21 ದಿನಗಳ ಬಳಿಕ ರಾಕೇಶ್ ಪೂಜಾರಿ ಮನೆಗೆ ಕೊನೆಗೂ ರಿಷಬ್ ಶೆಟ್ಟಿ ಭೇಟಿ
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟ ರಾಕೇಶ್ ಪೂಜಾರಿ ಅವರು ಅಭಿನಯಿಸುತ್ತಿದ್ದರು. ಆದರೆ ಹೃದಯಾಘಾತದಿಂದ ನಿಧನರಾದ ರಾಕೇಶ್ ಅವರ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಬಂದಿರಲಿಲ್ಲ. 21 ದಿನಗಳು ಕಳೆದ ನಂತರ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ರಾಕೇಶ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಕಿರುತೆರೆ ಮತ್ತು ಸಿನಿಮಾಗಳಲ್ಲಿ ಖ್ಯಾತಿ ಗಳಿಸಿದ್ದ ನಟ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿ 21 ದಿನಗಳು ಕಳೆದಿವೆ. ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಮನೆಮಾತಾಗಿದ್ದ ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಕಂಬನಿ ಮಿಡಿದರು. ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದಲ್ಲಿ ಕೂಡ ರಾಕೇಶ್ ಪೂಜಾರಿ ಅವರು ನಟಿಸುತ್ತಿದ್ದರು. ಆದರೆ ರಾಕೇಶ್ ನಿಧನರಾದಾಗ ಈ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆ ಆಗಿತ್ತು. ಈಗ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ.
ರಾಕೇಶ್ ಪೂಜಾರಿ ನಿಧನರಾಗಿ 21 ದಿನಗಳು ಕಳೆದ ಬಳಿಕ ಅವರ ಮನೆಗೆ ರಿಷಬ್ ಶೆಟ್ಟಿ ಬಂದಿದ್ದಾರೆ. ಇಂದು (ಜೂನ್ 2) ರಾಕೇಶ್ ಪೂಜಾರಿ ಕುಟುಂಬಸ್ಥರಿಗೆ ರಿಷಬ್ ಶೆಟ್ಟಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಸಾಥ್ ನೀಡಿದರು.ಉಡುಪಿಯ ಹೂಡೆಯಲ್ಲಿ ರಾಕೇಶ್ ಪೂಜಾರಿ ಮನೆ ಇದೆ. ಅಲ್ಲಿ ರಾಕೇಶ್ ತಂಗಿ ಮತ್ತು ತಾಯಿ ವಾಸವಾಗಿದ್ದಾರೆ. ಅವರಿಗೆ ರಿಷಬ್ ಶೆಟ್ಟಿ ಸಾಂತ್ವನ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ ಹಾಗೂ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರಿಗೂ ಒಂದು ವಿಶೇಷ ಪಾತ್ರ ನೀಡಲಾಗಿತ್ತು. ಶೂಟಿಂಗ್ನಲ್ಲಿ ಕೂಡ ಅವರು ಪಾಲ್ಗೊಂಡಿದ್ದರು. ಈ ಸಿನಿಮಾ ಮೇಲೆ ಅವರು ಸಖತ್ ಭರವಸೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ನಿಧನರಾದರು.
ಆಪ್ತರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ರಾಕೇಶ್ ಪೂಜಾರಿ ಅವರಿಗೆ ಹೃದಯಾಘಾತ ಸಂಭವಿಸಿತು. ಅವರ ಸಾವಿನ ಸುದ್ದಿ ಕೇಳಿ ಚಿತ್ರರಂಗಕ್ಕೆ ಶಾಕ್ ಆಯಿತು. ಆದರೆ ಅಂತ್ಯಕ್ರಿಯೆಗೆ ರಿಷಬ್ ಶೆಟ್ಟಿ ಬಂದಿರಲಿಲ್ಲ. ಅಂಥ ಸಂದರ್ಭದಲ್ಲೂ ರಿಷಬ್ ಶೆಟ್ಟಿ ಭೇಟಿ ನೀಡಲಿಲ್ಲ ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟೀಕೆ ಕೇಳಿಬಂದಿತ್ತು. ಅಂತಿಮವಾಗಿ ಈಗ ಅವರು ರಾಕೇಶ್ ಪೂಜಾರಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಹಾಸ್ಯ ಪಾತ್ರಗಳ ಮೂಲಕ ರಾಕೇಶ್ ಪೂಜಾರಿ ಅವರು ಎಲ್ಲರ ಮನ ಗೆದ್ದಿದ್ದರು. ‘ಕಾಮಿಡಿ ಕಿಲಾಡಿಗಳು’ ಶೋನಿಂದ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿತ್ತು. ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಕನಸು ಅವರದ್ದಾಗಿತ್ತು. ಆದರೆ ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.