ಸುಮಲತಾ ಅಂಬರೀಶ್ ನೋಡಿ ಕಲಿ: ಪವನ್ ಕಲ್ಯಾಣ್​ ವಿರುದ್ಧ ಕೊಡಲಿ ನಾನಿ ಬೆಂಕಿ

|

Updated on: Jun 18, 2023 | 9:26 PM

Pawan Kalyan: ನಟ, ರಾಜಕಾರಣಿ ಪವನ್ ಕಲ್ಯಾಣ್, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ನೋಡಿ ಕಲಿಯಬೇಕಂತೆ! ಏಕೆ? ಹೀಗೆ ಹೇಳಿದ್ದು ಯಾರು?

ಸುಮಲತಾ ಅಂಬರೀಶ್ ನೋಡಿ ಕಲಿ: ಪವನ್ ಕಲ್ಯಾಣ್​ ವಿರುದ್ಧ ಕೊಡಲಿ ನಾನಿ ಬೆಂಕಿ
ಪವನ್ ಕಲ್ಯಾಣ್-ಕೊಡಲಿ ನಾನಿ
Follow us on

ನಟ, ಜನಸೇನಾ (Jana Sena) ರಾಜಕೀಯ ಪಕ್ಷ ಸಂಸ್ಥಾಪಕ ಪವನ್ ಕಲ್ಯಾಣ್ (Pawan Kalyan) ವಾರಾಹಿ ಯಾತ್ರೆ ಆರಂಭಿಸಿದ್ದು, ಹೋದಲ್ಲೆಲ್ಲ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಆಡಳಿತ ಪಕ್ಷ ವೈಸಿಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಸಿನಿಮಾ ಶೈಲಿಯಲ್ಲಿಯೇ ಮಾಸ್ ಡೈಲಾಗ್​ಗಳನ್ನು ಹೊಡೆಯುತ್ತಿದ್ದಾರೆ. ಪವನ್​ರ ಮಾಸ್ ಡೈಲಾಗ್​ಗಳಿಗೆ ವೈಸಿಪಿಯ ಸದಸ್ಯರು ಸಹ ಪ್ರತ್ಯುತ್ತರ ನೀಡುತ್ತಿದ್ದಾರೆ. ಪವನ್​ರ ವೀರಾವೇಶದ ಭಾಷಣಕ್ಕೆ ಪ್ರತ್ಯುತ್ತರ ನೀಡಿರುವ ಆಂಧ್ರ ಪ್ರದೇಶ ಸಚಿವ ಕೊಡಲಿ ನಾನಿ, ಪವನ್ ಕಲ್ಯಾಣ್, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.

ಸಿಎಂ ಜಗನ್ ಸಹ ಹಾಜರಿದ್ದ ಗುಡಿವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಲಿ ನಾನಿ, ”ಕಳೆದ ಮೂರು ದಿನಗಳಿಂದ ಒಬ್ಬ ಯಾತ್ರೆ ಹೊರಟಿದ್ದಾನೆ. ಅವನೇ ಪವನ್ ಕಲ್ಯಾಣ್ ವಿಧಾನಸಭೆಗೆ ಪ್ರವೇಶಿಸಿಯೇ ತೀರುತ್ತೇನೆ ಧಮ್ ಇದ್ದರೆ ನನ್ನನ್ನು ತಡಿ ಎಂದು ನಿಮಗೆ (ಸಿಎಂ ಜಗನ್) ಸವಾಲು ಹಾಕಿದ್ದಾನೆ. ನೀವು ಅದನ್ನೆಲ್ಲ ಗಮನಿಸಿರುವುದಿಲ್ಲ ಬಿಡಿ. ಆದರೆ ಅವನ ಹುಚ್ಚುತನ ನೋಡಿ, ಅವನು ಪಕ್ಷ ಸ್ಥಾಪಿಸಿದ್ದು, ಚಂದ್ರಬಾಬು ನಾಯ್ಡು ಹಾಗೂ ಇನ್ನಿತರರ ಜೊತೆ ಕೈಜೋಡಿಸಿದ್ದು ಜನಗಳಿಗಾಗಿ ಅಲ್ಲ ಬದಲಿಗೆ ಅವನು ಗೆದ್ದು ವಿಧಾನಸಭೆ ಪ್ರವೇಶಿಸಲು ಮಾತ್ರ” ಎಂದಿದ್ದಾರೆ.

”ಮಹಾರಾಷ್ಟ್ರದಲ್ಲಿ ಒಬ್ಬ ನಟಿ ಇದ್ದಾರೆ ನವನೀತ್ ಕೌರ್ ಅವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಹಾಗೆಯೇ ನೆರೆಯ ಕರ್ನಾಟಕದಲ್ಲಿ ಸುಮಲತಾ ಇದ್ದಾರೆ ಹಳೆಯ ನಟಿ ಅವರೂ ಸಹ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅವರಿಬ್ಬರನ್ನೂ ನೋಡಿ ಪವನ್ ಕಲ್ಯಾಣ್ ಕಲಿಯಬೇಕು. ವಿಧಾನಸಭೆ ಪ್ರವೇಶಿಸಬೇಕೆಂದರೆ ಪಕ್ಷೇತರವಾಗಿ ಸ್ಪರ್ಧಿಸು, ಅದನ್ನು ಬಿಟ್ಟು ಹದಿನಾರು ಪಕ್ಷದೊಂದಿಗೆ ಕೈ ಜೋಡಿಸಿ ನನ್ನನ್ನು ಸೋಲಿಸಿರಿ ನೋಡೋಣ ಅನ್ನುವುದಲ್ಲ” ಎಂದು ಹರಿಹಾಯ್ದಿದ್ದಾರೆ ಕೊಡಲಿ ನಾನಿ.

ಇದನ್ನೂ ಓದಿ:ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟ ನಾನೆಂದ ಪವನ್ ಕಲ್ಯಾಣ್: ಪವರ್​ಸ್ಟಾರ್ ಸಂಭಾವನೆ ಎಷ್ಟು?

”ಅವನ ಮಾತಿನಲ್ಲೇ ಅವನ ಉದ್ದೇಶ ಅರ್ಥವಾಗುತ್ತದೆ. ಪವನ್ ಕಲ್ಯಾಣ್ ಪಾರ್ಟಿ ಕಟ್ಟಿರುವುದು, ಜನಗಳನ್ನು ಹಿಂದಿಕ್ಕಿಕೊಂಡು ಯಾತ್ರೆ ಮಾಡುತ್ತಿರುವುದು ಚಂದ್ರಬಾಬು ನಾಯ್ಡು ಹಾಗೂ ಇತರ ಪಕ್ಷಗಳ ಜೊತೆ ಕೈ ಜೋಡಿಸಿರುವುದು ಜನರಿಗಾಗಿ ಅಲ್ಲ ಅವನ ಸ್ವಂತ ಆಸೆಗಾಗಿ. ಸಿಎಂ ಆಗಲು ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾನೆ. ಪವನ್​ಗೆ ಶಾಸಕ ಆಗುವ ಆಸೆ, ಚಂದ್ರಬಾಬು ನಾಯ್ಡುಗೆ ವಿಪಕ್ಷ ನಾಯಕ ಆಗುವ ಆಸೆ. ಯಾವುದು ಏನೇ ಆಗಲಿ ಜಗನ್ ಅವರನ್ನು ಸಿಎಂ ಸ್ಥಾನದಿಂದ ಕದಲಿಸುವ ಶಕ್ತಿ ಈ ರಾಜ್ಯದಲ್ಲಿ ಮಾತ್ರವಲ್ಲ ಇಡೀಯ ದೇಶದಲ್ಲೇ ಯಾರಿಗೂ ಇಲ್ಲ” ಎಂದಿದ್ದಾರೆ ಕೊಡಲಿ ನಾನಿ.

ನವನೀತ್ ಕೌರ್ ಮೂಲತಃ ಮಹಾರಾಷ್ಟ್ರದವರಾದರೂ ಅತಿ ಹೆಚ್ಚು ನಟಿಸಿರುವುದು ತೆಲುಗು ಸಿನಿಮಾಗಳಲ್ಲಿ. ಕನ್ನಡದ ಒಂದು ಸಿನಿಮಾದಲ್ಲಿ ಸಹ ನಟಿಸಿರುವ ನವನೀತ್ ಕೌರ್ ಮಹರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಗೆದ್ದಿದ್ದಾರೆ. ಇನ್ನು ನಟಿ ಸುಮಲತಾ ಅಂಬರೀಶ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ನಟ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದಾರೆ. ಈಗ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ