MAA ಡ್ರಾಮಾ; ಪ್ರಕಾಶ್​ ರಾಜ್​ಗೆ ಶಾಕ್​ ಕೊಟ್ಟ ವಿಷ್ಣು ಮಂಚು

ನಾನು ತೆಲುಗು ಚಿತ್ರರಂಗದವನಲ್ಲ ಎಂದು ಹೇಳುತ್ತಲೇ ಬಂದರು ಮತ್ತು ಮಾ ಪೀಠಕ್ಕೆ ತೆಲುಗು ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನೇ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು ಎಂದಿದ್ದರು ಪ್ರಕಾಶ್​ ರಾಜ್​.

MAA ಡ್ರಾಮಾ; ಪ್ರಕಾಶ್​ ರಾಜ್​ಗೆ ಶಾಕ್​ ಕೊಟ್ಟ ವಿಷ್ಣು ಮಂಚು
ಪ್ರಕಾಶ್​-ವಿಷ್ಣು ಮಂಚು
Updated By: ರಾಜೇಶ್ ದುಗ್ಗುಮನೆ

Updated on: Oct 11, 2021 | 10:01 PM

ಮೂವೀ ಆರ್ಟಿಸ್ಟ್ ಅಸೋಸಿಯೇಷನ್ (MAA) ಚುನಾವಣೆಯಲ್ಲಿ ವಿಚ್ಣು ಮಂಚು ಅವರು ಬಹುಭಾಷಾ ನಟ ಪ್ರಕಾಶ್​ ರಾಜ್​ ಅವರನ್ನು ಸೋಲಿಸಿದ್ದಾರೆ. 100ಕ್ಕೂ ಅಧಿಕ ಮತಗಳ ಅಂತರದಿಂದ ಅವರು ಗೆದ್ದಿರುವುದು ಪ್ರಕಾಶ್​ ರಾಜ್​ಗೆ ತೀವ್ರ ಮುಖಭಂಗ ತರಿಸಿದೆ. ಹೀಗಾಗಿ, ಅವರು ಚುನಾವಣೆ ಫಲಿತಾಂಶ ಬಂದ ಮರುದಿನವೇ ಅಂದರೆ ಅಕ್ಟೋಬರ್​ 11ರಂದು ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇದನ್ನು ಸ್ವೀಕರಿಸುವುದಿಲ್ಲ ಎಂದು ವಿಷ್ಣು ಮಂಚು ಹೇಳಿದ್ದಾರೆ.

ಪ್ರಕಾಶ್​ ರೈ ಅವರು ಮೂಲತಃ ತೆಲುಗು ನಟ ಅಲ್ಲ. ಹಾಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತಪಡಿಸಲಾಗಿತ್ತು. ಅವರು ತೆಲುಗು ಚಿತ್ರರಂಗಕ್ಕೆ ಕೇವಲ ಅತಿಥಿ. ಅವರು ಹೊರಗಿನವರು ಎನ್ನುವ ರೀತಿಯಲ್ಲೇ ಮೊದಲಿನಿಂದಲೂ ಬಿಂಬಿಸುತ್ತಲೇ ಬರಲಾಗಿತ್ತು. ಇದು ಪ್ರಕಾಶ್​ ರಾಜ್​ಗೆ ಬೇಸರ ತರಿಸಿದೆ. ‘ನಾನು ತೆಲುಗು ಚಿತ್ರರಂಗದವನಲ್ಲ ಎಂದು ಹೇಳುತ್ತಲೇ ಬಂದರು ಮತ್ತು ಮಾ ಪೀಠಕ್ಕೆ ತೆಲುಗು ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನೇ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ನಾನು ಅತಿಥಿ ಎಂದು ಜನರು ಹೇಳಿದ್ದಾರೆ. ನಾನು ಹಾಗೆಯೇ ಇರುತ್ತೇನೆ. ನನ್ನ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಮಾ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಪ್ರಕಾಶ್​ ರಾಜ್​ ಹೇಳಿದ್ದರು. ಆದರೆ ಮಂಚು ಬೇರೆಯದೇ ರೀತಿಯಲ್ಲಿ ಇದಕ್ಕೆ ಉತ್ತರಿಸಿದ್ದಾರೆ.

‘ನಾನು ಪ್ರಕಾಶ್​ ರಾಜ್ ಮತ್ತು ನಾಗ ಬಾಬು ಅವರ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ. ಮಾ ಅಭಿವೃದ್ಧಿಗೆ ಅವರ ಬೆಂಬಲ ಬೇಕು. ಸೋಲು ಮತ್ತು ಗೆಲುವು ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ನಾನು ಪ್ರಕಾಶ್​ ರಾಜ್​ ಅಂಕಲ್​​ಗೂ ಹೇಳಿದ್ದೇನೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ’ ಎಂದಿದ್ದಾರೆ ವಿಷ್ಣು.

ಇದೇ ವೇಳೆ ಶಾಕಿಂಗ್​ ವಿಚಾರ ಒಂದನ್ನು ಬಿಚ್ಚಿಟ್ಟಿರುವ ವಿಷ್ಣು ಮಂಚು, ‘ಚುನಾವಣೆಯಿಂದ ಹಿಂದೆ ಸರಿಯುವಂತೆ ಚಿರಂಜೀವಿ ಅವರು ನನಗೆ ಸೂಚಿಸಿದ್ದರು. ಹೀಗಾಗಿ, ತಂದೆಯ ಸೂಚನೆಯಂತೆ ರಾಮ್​ ಚರಣ್ ನನಗೆ ಮತ ಹಾಕಿರುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:MAA election ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಪ್ರಕಾಶ್​ ರಾಜ್​