AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್ ಜೊತೆ ಸಿನಿಮಾ: ಲೋಕೇಶ್ ಆಯ್ಕೆ ಮಾಡಿರುವ ಕತೆ ಯಾವುದು?

Aamir Khan-Lokesh Kanagaraj: ರಜನೀಕಾಂತ್ ನಟಿಸಿರುವ ‘ಕೂಲಿ’ ಸಿನಿಮಾನಲ್ಲಿ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ದಕ್ಷಿಣದ ಸಿನಿಮಾ. ಅಂದಹಾಗೆ ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ಹೊಸ ಸಿನಿಮಾನಲ್ಲಿ ಆಮಿರ್ ಖಾನ್ ನಟಿಸಲಿದ್ದಾರೆ. ಆದರೆ ಆ ಸಿನಿಮಾದ ಕತೆಯ ಬಗ್ಗೆ ಗೊಂದಲಗಳಿದ್ದು, ಈ ಬಗ್ಗೆ ಲೋಕೇಶ್ ಮಾತನಾಡಿದ್ದಾರೆ.

ಆಮಿರ್ ಖಾನ್ ಜೊತೆ ಸಿನಿಮಾ: ಲೋಕೇಶ್ ಆಯ್ಕೆ ಮಾಡಿರುವ ಕತೆ ಯಾವುದು?
Lokesh Aamir
ಮಂಜುನಾಥ ಸಿ.
|

Updated on: Aug 08, 2025 | 3:03 PM

Share

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಅದೂ ಅತಿಥಿ ಪಾತ್ರದಲ್ಲಿ. ಆಮಿರ್ ಖಾನ್ ತನ್ನ ಆತ್ಮೀಯ ಗೆಳೆಯರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಸಿನಿಮಾಗಳಲ್ಲಿಯೇ ಅತಿಥಿ ಪಾತ್ರಗಳಲ್ಲಿ ನಟಿಸಿಲ್ಲ. ಆಮಿರ್ ಖಾನ್ ಈ ವರೆಗೆ ಕೇವಲ ನಾಲ್ಕು ಸಿನಿಮಾಗಳಲ್ಲಿ ಮಾತ್ರವೇ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ರಜನೀಕಾಂತ್ ಅವರ ಕಾರಣಕ್ಕೆ ಅವರು ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಅಂದಹಾಗೆ ಲೋಕೇಶ್ ಕನಗರಾಜ್ ಅವರು ಆಮಿರ್ ಖಾನ್​ಗಾಗಿ ಸಿನಿಮಾ ಒಂದನ್ನು ಸಹ ನಿರ್ದೇಶನ ಮಾಡಲಿದ್ದಾರೆ. ‘ಕೂಲಿ’ ಸಿನಿಮಾ ಸಮಯದಲ್ಲಿ ಆಮಿರ್ ಖಾನ್ ಅವರೇ ಲೋಕೇಶ್ ಅವರ ಬಳಿ, ತಮಗೆ ಯಾವುದಾದರೂ ಕತೆ ಇದ್ದರೆ ಹೇಳುವಂತೆ ಕೇಳಿದ್ದರಂತೆ. ಈಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದು ಖಾತ್ರಿ ಆಗಿದೆ. ಆದರೆ ಸಿನಿಮಾದ ಕತೆ ಏನಾಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಕೆಲ ಊಹಾಪೋಹಗಳು ಸಹ ಹರಿದಾಡುತ್ತಿವೆ.

ಲೋಕೇಶ್ ಕನಗರಾಜ್ ಕೆಲ ವರ್ಷಗಳ ಹಿಂದೆ ತಮಿಳಿನ ಸ್ಟಾರ್ ನಟ ಸೂರ್ಯ ಅವರೊಟ್ಟಿಗೆ ‘ಇರುಂಬು ಕೈ ಮಾಯಾವಿ’ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಈಗ ಅದೇ ಕತೆಯನ್ನು ಸೂರ್ಯ ಬದಲಿಗೆ ಆಮಿರ್ ಖಾನ್ ಅವರೊಟ್ಟಿಗೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸ್ವತಃ ಸೂರ್ಯ ಸಹ ಈ ಬಗ್ಗೆ ತುಸು ಬೇಸರದಲ್ಲಿಯೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. ಆದರೆ ಇದೀಗ ಸ್ವತಃ ಲೋಕೇಶ್ ಕನಗರಾಜ್ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ಬಾಡಿಗೆ ಮನೆ ಪಡೆದ ಆಮಿರ್ ಖಾನ್: ತಿಂಗಳಿಗೆ 25 ಲಕ್ಷ ರೂಪಾಯಿ ರೆಂಟ್

ಸಂದರ್ಶನವೊಂದರಲ್ಲಿ ಮಾತನಾಡಿರುವ ಲೋಕೇಶ್, ‘ಇರುಂಬು ಕೈ ಮಾಯಾವಿ’ ಕತೆ ಬರೆದು ಹತ್ತು ವರ್ಷಗಳಿಗೂ ಹೆಚ್ಚು ಸಮಯ ಆಗಿದೆ. ಅದುವೇ ನನ್ನ ಮೊದಲ ಸಿನಿಮಾ ಆಗಬೇಕಿತ್ತು. ಆದರೆ ಅದಕ್ಕೆ ಭಾರಿ ದೊಡ್ಡ ಬಜೆಟ್ ಬೇಕಿತ್ತು ಹಾಗಾಗಿ ಅದು ಮೊದಲ ಸಿನಿಮಾ ಆಗಲಿಲ್ಲ. ಆದರೆ ಈಗ ಆ ಸಿನಿಮಾದ ಕತೆ ಅದರಲ್ಲೂ ಫ್ಯಾಂಟಸಿ ಅಂಶಗಳು ಕೆಲವಾರು ಸಿನಿಮಾಗಳಲ್ಲಿ ಬಂದು ಹೋಗಿಬಿಟ್ಟಿವೆ. ಹಾಗಾಗಿ ಈಗ ನಾನು ಆ ಕತೆಯನ್ನು ಮತ್ತೊಮ್ಮೆ ರೀ ರೈಟ್ ಮಾಡಬೇಕಿದೆ’ ಎಂದಿದ್ದಾರೆ.

ಆಮಿರ್ ಖಾನ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡುತ್ತಾ, ‘ಆಮಿರ್ ಖಾನ್, ಒಂದು ಕಂಪ್ಲೀಟ್ ಆಕ್ಷನ್ ಸಿನಿಮಾ ಮಾಡೋಣ ಎಂದಿದ್ದಾರೆ. ಅವರು ಈ ವರೆಗೆ ಸಂಪೂರ್ಣ ಆಕ್ಷನ್ ಸಿನಿಮಾ ಮಾಡಿಲ್ಲ. ಆದರೆ ಆಮಿರ್ ಖಾನ್ ಅವರೊಟ್ಟಿಗೆ ನಾನು ಮಾಡುವ ಸಿನಿಮಾ ಯಾವುದಾಗಿರಲಿದೆ ಎಂಬುದು ಇನ್ನೂ ಖಾತ್ರಿ ಇಲ್ಲ. ಅದು ಸೂಪರ್ ಹೀರೋ ಸಿನಿಮಾ ಆಗಿರಲಿದೆಯೇ ಅಥವಾ ಆಕ್ಷನ್ ಸಿನಿಮಾ ಆಗಿರಲಿದೆಯೇ ಎಂಬುದು ಈಗಲೇ ಹೇಳಲಾಗದು, ಅದಿನ್ನೂ ನಿರ್ಧಾರ ಆಗಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ