ಬಾಲಿವುಡ್​​ ಕಡೆ ಮುಖ ಮಾಡಿದ ಕನ್ನಡದ ಪ್ರತಿಭೆ ಲೂಸಿಯಾ ಪವನ್

Lucia Pawan Kumar: ಕನ್ನಡದ ನಿರ್ದೇಶಕರು ಇತ್ತೀಚೆಗೆ ಪರ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಿರ್ದೇಶಕ ಹರ್ಷ, ಬಾಲಿವುಡ್​ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆ ‘ಭಾಗಿ 3’ ಸಿನಿಮಾ ಮಾಡಿದ್ದಾರೆ. ಇದೀಗ ‘ಲೂಸಿಯಾ’, ‘ಯೂ ಟರ್ನ್’ ನಿರ್ದೇಶಕ ಪವನ್ ಕುಮಾರ್ ಅವರು ಬಾಲಿವುಡ್​​ನತ್ತ ಹೆಜ್ಜೆ ಇಟ್ಟಿದ್ದಾರೆ. ‘ಜಮ್ತಾರಾ’ ವೆಬ್ ಸರಣಿ ಸೇರಿದಂತೆ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕರ ಜೊತೆಗೆ ಕೈ ಜೋಡಿಸಿದ್ದಾರೆ.

ಬಾಲಿವುಡ್​​ ಕಡೆ ಮುಖ ಮಾಡಿದ ಕನ್ನಡದ ಪ್ರತಿಭೆ ಲೂಸಿಯಾ ಪವನ್
Pawan Kumar

Updated on: Nov 08, 2025 | 7:07 PM

‘ಲೂಸಿಯಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ (Sandalwood) ಹೊಸ ಅಲೆ ಎಬ್ಬಿಸಿದ ನಿರ್ದೇಶಕ ಪವನ್ ಕುಮಾರ್, ಆ ಬಳಿಕ ‘ಯೂ ಟರ್ನ್’ ಸಿನಿಮಾ ಮೂಲಕ ದೇಶದ ಸಿನಿಮಾ ಆಸಕ್ತರ ಗಮನ ಸೆಳೆದರು. ‘ಯೂ ಟರ್ನ್’ ಸಿನಿಮಾ ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಸಿನಿಮಾ ಎನಿಸಿಕೊಂಡಿದೆ. ಇದೀಗ ಪವನ್ ಕುಮಾರ್, ಬಾಲಿವುಡ್​​ನತ್ತ ಹೆಜ್ಜೆ ಇರಿಸಿದ್ದಾರೆ. ಅಂದಹಾಗೆ ಈ ಹಿಂದೆಯೂ ಅವರು ಹಿಂದಿ ವೆಬ್ ಸರಣಿಯ ಕೆಲ ಎಪಿಸೋಡ್​ಗಳ ನಿರ್ದೇಶನ ಮಾಡಿದ್ದರು. ಆದರೆ ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹಿಂದಿ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಅದೂ ಜನಪ್ರಿಯ ನಿರ್ಮಾಪಣ ಸಂಸ್ಥೆಯ ಸಹಯೋಗದೊಂದಿಗೆ.

ಹಿಂದಿಯ ಬಲು ಜನಪ್ರಿಯ ವೆಬ್ ಸರಣಿಯಾದ ‘ಜಮ್ತಾರ’ ನಿರ್ಮಾಣ ಮಾಡಿರುವ ಮನೀಶ್ ತ್ರೆಹನ್ ಅವರು ನಿರ್ಮಿಸಲಿರುವ ಹೊಸ ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಮನೀಶ್ ತೆಹರೀನ್ ಅವರು ಈ ಹಿಂದೆ ‘ಒನ್ ಫ್ರೈಡೆ ನೈಟ್’, ‘ವಿರುದ್ಧ್’ ಇನ್ನೂ ಕೆಲವು ಪ್ರಾಜೆಕ್ಟ್​ಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ದಕ್ಷಿಣದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಲೂಸಿಯಾ ಪವನ್ ಅವರಿಗೆ ಅವಕಾಶ ನೀಡಿದ್ದಾರೆ.

ಪವನ್ ಕುಮಾರ್ ಅವರಿಗೆ ಬಾಲಿವುಡ್ ಹೊಸತಲ್ಲ. ಕನ್ನಡ ಚಿತ್ರರಂಗಕ್ಕೆ ಕಾಲಿವುಡ್ ಮುಂಚೆ ಅವರು ಮುಂಬೈನಲ್ಲಿ ಇಂಗ್ಲೀಷ್ ನಾಟಕ ತಂಡಗಳ ಜೊತೆಗೆ ಕೆಲಸ ಮಾಡಿದ್ದರು. ಪೃಥ್ವಿ ಥಿಯೇಟರ್​​ನಲ್ಲಿ ಕೆಲ ನಾಟಕಗಳನ್ನು ಸಹ ಮಾಡಿದ್ದರು. ಹಿಂದಿಯ ಜನಪ್ರಿಯ ವೆಬ್ ಸರಣಿ ‘ಲೈಲಾ’ನಲ್ಲಿ ಕೆಲ ಎಪಿಸೋಡ್​ಗಳನ್ನು ನಿರ್ದೇಶನ ಸಹ ಮಾಡಿದ್ದರು. ಇದೀಗ ಮೊದಲ ಬಾರಿಗೆ ಹಿಂದಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್​ನಿಂದ ಹೊರಬಂದು ಆ ಆರೋಪವನ್ನು ತಳ್ಳಿ ಹಾಕಿದ ಮಲ್ಲಮ್ಮ

ಪವನ್ ಅವರ ಈ ಹಿಂದಿನ ಸಿನಿಮಾ ‘ಧೂಮಂ’ ಯಶಸ್ಸು ಗಳಿಸಲಿಲ್ಲ. ಫಹಾದ್ ಫಾಸಿಲ್ ಇದ್ದ ಹೊರತಾಗಿಯೂ ಸಿನಿಮಾ ಫ್ಲಾಪ್ ಆಯ್ತು. ಹೊಂಬಾಳೆ, ಈ ಸಿನಿಮಾ ಅನ್ನು ನಿರ್ಮಾಣ ಮಾಡಿತ್ತು. ಅಸಲಿಗೆ ಪವನ್ ಅವರು ಪುನೀತ್ ರಾಜ್​​ಕುಮಾರ್ ನಟಿಸಬೇಕಿದ್ದ ‘ದ್ವಿತ್ವ’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದರು, ಆದರೆ ಪುನೀತ್ ಅಗಲಿಕೆಯಿಂದಾಗಿ ಆ ಪ್ರಾಜೆಕ್ಟ್ ನಿಂತು ಹೋಯ್ತು. ಇದೀಗ ಅದೇ ಕತೆಯನ್ನು ಹಿಂದಿಯಲ್ಲಿ ಪವನ್ ಮಾಡುತ್ತಿದ್ದಾರಾ ಎಂಬ ಅನುಮಾನವೂ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ