷಮೆಯಾಚನೆ ಮಾಡಿದ್ದರು. ಆದರೆ ಕಮಲಹಾಸನ್ ಯಾವುದೇ ಕ್ಷಮೆಯಾಚನೆ ಮಾಡಿಲ್ಲ. ಅವರು ಸಿನಿಮಾ ಮಾಡಿರೋದು ವಾಣಿಜ್ಯ ಉದ್ದೇಶದಿಂದ. ಈಗ ತಪ್ಪು ಮಾಡಿದ್ದಾರೆ. ಅವರು ಮಾಡಿದ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೇ’ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಕಮಲ್ ಅವರ ವಕೀಲ ಧ್ಯಾನ್ ಚಿನ್ನಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿತು.
‘ನಿಮ್ಮ ಹೇಳಿಕೆಯಿಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ನೀವು ನಿಮ್ಮ ಹೇಳಿಕೆಯನ್ನು ನಿರಾಕರಿಸಿಲ್ಲ, ಒಪ್ಪಿಕೊಂಡಿದ್ದೀರಾ. ಆದರೆ ಕ್ಷಮೆಯಾಚನೆ ಮಾಡಲು ಸಿದ್ಧರಿಲ್ಲ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಬಯಸುತ್ತಿದ್ದೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ. ಆಗ ಸಮಸ್ಯೆಯೇ ಇರುವುದಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನಿಸಿದ ಫ್ಯಾನ್ಸ್
ಕ್ಷಮೆ ಕೇಳದಿದ್ದರೆ ಬಿಡಿ
‘ಯಾರೊಬ್ಬರ ಭಾವನೆಯ ಮೇಲೆ ಸವಾರಿ ಮಾಡಬಾರದು. ಆದೇಶ ಹೊರಡಿಸಲು ನಮಗೆ ಸಮಸ್ಯೆ ಇಲ್ಲ. ಕ್ಷಮೆ ಕೇಳಲಾಗದಿದ್ದರೆ ಬಿಡಿ. ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು’ ಎಂದು ಕಮಲ್ ಹಾಸನ್ ವಕೀಲರಿಗೆ ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ.
ಗಡುವು ನೀಡಿದ ಕೋರ್ಟ್.
‘ಅಗತ್ಯಕ್ಕಿಂತ ಹೆಚ್ಚಿಗೆ ಈ ವಿಷಯವನ್ನು ಬೆಳಸಲಾಗಿದೆ ಎಂದು ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಾಡಿದ್ದಾರೆ. ಸದ್ಯ ಕೋರ್ಟ್ ವಿಚಾರಣೆಯನ್ನು 2.30ಕ್ಕೆ ನಿಗದಿ ಮಾಡಿದೆ. ಈ ವೇಳೆ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:18 pm, Tue, 3 June 25








