ತೆಲುಗು ಚಿತ್ರರಂಗದ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಇಂದು (ಆಗಸ್ಟ್ 22) 66ನೇ ವಸಂತಕ್ಕೆ ಕಾಲಿಡಲಿದ್ದಾರೆ. ಟಾಲಿವುಡ್ನ ಅತ್ಯಂತ ಜನಪ್ರಿಯ ನಟ ಹಾಗೂ ಈಗಲೂ ನಾಯಕನಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, ಆಂಧ್ರಪ್ರದೇಶದ ಮಾಜಿ ಶಾಸಕರೂ ಹೌದು. ನಟನೆಯೊಂದಿಗೆ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ ಹೊಂದಿರುವ ಅವರು, ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯ. ಸಿನಿಮಾದ ಯಾವುದೇ ಹಿನ್ನೆಲೆಯಿರದೇ ಇದ್ದರೂ, ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜನ್ಮ ದಿನದ ಸಂದರ್ಭದಲ್ಲಿ ಮೆಗಾಸ್ಟಾರ್ ಕುರಿತು ಹಲವರಿಗೆ ತಿಳಿಯದ, ಆದರೆ ಕುತೂಹಲ ಭರಿತ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
1. 1 ಕೋಟಿ ರೂಗಳಿಗೂ ಅಧಿಕ ಸಂಭಾವನೆ ಪಡೆದ ಮೊದಲ ತೆಲುಗು ನಟ:
1992ರಲ್ಲಿ ತೆರೆಕಂಡ ‘ಆಪತ್ಬಾಂಧವುಡು’ ಚಿತ್ರಕ್ಕೆ ಚಿರಂಜೀವಿ 1.25 ಕೋಟಿ ರೂ ಸಂಭಾವಾನೆ ಪಡೆದಿದ್ದರು.ಆ ಸಮಯದಲ್ಲಿ ತೆಲುಗಿನ ಮತ್ಯಾವ ಸ್ಟಾರ್ ನಟ ಕೂಡಾ ಇಷ್ಟು ಸಂಭಾವನೆ ಪಡೆಯುತ್ತಿರಲಿಲ್ಲ. ಮತ್ತೂ ಅಚ್ಚರಿಯ ವಿಚಾರವೆಂದರೆ ಆ ಸಮಯದಲ್ಲಿ ಚಿರಂಜೀವಿಯಷ್ಟು ಸಂಭಾವನೆಯನ್ನು ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಕೂಡಾ ಪಡೆಯುತ್ತಿರಲಿಲ್ಲವಂತೆ. ಆಗ ಅಮಿತಾಭ್ ಪಡೆಯುತ್ತಿದ್ದುದು ಒಂದು ಪ್ರಾಜೆಕ್ಟ್ಗೆ 1 ಕೋಟಿಯಾದರೆ, ಚಿರಂಜೀವಿ ಅದಕ್ಕೂ ಹೆಚ್ಚು ಸಂಭಾವನೆ ಪಡೆಯುವ ಅತ್ಯಂತ ಬೇಡಿಕೆಯ ನಟರಾಗಿದ್ದರು.
2. ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಚಿರಂಜೀವಿ:
ಎಲ್ಲಾ ಸರಿಯಾಗಿದ್ದಿದ್ದರೆ ಚಿರಂಜೀವಿ ಹಾಲಿವುಡ್ ಚಿತ್ರರಂಗಕ್ಕೂ ಕಾಲಿಡಡುತ್ತಿದ್ದರು. ‘ದಿ ರಿಟರ್ನ್ ಆಫ್ ದಿ ಥೀಫ್ ಆಫ್ ಬಾಗ್ದಾದ್’ ಎಂಬ ಚಿತ್ರ 1999ರಲ್ಲಿ ಸೆಟ್ಟೇರಿತ್ತು. ಅದರಲ್ಲಿ ಚಿರಂಜೀವಿ ‘ಅಬು’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರ ಕಾರಣಾಂತರಗಳಿಂದ ಮುಂದುವರೆಯಲೇ ಇಲ್ಲ. ಒಂದು ವೇಳೆ ಈ ಚಿತ್ರ ಪೂರ್ಣಗೊಂಡಿದ್ದರೆ ಚಿರಂಜೀವಿ ಹಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿದಂತಾಗುತ್ತಿತ್ತು. ಈ ಚಿತ್ರದ ನಿಲುಗಡೆಗೆ ಕಾರಣ ಇನ್ನೂ ನಿಗೂಡವಾಗಿಯೇ ಇದೆ.
3. ಆಸ್ಕರ್ ಪ್ರಶಸ್ತಿ ಸಮಾರಂಭದ ಗೌರವ:
ಸಿನಿ ರಂಗದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿತರಾದ ದಕ್ಷಿಣ ಭಾರತದ ಮೊದಲ ನಟ ಮೆಗಾಸ್ಟಾರ್ ಚಿರಂಜೀವಿ. ಅವರು 1987ರ ಅಕಾಡೆಮಿ ಅವಾರ್ಡ್ಸ್ಗೆ ಆಹ್ವಾನಿತರಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
4. ಇಂಗ್ಲೀಷ್ಗೆ ಡಬ್ ಆದ ಮೊದಲ ದಕ್ಷಿಣ ಭಾರತೀಯ ಚಿತ್ರ ಚಿರಂಜೀವಿಯವರದ್ದು:
1990ರಲ್ಲಿ ತೆರೆಕಂಡ ‘ಕೊಡಮ ಸಿಂಹಮ್’ ಚಿತ್ರ ಇಂಗ್ಲೀಷ್ಗೆ ಡಬ್ ಆದ ಮೊದಲ ದಕ್ಷಿಣ ಭಾರತೀಯ ಚಿತ್ರ. ಇಂಗ್ಲೀಷ್ನಲ್ಲಿ ‘ಹಂಟರ್ಸ್ ಆಫ್ ದಿ ಇಂಡಿಯನ್ ಟ್ರೆಷರ್’ ಎಂಬ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮೆಗಾಸ್ಟಾರ್ ನಟನೆಯ ‘ಪಸಿವಾಡಿ ಪ್ರಾಣಮ್’ ಹಾಗೂ ‘ಸ್ವಯಂಕೃಷಿ’ ಚಿತ್ರಗಳು ರಷಿಯನ್ ಭಾಷೆಗೆ ಡಬ್ ಆಗಿದ್ದವು. ಈಗಿನ ಕಾಲಘಟ್ಟದಲ್ಲಿ ತಾಂತ್ರಿಕತೆ ಮುಂದುವರೆದಿದ್ದು, ಬಹುತೇಕ ಚಿತ್ರಗಳು ಡಬ್ ಆಗುತ್ತವೆ. ಆದರೆ ಆಗಿನ ಕಾಲದಲ್ಲಿ ಚಿರಂಜೀವಿ ನಟನೆಯ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಡಬ್ ಆಗಿದ್ದು ವಿಶೇಷ.
5. ಬಾಕ್ಸಾಫೀಸ್ನಲ್ಲಿ 10 ಕೋಟಿರೂ ಕಮಾಯಿ ಮಾಡಿದ ಮೊದಲ ತೆಲುಗು ನಟ:
ಚಿರಂಜೀವಿ ನಟನೆಯ 1992ರಲ್ಲಿ ಬಿಡುಗಡೆಯಾದ ‘ಘರನ ಮೊಗುಡು’ ಚಿತ್ರವು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ 10 ಕೋಟಿ ರೂ ಗಳಿಸಿದ ಮೊದಲ ಚಿತ್ರವೆಂಬ ದಾಖಲೆ ಬರೆಯಿತು. ಅದೇ ವರ್ಷ ಇಂಡಿಯಾ ಟುಡೆ ಪತ್ರಿಕೆಯು ಚಿರಂಜೀವಿಯನ್ನು ‘ಬಚ್ಚನ್ಗಿಂತ ದೊಡ್ಡವರು’ ಎಂಬರ್ಥದಲ್ಲಿ ವ್ಯಾಖ್ಯಾನಿಸಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟನೆಂದು ಗುರುತಿಸಿತು.
6. ಅತೀ ಹೆಚ್ಚು ತೆರಿಗೆ ಪಾವತಿಸಿದ್ದಕ್ಕೆ ಸನ್ಮಾನಿತರಾದ ಚಿರಂಜೀವಿ:
2002ರಲ್ಲಿ ಚಿರಂಜೀವಿಯವರಿಗೆ ಭಾರತ ಸರ್ಕಾರದ ವತಿಯಿಂದ ಹಣಕಾಸು ಖಾತೆ ರಾಜ್ಯ ಸಚಿವರು ‘ಸನ್ಮಾನ್ ಅವಾರ್ಡ್’ ನೀಡಿದ್ದರು. ಕಾರಣ, 1999- 2000ದ ಆರ್ಥಿಕ ವರ್ಷದಲ್ಲಿ ಚಿರಂಜೀವಿ ಅತೀ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದರು.
ಇದನ್ನೂ ಓದಿ:
Chiranjeevi Birthday: ಚಿರಂಜೀವಿ ಜನ್ಮದಿನಕ್ಕೆ 153ನೇ ಸಿನಿಮಾ ಟೈಟಲ್ ಅನಾವರಣ; ಗಾಡ್ಫಾದರ್ ಆದ ಮೆಗಾಸ್ಟಾರ್
(Less known facts of Megastar Chiranjeevi Cinema Career are given on his Birthday)