ಹಿರಿಯ ಗಾಯಕಿ ಆಶಾ ಭೋಂಸ್ಲೆ ಅವರು ತಮ್ಮ ದಿವಂಗತ ಸಹೋದರಿ ಲತಾ ಮಂಗೇಶ್ಕರ್ ಅವರೊಂದಿಗಿನ ಅಪರೂಪದ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತ ರತ್ನ ಪುರಸ್ಕೃತರು ಭಾನುವಾರ ನಿಧನ ಹೊಂದಿದ್ದು, ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅವರಿಬ್ಬರ ಬಾಲ್ಯದ ಚಿತ್ರವನ್ನು ಹಂಚಿಕೊಂಡ ಆಶಾ, ನಮ್ಮ ಬಾಲ್ಯದ ದಿನಗಳು ಎಷ್ಟು ಅದ್ಭುತ ದೀದಿ ಮತ್ತು ನಾನು ಎಂದು ಬರೆದುಕೊಂಡಿದ್ದಾರೆ. ಪುಟ್ಟ ಆಶಾ ಅವರು ಪೀಠದ ಮೇಲೆ ಕುಳಿತಿರುವುದು ಮತ್ತು ಅವರ ಪಕ್ಕದಲ್ಲಿ ನಿಂತಿರುವ ಹಿರಿಯ ಲತಾ ಅವರು ಕೌಟುಂಬಿಕ ಚಿತ್ರಕ್ಕಾಗಿ ಪೋಸ್ ನೀಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.
ಈ ಮುದ್ದಾದ ಜೋಡಿಗೆ ನಟ ಹೃತಿಕ್ ರೋಷನ್ ಹೃದಯದ ಚಿತ್ರವನ್ನು ಕಮೆಂಟ್ ಮಾಡಿದ್ದಾರೆ. ಲತಾ ಅವರ ದೂರದ ಸಂಬಂಧಿಯಾಗಿರುವ ಸಿದ್ದಾಂತ್ ಕಪೂರ್, ಲವ್ ಯೂ ಅಜಿ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದು, ಲೆಜೆಂಡ್‌ಗಳು ಎಂದಿಗೂ ನಮ್ಮನ್ನ ಅಗಲುವುದಿಲ್ಲ. ಅವರು ಸದಾ ನಮ್ಮೊಂದಿಗೆ ಇರುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿದ್ದು, ಆಶಾ ಅವರಿಗೆ ಮೇಡಂ ಟೇಕ್ ಕೇರ್ ಆ್ಯಂಡ್ ಸ್ಟ್ರಾಂಗ್ ಇರಿ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ಲತಾ ಅವರ ಪ್ರಸಿದ್ಧ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಆಶಾ ಹೆಚ್ಚಿನ ಸಮಯ ಲತಾ ಅವರ ಪಕ್ಕದಲ್ಲಿದ್ದರು. ಅವರು ಸಾಯುವ ಒಂದು ದಿನ ಮೊದಲು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದರು. ಆಸ್ಪತ್ರೆಯಿಂದ ಆಕೆಯ ಪಾರ್ಥಿವ ಶರೀರ ಬಂದಾಗ ಆಕೆಯ ನಿವಾಸ ಪ್ರಭು ಕುಂಜ್‌ಗೆ ಆಗಮಿಸಿದ್ದರು. ಅನುಪಮ್ ಖೇರ್ ಭಾನುವಾರ ಆಶಾ ಭೋಂಸ್ಲೆ ಅವರನ್ನು ಲತಾ ಅವರ ಮನೆಯಲ್ಲಿ ಭೇಟಿಯಾಗಿದರು. ಈ ಕುರಿತು ಒಂದು ಚಿತ್ರವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದು ದುಃಖದ ಹೃದಯವನ್ನು ಮರೆಮಾಡುವ ದೊಡ್ಡ ನಗು ಎಂದು ಬರೆದುಕೊಂಡಿದ್ದಾರೆ. ಭಾನುವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಶಾರುಖ್ ಖಾನ್, ರಣಬೀರ್ ಕಪೂರ್, ಅಮೀರ್ ಖಾನ್, ಶ್ರದ್ಧಾ ಕಪೂರ್, ಸಚಿನ್ ತೆಂಡೂಲ್ಕರ್, ಅನುರಾಧಾ ಪೊದ್ವಾಲ್, ಶಂಕರ್ ಮಹಾದೇವನ್, ವಿದ್ಯಾ ಬಾಲನ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ವಿಧಿಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ;
‘ಲತಾ ಮಂಗೇಶ್ಕರ್ ನಮಗೆ ದೇವರು ಇದ್ದಂತೆ’: ಲತಾಜೀ ಬಗೆಗಿನ ನೆನಪು ಮೆಲುಕು ಹಾಕಿದ ವಾಣಿ ಹರಿಕೃಷ್ಣ