Kichcha Sudeep: ಕಾಂಗ್ರೆಸ್​ ಸೇರ್ತಾರಾ ಸುದೀಪ್​​? ಕಿಚ್ಚ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್

ಕಾಂಗ್ರೆಸ್ ಪರ ಪ್ರಚಾರಕ್ಕೆ ಬನ್ನಿ ಅಂತಾ ನಟ ಸುದೀಪ್​​ಗೆ ಕರೆದಿಲ್ಲ. ಅವರಿಗೆ ರಾಜಕೀಯಕ್ಕೆ ಬರುವಂತೆ ನಾನು ಆಹ್ವಾನ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು.

Kichcha Sudeep: ಕಾಂಗ್ರೆಸ್​ ಸೇರ್ತಾರಾ ಸುದೀಪ್​​? ಕಿಚ್ಚ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಟ ಸುದೀಪ್
Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2023 | 5:02 PM

ಕೋಲಾರ: ನಟ ಕಿಚ್ಚ ಸುದೀಪ್ (Kichcha Sudeep) ಅವರು ಸ್ಯಾಂಡಲ್​​ವುಡ್​ನ ಬಹು ಬೇಡಿಕೆಯ ನಟ. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ರಾಜಕೀಯಕ್ಕೆ ಬರುತ್ತಾರೆ, ಅದರಲ್ಲೂ ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಕಿಚ್ಚ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Dk Shivakumar) ಅವರನ್ನು ಭೇಟಿ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತಾಗಿ ಫೋಟೋಗಳು ಸಹ ಹರಿದಾಡುತ್ತಿವೆ. ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆಂದು ತಿಳಿದುಬಂದಿಲ್ಲ. ಸದ್ಯ ಈ ವಿಚಾರವಾಗಿ ಜಿಲ್ಲೆಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ​ನಟ ಸುದೀಪ್ ಜೊತೆ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಚಿತ್ರರಂಗದ ಸಮಸ್ಯೆ ಬಗ್ಗೆ ಪ್ರಣಾಳಿಕೆ ಸಿದ್ಧಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಅಂಬರೀಶ್, ಪುನೀತ್, ವಿಷ್ಣುವರ್ಧನ್ ರೀತಿ ಸುದೀಪ್ ಉತ್ತಮ ನಟ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬನ್ನಿ ಅಂತಾ ನಟ ಸುದೀಪ್​​ಗೆ ಕರೆದಿಲ್ಲ. ಅವರಿಗೆ ರಾಜಕೀಯಕ್ಕೆ ಬರುವಂತೆ ನಾನು ಆಹ್ವಾನ ನೀಡಿಲ್ಲ. ಅನೇಕ ವಿಚಾರವಾಗಿ ಸಲಹೆ ಪಡೆಯಲು ಸುದೀಪ್ ಭೇಟಿಯಾಗಿದ್ದೇನೆ. ಕೊರೊನಾ ಸಂದರ್ಭದಲ್ಲಿ ಚಿತ್ರರಂಗದ ನೆರವಿಗೆ ಸರ್ಕಾರ ಬಂದಿಲ್ಲ. ಮೊದಲಿನಿಂದಲೂ ನಟ ಸುದೀಪ್ ನನಗೆ ಒಳ್ಳೆಯ ಸ್ನೇಹಿತ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್-ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಭೇಟಿ; ಇಲ್ಲಿದೆ ಕಾರಣ

ಸುದೀಪ್ ಪಕ್ಷಕ್ಕೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ

ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸುದೀಪ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ನಮ್ಮ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುವುದು ಅವರಿಗೂ ಹಾಗೂ ಹೈಕಮಾಂಡ್​​ಗೂ ಬಿಟ್ಟ ವಿಚಾರ. ಪಕ್ಷ ಸೇರ್ಪಡೆ ಆದರೆ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ನಾನು ಸುದೀಪ್ ಅವರನ್ನು ಸದ್ಯ ಭೇಟಿಯಾಗಿಲ್ಲ. ಈ ಕುರಿತು ಮಾತುಕತೆ ಮಾಡಿಲ್ಲ. ರಾಜ್ಯದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರುವುದಕ್ಕೆ ಸ್ವಲ್ಪ ಯೋಚನೆ ಮಾಡುತ್ತಾರೆ.

ಆಂಧ್ರ ತಮಿಳುನಾಡು ತೆಲಂಗಾಣದಲ್ಲಿ ಆದಂತೆ ನಮ್ಮಲ್ಲಿ ಆಗುವುದಿಲ್ಲ. ಆ ರಾಜ್ಯಗಳ ತರಹ, ಬೇರೆ ಪಕ್ಷದವರ ತರಹ ನಮ್ಮ ಪಕ್ಷ ಸ್ಟಾರ್​​ಗಳನ್ನು ಕರೆತಂದು ಯಾವತ್ತೂ ಪ್ರಚಾರ ಮಾಡಿಲ್ಲ. ಆದರೆ ಸುದೀಪ್ ಬಂದು ಪ್ರಚಾರದಲ್ಲಿ ತೊಡಗಿದರೆ ಸ್ವಾಗತ ಮಾಡ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Congress Bus Yatra: ಡಿಕೆ ಶಿವಕುಮಾರ್ ಆಂಡ್​ ಟೀಂ ಮುಳಬಾಗಿಲು, ಕೆಜಿಎಫ್​​ ಭೇಟಿ

ಸುದೀಪ್​ ಏನು ತೀರ್ಮಾನ ಮಾಡ್ತಾರೋ ನೋಡೋಣ: ಸುಧಾಕರ್

ನಟ ಸುದೀಪ್​, ಡಿ.ಕೆ.ಶಿವಕುಮಾರ್​ ಭೇಟಿ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್, ನನ್ನ ಪ್ರಕಾರ ನಟ ಸುದೀಪ್​ ಕಾಂಗ್ರೆಸ್​ ಪಕ್ಷಕ್ಕೆ ಹೋಗುವುದಿಲ್ಲ. ಸುದೀಪ್ ರಾಜ್ಯದ ಉತ್ತಮ ನಾಯಕ ನಟ. ಅವರು​ ಯಾವುದೇ ಪಕ್ಷ ಸೇರಿದರೂ ಆ ಪಕ್ಷಕ್ಕೆ ಒಳ್ಳೆಯದಾಗುತ್ತೆ. ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್​ ಏನು ತೀರ್ಮಾನ ಮಾಡ್ತಾರೋ ನೋಡೋಣ ಎಂದು ಹೇಳಿದರು.

ಕಾಂಗ್ರೆಸ್​​ನಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ: ಡಿ.ಕೆ.ಶಿವಕುಮಾರ್ 

ಇನ್ನು ಪಕ್ಷದಲ್ಲಿ ಕೆ.ಹೆಚ್.ಮುನಿಯಪ್ಪಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್​​ನಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿಯವರು ಕುಚೇಷ್ಟೆ ಮಾಡಿಕೊಂಡು ಬೋಗಸ್ ಮಾಡ್ತಿದ್ದಾರೆ. ದಿನಕ್ಕೊಂದು ವಿಡಿಯೋ, ಪತ್ರ ಹಾಕಿಕೊಂಡು ಮಿಸ್ ಗೈಡ್ ಮಾಡ್ತಿದ್ದಾರೆ. ಪತ್ರದಲ್ಲಿರುವ ಸಹಿ ಅದು ಸಿದ್ದರಾಮಯ್ಯನವರದ್ದು ಅಲ್ಲ. ಈ ಬಗ್ಗೆ ಸಿದ್ದರಾಮಯ್ಯ ದೂರು ದಾಖಲು ಮಾಡಿದ್ದಾರೆ ಎಂದು ಪ್ರಜಾಧ್ವನಿ ಸಮಾವೇಶ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:52 pm, Fri, 3 February 23