ಬೆಂಗಳೂರು ಚಿತ್ರೋತ್ಸವ: ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡದೆ ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ವಿವರ ಇಲ್ಲಿದೆ. ‘ಲಾಸ್ಟ್‌ ಲ್ಯಾಂಡ್‌’, ‘ಸಬರ್ ಬೊಂದಾ’, ‘ವನ್ಯಾ’ ಚಿತ್ರಗಳು ‘ಅತ್ಯುತ್ತಮ ಸಿನಿಮಾ ಪ್ರಶಸ್ತಿ’ ಪಡೆದಿವೆ. ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಚಲನಚಿತ್ರೋತ್ಸವ ನಡೆಯಿತು.

ಬೆಂಗಳೂರು ಚಿತ್ರೋತ್ಸವ: ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡದೆ ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ
Lost Land, Biffes

Updated on: Feb 06, 2026 | 8:22 PM

ಸಿನಿಮಾಸಕ್ತರಿಗೆ ದೇಶ-ವಿದೇಶದ ನೂರಾರು ಸಿನಿಮಾಗಳ ವೀಕ್ಷಣೆಗೆ ವೇದಿಕೆ ಕಲ್ಪಿಸಿದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ಶುಕ್ರವಾರ (ಫೆಬ್ರವರಿ 6) ಅಂತ್ಯಗೊಂಡಿದೆ. ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌’, ಮರಾಠಿಯ ‘ಸಬರ್‌ ಬೊಂದಾ’ ಹಾಗೂ ಕನ್ನಡದ ‘ವನ್ಯಾ’ ಸಿನಿಮಾಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು.

ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ಅನುಕ್ರಮವಾಗಿ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ನೀಡಿ ಗೌರವಿಸಲಾಯಿತು. ಏಷ್ಯನ್‌ ಚಿತ್ರ ವಿಭಾಗದಲ್ಲಿ ಈ ವರ್ಷ ಒಟ್ಟು 15 ಸಿನಿಮಾಗಳು ಪ್ರಶಸ್ತಿಯ ಕಣದಲ್ಲಿದ್ದವು. ಈ ಪೈಕಿ ಜಪಾನ್‌ನ ‘ಲಾಸ್ಟ್‌ ಲ್ಯಾಂಡ್‌’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಭಾರತದ ‘ಶೇಪ್‌ ಆಫ್‌ ಮೋಮೋ’ ಮತ್ತು ಜಪಾನ್‌ನ ‘ದಿ ಡೀಪೆಸ್ಟ್‌ ಸ್ಪೇಸ್‌ ಇನ್‌ ಅಸ್’ ಸಿನಿಮಾಗಳು ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿವೆ. ಫಿಲಿಪೈನ್ಸ್‌ನ ‘ರಿಪಬ್ಲಿಕ್‌ ಆಫ್‌ ಪಿಪೊಲಿಪಿನಾಸ್‌’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಭಾರತೀಯ (ಚಿತ್ರಭಾರತಿ) ವಿಭಾಗದಲ್ಲಿ ಮರಾಠಿ ಚಿತ್ರ ‘ಸಬರ್‌ ಬೊಂಡಾ’ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮಲಯಾಳಂನ ‘ಮೋಹಂ’ ಮತ್ತು ‘ಕಾಡು’ ಸಿನಿಮಾಗಳು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ‘ಗೊಂದಾಳ್‌’ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ‘ಸರ್ಕೀಟ್‌’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ 14 ಸಿನಿಮಾಗಳು ಸ್ಪರ್ಧಿಸಿದ್ದವು. ಈ ಪೈಕಿ ‘ವನ್ಯಾ’ ಚಿತ್ರವು ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದೆ. ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳಾಗಿ ‘ನಮ್‌ ಸಾಲಿ’ ಮತ್ತು ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಆಯ್ಕೆಯಾಗಿವೆ. ‘ಹಕ್ಕಿಗಾಗಿ’ ಚಿತ್ರಕ್ಕೆ ನೆಟ್‌ಪ್ಯಾಕ್‌ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ‘ಮೃಗತೃಷ್ಣ’ ಮತ್ತು ‘ಫೋರ್‌ ಬೈ ಫೋರ್‌’ ಚಿತ್ರಗಳು ತೀರ್ಪುಗಾರರ ವಿಶೇಷ ಮನ್ನಣೆಗೆ ಭಾಜನವಾಗಿವೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

ಈ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 300ಕ್ಕೂ ಹೆಚ್ಚು ಅತ್ಯುತ್ತಮ ಸಿನಿಮಾಗಳು, ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಂಡಿವೆ. ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.