ಮೈದಾನದಲ್ಲೇ ಎದುರಾಳಿ ಜೊತೆ ವಾಗ್ವಾದಕ್ಕೆ ಇಳಿದ ಸುದೀಪ್​; ಸಮಾಧಾನ ಮಾಡಲು ದೊಡ್ಡ ಗ್ಯಾಂಗೇ ಬರಬೇಕಾಯ್ತು

ಕಿಚ್ಚ ಸುದೀಪ್ ಅವರು ಸಿಸಿಎಲ್ ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ವೈರಲ್ ಆಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಸುದೀಪ್ ಅವರನ್ನು ಸಮಾಧಾನಪಡಿಸಲು ತಂಡವೇ ಮಧ್ಯಪ್ರವೇಶಿಸಬೇಕಾಯಿತು. ಆದರೂ, ನಂತರ ಅವರು ಎದುರಾಳಿ ತಂಡದ ಆಟಗಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿದ್ದಾರೆ.

ಮೈದಾನದಲ್ಲೇ ಎದುರಾಳಿ ಜೊತೆ ವಾಗ್ವಾದಕ್ಕೆ ಇಳಿದ ಸುದೀಪ್​; ಸಮಾಧಾನ ಮಾಡಲು ದೊಡ್ಡ ಗ್ಯಾಂಗೇ ಬರಬೇಕಾಯ್ತು
ಸುದೀಪ್

Updated on: Feb 23, 2025 | 11:35 AM

ಕಿಚ್ಚ ಸುದೀಪ್ ಅವರು ಕ್ರಿಕೆಟ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಈ ಕಾರಣದಿಂದಲೇ ಅವರು ಸಿಸಿಎಲ್​ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಈಗ ಸುದೀಪ್ ಅವರು ಸಿಸಿಎಲ್ ಪಂದ್ಯದ ವೇಳೆ ಎದುರಾಳಿ ತಂಡದ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ನಡೆದಿದೆ. ಅವರನ್ನು ಸಮಾಧಾನಿಸಲು ಇಡೀ ತಂಡವೇ ಬರಬೇಕಾದ ಅನಿವಾರ್ಯತೆ ಬಂತು. ಸಿಟ್ಟು ಇಳಿದ ಬಳಿಕ ಅವರು ಎದುರಾಳಿ ತಂಡಗಳ ಜೊತೆ ಆತ್ಮೀಯವಾಗಿ ವರ್ತಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಪಂಜಾಬ್ ವಿರುದ್ಧದ ಪಂದ್ಯ

ಪಂಜಾಬ್ ದೆ ಶೇರ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಮಧ್ಯೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡ ಕೇವಲ 2 ರನ್​ಗಳ ಅಂತರದಲ್ಲಿ ಸೋತಿದೆ.  ಈ ರೋಚಕ ಪಂದ್ಯದಲ್ಲಿ ಸುದೀಪ್ ಹಾಗೂ ಪಂಜಾಬ್ ದೆ ಶೇರ್ ತಂಡಗಳ ಮಧ್ಯೆ ಕಿರಿಕ್ ಆಗಿದ್ದು ಕಂಡು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಯಾರ ಜೊತೆ

ಪಂಜಾಬ್ ಪರ ಬ್ಯಾಟಿಂಗ್ ಮಾಡುತ್ತಿದ್ದ ನಿಂಜಾ ಎನ್​ಜೆ ಹಾಗೂ ಕೀಪರ್ ಸುದೀಪ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಸುದೀಪ್ ಅವರನ್ನು ಸಮಾಧಾನ ಮಾಡಲು ಕರ್ನಾಟಕ ಬುಲ್ಡೋಜರ್ಸ್​ನ ಇಡೀ ತಂಡವೇ ಬರಬೇಕಾಯಿತು. ರೇಗಾಡುತ್ತಾ ಬಂದ ನಿಂಜಾಗೆ ಸುದೀಪ್ ಅವರು ಮಾತಿನ ಚಾಟಿ ಬೀಸಿದ್ದಾರೆ. ಆ ಬಳಿಕ ಇಡೀ ಕರ್ನಾಟಕ ತಂಡ ಒಗ್ಗಟ್ಟಿನಿಂದ ನಿಂಜಾ ವಿರುದ್ಧ ಮಾತಿಗೆ ಇಳಿದಿದೆ. ಅಂಪೈಯರ್ಸ್​​ಗಳು ಪರಿಸ್ಥಿತಿ ತಿಳಿ ಗೊಳಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ‘ವಾಲಿ’ ಸಿನಿಮಾ ವೇಳೆ ನಡೆದ ಘಟನೆಯಿಂದ ಕಣ್ಣೀರು ಹಾಕಿದ್ದ ಸುದೀಪ್ 

ಶೇಕ್ ಹ್ಯಾಂಡ್

ಸುದೀಪ್ ಅವರು ಯಾರ ವಿರುದ್ಧ ಎಷ್ಟೇ ಸಿಟ್ಟನ್ನು ಇಟ್ಟುಕೊಂಡರೂ ಅದನ್ನು ಹೆಚ್ಚು ಹೊತ್ತು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅದಕ್ಕೆ ಈ ಪಂದ್ಯದಲ್ಲಿ ನಡೆದ ಘಟನೆಯೇ ಸಾಕ್ಷಿ. ನಿಂಜಾ ವಿರುದ್ಧ ಅವರು ಅಷ್ಟು ಸಿಟ್ಟು ಮಾಡಿಕೊಂಡರೂ ಪಂದ್ಯ ಮುಗಿದ ಬಳಿಕ ಹೋಗಿ ನಿಂಜಾಗೆ ಶೇಕ್​ ಹ್ಯಾಂಡ್ ಮಾಡಿದ್ದಾರೆ. ನಿಂಜಾನ ಅಪ್ಪಿಕೊಂಡು ನಗು ಮೊಗದಿಂದ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Sun, 23 February 25