Lata Mangeshkar: ಲತಾ ಮಂಗೇಶ್ಕರ್ ಹಾಡಿದ್ದ ಆ ಒಂದು ಗೀತೆ ಕೇಳಿ ನೆಹರೂ ಕಣ್ಣೀರು ಹಾಕಿದ್ದರು!

| Updated By: shivaprasad.hs

Updated on: Feb 06, 2022 | 10:55 AM

Lata Mangeshkar Unknown Facts: 1962ರ ಭಾರತ-ಚೀನಾ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ ಪ್ರದೀಪ್ ಅವರು ಬರೆದಿದ್ದ ಈ ಗೀತೆಯನ್ನು ಲತಾ ಮಂಗೇಶ್ಕರ್ ಮಾಜಿ ಪ್ರಧಾನಿ ನೆಹರೂ ಮುಂದೆ ಹಾಡಿದ್ದರು. ಆ ಹಾಡನ್ನು ಕೇಳಿ ವೇದಿಕೆಯಲ್ಲೇ ನೆಹರೂ ಕಣ್ಣೀರಿಟ್ಟಿದ್ದರು.

Lata Mangeshkar: ಲತಾ ಮಂಗೇಶ್ಕರ್ ಹಾಡಿದ್ದ ಆ ಒಂದು ಗೀತೆ ಕೇಳಿ ನೆಹರೂ ಕಣ್ಣೀರು ಹಾಕಿದ್ದರು!
ಜವಾಹರಲಾಲ್ ನೆಹರು ಜೊತೆ ಲತಾ ಮಂಗೇಶ್ಕರ್
Follow us on

ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ತಮ್ಮ 8 ದಶಕಗಳ ವೃತ್ತಿ ಜೀವನದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ದಾದಾಸಾಹೇಬ್ ಫಾಲ್ಕೆ, ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಲತಾ ಮಂಗೇಶ್ಕರ್ ಅವರ ಕೋಗಿಲೆ ಧ್ವನಿಗೆ ಮರುಳಾಗದವರೇ ಇಲ್ಲ. ಬಾಲಿವುಡ್​ನ ಬಹುತೇಕ ಎಲ್ಲ ಪ್ರಸಿದ್ಧ ಗಾಯಕರ ಜೊತೆ ಹಾಡಿರುವ ಲತಾ ದೀದಿ 1963ರಲ್ಲಿ ವೇದಿಕೆ ಮೇಲೆ ಹಾಡಿದ್ದ ಆ ಒಂದು ಗೀತೆಯನ್ನು ಕೇಳಿ ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ (Jawaharlal Nehru) ಕಣ್ಣೀರು ಹಾಕಿದ್ದರಂತೆ. ಲತಾ ಮಂಗೇಶ್ಕರ್ ಎಷ್ಟೇ ಗೀತೆಗಳನ್ನು ಹಾಡಿದ್ದರೂ ಆ ದಿನ ಅವರು ವೇದಿಕೆಯ ಮೇಲೆ ಭಾರತೀಯ ಸೈನಿಕರಿಗಾಗಿ ಹಾಡಿದ್ದ ‘ಏ ಮೇರೆ ವತನ್ ಕೆ ಲೋಗೋ’ ಗೀತೆ ಲತಾ ಮಂಗೇಶ್ಕರ್ ಅವರ ಎಲ್ಲ ಹಾಡುಗಳಿಗಿಂತ ಕೊಂಚ ಎತ್ತರದ ಸ್ಥಾನದಲ್ಲಿದೆ.

1963ರ ಜನವರಿ 27ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮುಂದೆ ಲತಾ ಮಂಗೇಶ್ಕರ್ ‘ಏ ಮೇರೆ ವತನ್ ಕೇ ಲೋಗೋ’ ಹಾಡನ್ನು ಹಾಡಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ ಪ್ರದೀಪ್ ಅವರು ಬರೆದಿದ್ದ ಈ ಗೀತೆಯನ್ನು ಲತಾ ಮಂಗೇಶ್ಕರ್ ಮಾಜಿ ಪ್ರಧಾನಿ ನೆಹರೂ ಮುಂದೆ ಹಾಡಿದ್ದರು. ಆ ಹಾಡನ್ನು ಕೇಳಿ ವೇದಿಕೆಯಲ್ಲೇ ನೆಹರೂ ಕಣ್ಣೀರಿಟ್ಟಿದ್ದರು.

1963ರಲ್ಲಿ ಗಣರಾಜ್ಯೋತ್ಸವದ ಮರುದಿನ ದೆಹಲಿಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಕವಿ ಪ್ರದೀಪ್ ರಚಿಸಿದ್ದ ಏ ಮೇರೆ ವತನ್ ಏ ಲೋಗೋ ಹಾಡನ್ನು ಹಾಡಲು ವಿನಂತಿಸಿದಾಗ, ಲತಾ ಮೊದಲು ನಿರಾಕರಿಸಿದರಂತೆ. ಆದರೆ, ಗೀತರಚನೆಕಾರ ಪ್ರದೀಪ್ ಅವರ ಒತ್ತಾಯದ ಮೇರೆಗೆ ಲತಾ ದೀದಿ ಆ ಕಾರ್ಯಕ್ರಮಕ್ಕೂ ಒಂದು ದಿನ ಮೊದಲು ಆ ಹಾಡನ್ನು ಅಭ್ಯಾಸ ಮಾಡಿ ಮರುದಿನ ಹಾಡಿದರು. ಭಾರತಕ್ಕಾಗಿ ಮಡಿದ ಸೈನಿಕರಿಗಾಗಿ ಅರ್ಪಿಸಿದ ಆ ಗೀತೆಯನ್ನು ಲತಾ ಮಂಗೇಶ್ಕರ್ ಭಾವ ತುಂಬಿ ಹಾಡಿದಾಗ ಆ ವೇದಿಕೆಯ ಮೇಲಿದ್ದ ನೆಹರೂ ಕಣ್ಣಂಚು ಒದ್ದೆಯಾಗಿತ್ತು.

ಆ ಕಾರ್ಯಕ್ರಮ ಮುಗಿದ ಬಳಿಕ ಲತಾ ಮಂಗೇಶ್ಕರ್ ಅವರನ್ನು ಕರೆಸಿ ಮಾತನಾಡಿದ್ದ ಜವಾಹರಲಾಲ್ ನೆಹರೂ ‘ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಭಾವುಕರಾಗಿ ಹೇಳಿದ್ದರಂತೆ. ಈಗಲೂ ಏ ಮೇರೆ ವತನ್ ಕೇ ಲೋಗೋ ಬಹಳ ಪ್ರಸಿದ್ಧವಾದ ದೇಶಭಕ್ತಿ ಗೀತೆಯಾಗಿದೆ.

ಇದನ್ನೂ ಓದಿ: 

Lata Mangeshkar Death Live Updates: ಲತಾ ಮಂಗೇಶ್ಕರ್ ನಿಧನ; ದೇಶದಲ್ಲಿ ಎರಡು ದಿನ ಶೋಕಾಚರಣೆ

36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ