
ಲೋಕೇಶ್ ಕನಗರಾಜ್ (Lokesh Kangaraj) ತಮಿಳಿನ ಸ್ಟಾರ್ ನಿರ್ದೇಶಕ. ಆದರೆ ಇತ್ತೀಚೆಗೆ ಅವರು ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳಿಂದಾಗಿ ಅವರ ಅಭಿಮಾನಿಗಳು ಮಾತ್ರವಲ್ಲದೆ, ತಮಿಳು ಚಿತ್ರರಂಗದ ಕೆಲ ಸ್ಟಾರ್ ನಟರ ಅಭಿಮಾನಿಗಳು ಸಹ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಟೀಕೆ, ನಿಂದನೆಗೆ ಗುರಿ ಆಗುತ್ತಿದ್ದಾರೆ. ‘ಕೈದಿ’, ‘ವಿಕ್ರಂ’ ಸಿನಿಮಾಗಳಿಂದ ಭಾರಿ ಜನಪ್ರಿಯತೆ ಪಡೆದ ಲೋಕೇಶ್ ಕನಗರಾಜ್, ಅದೇ ಕತೆಗಳನ್ನು ಮುಂದುವರೆಸಿ ಅವುಗಳ ಸೀಕ್ವೆಲ್ ಮಾಡುವುದಾಗಿ ಹೇಳಿದ್ದರು. ಆದರೆ ಯಶಸ್ಸು ಸಿಗುತ್ತಲೇ ತಮಿಳು ಹೀರೋಗಳ ಕೈಬಿಟ್ಟು ಬಾಲಿವುಡ್ ನಟರು, ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಹಿಂದೆ ಹೋಗಿದ್ದಾರೆ. ಇದೇ ಕಾರಣಕ್ಕೆ ತಮಿಳು ಸಿನಿಮಾ ಪ್ರೇಮಿಗಳು ಲೋಕೇಶ್ ಅವರನ್ನು ಟೀಕಿಸುತ್ತಿದ್ದಾರೆ.
ಲೋಕೇಶ್ ಅವರು ಪ್ರಾರಂಭ ಮಾಡಿದ ‘ಎಲ್ಸಿಯು’ (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ನಿಂತು ಹೋಗಿದೆ. ಲೋಕೇಶ್ ಅವರು ‘ಕೈದಿ 2’, ‘ವಿಕ್ರಂ 2’, ‘ರೋಲೆಕ್ಸ್’, ‘ಬೆಂಜ್’ ಸಿನಿಮಾಗಳನ್ನು ನಿರ್ದೇಶಿಸುವುದಿಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡುತ್ತಿದೆ. ಲೋಕೇಶ್ ಕನಗರಾಜ್ ಇತ್ತೀಚೆಗೆ ಸಿನಿಮಾ ಒಂದರಲ್ಲಿ ನಾಯಕನಾಗಿ ಸಹ ನಟಿಸಲು ಆರಂಭಿಸಿದ್ದು, ಲೋಕೇಶ್ ಅವರು ನಿರ್ದೇಶನದಿಂದಲೇ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಲೋಕೇಶ್ ಕನಗರಾಜ್, ‘ಎಲ್ಸಿಯು’ ಅನ್ನು ನಾನು ಪ್ರಾರಂಭಿಸಿದ್ದಲ್ಲ, ಕೆಲ ಅಭಿಮಾನಿಗಳು ನನ್ನ ಸಿನಿಮಾಗಳ ಕತೆಗಳು ಒಂದಕ್ಕೊಂದು ಲಿಂಕ್ ಇರುವುದು ನೋಡಿ ‘ಎಲ್ಸಿಯು’ ಎಂದು ಕರೆದರು, ನಾನು ಅದನ್ನೇ ಮುಂದುವರೆಸಿದೆ. ಇನ್ನು ಕೆಲವರು ‘ಕೈದಿ 2’, ‘ವಿಕ್ರಂ 2’ ಇನ್ನೂ ಕೆಲವು ಎಲ್ಸಿಯು ಸಿನಿಮಾಗಳು ನಿಂತು ಹೋಗಿವೆ, ಲೋಕೇಶ್ ಅವರು ಆ ಸಿನಿಮಾಗಳನ್ನು ನಿರ್ದೇಶಿಸುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಅದು ಸುಳ್ಳು. ಖಂಡಿತ ನಾನು ಆ ಸಿನಿಮಾಗಳನ್ನು ನಿರ್ದೇಶಿಸುತ್ತೇನೆ. ‘ಕೈದಿ 2’, ‘ವಿಕ್ರಂ 2’, ರೋಲೆಕ್ಸ್ ಪಾತ್ರದ ಬಗ್ಗೆ ಒಂದು ಸ್ಟಾಂಡ್ ಅಲೋನ್ ಸಿನಿಮಾ ಮತ್ತು ಅದೇ ಕತೆಯ ಒಳಗೆ ಬರುವ ‘ಬೆಂಜ್’ ಸಿನಿಮಾವನ್ನು ನಾನು ನಿರ್ದೇಶಿಸುತ್ತೇನೆ. ಅದು ನನ್ನ ಕಮಿಟ್ಮೆಂಟ್ ಎಂದಿದ್ದಾರೆ ಲೋಕೇಶ್.
ಇದನ್ನೂ ಓದಿ:‘ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಗರಾಜ್
ಪ್ರಸ್ತುತ ಲೋಕೇಶ್ ಸಿನಿಮಾ ಒಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದರ ಬಳಿಕ ಅಲ್ಲು ಅರ್ಜುನ್ ನಟಿಸಲಿರುವ ಹೊಸ ಸಿನಿಮಾವನ್ನು ಲೋಕೇಶ್ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ಆಮಿರ್ ಖಾನ್ ನಟನೆಯ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅಸಲಿಗೆ ಆ ಕತೆಯನ್ನು ಲೋಕೇಶ್ ಸೂರ್ಯಗಾಗಿ ಮಾಡಿದ್ದರು. ಆದರೆ ಈಗ ಆ ಕತೆಯನ್ನು ಆಮಿರ್ ಖಾನ್ ಅವರಿಗಾಗಿ ನಿರ್ದೇಶಿಸುತ್ತಿದ್ದಾರೆ. ಲೋಕೇಶ್ ಅವರು ಜನಪ್ರಿಯತೆ ಮತ್ತು ಹಣದ ಹಿಂದೆ ಹೋಗಿ ತಮಿಳಿನ ಸ್ಟಾರ್ ನಟರ ಕೈ ಬಿಡುತ್ತಿದ್ದಾರೆ ಎಂದು ಸಿನಿಮಾ ಪ್ರೇಮಿಗಳು ಟೀಕೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ