
ತೆಲುಗು ಚಿತ್ರರಂಗದಲ್ಲಿ ‘ಮಾ ಇಂಟಿ ಬಂಗಾರಂ’ ಸಿನಿಮಾ ಸದ್ಯ ಸೂಪರ್ ಹಿಟ್ ಆಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಚಿತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದರೆ ಸೀಕ್ವೆಲ್ ಮಾಡುವುದು ಸಿನಿಮಾ ಇಂಡಸ್ಟ್ರಿಯ ಹಳೇ ಟೆಕ್ನಿಕ್ ಆಗಿದೆ. ನಟಿ ಸಮಂತಾ (Samantha) ನಟನೆಯ ಈ ಚಿತ್ರ ಕೂಡ ಭಾರಿ ಲಾಭದಲ್ಲಿ ಇರುವುದರಿಂದ ಚಿತ್ರತಂಡ ಈಗ ಇದೇ ಟೆಕ್ನಿಕ್ ಬಳಸಲು ಮುಂದಾಗಿದೆ. ಸಮಂತಾ ಪತಿ ರಾಜ್ ನಿಡಿಮೋರು ಈ ರೀತಿಯ ಸುಳಿವು ನೀಡಿದ್ದಾರೆ.
ಸೀಕ್ವೆಲ್ ಮಾಡಲು ಒಂದು ಒಳ್ಳೆ ಕಥೆಯ ಲೈನ್ ಸಿಕ್ಕಿದೆ ಎಂದು ರಾಜ್ ಖಚಿತಪಡಿಸಿದ್ದಾರೆ. ಇನ್ನು ಎರಡು ವರ್ಷಗಳ ನಂತರ ಈ ಸಿನಿಮಾದ ಕೆಲಸಗಳು ಆರಂಭವಾಗಲಿವೆ. ಮೊದಲ ಭಾಗದಲ್ಲಿದ್ದ ಪಾತ್ರವರ್ಗ ಸೀಕ್ವೆಲ್ನಲ್ಲೂ ಮುಂದುವರಿಯಲಿದೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಮೊದಲ ಭಾಗದ ಕಥೆಗೆ ಚಿತ್ರತಂಡ ಈಗಾಗಲೇ ಒಂದು ಉತ್ತಮ ಅಂತ್ಯವನ್ನು ನೀಡಿದೆ. ಚಿತ್ರದ ವಿಲನ್ ಕೂಡ ಸತ್ತಿದ್ದಾನೆ. ಹೀಗಾಗಿ ಸಮಂತಾ ಕುಟುಂಬಕ್ಕೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಬ್ಬ ವಿಲನ್ ಎಂಟ್ರಿ ಕೊಟ್ಟರೆ ಕಥೆ ಸಪ್ಪೆಯಾಗುವ ಭೀತಿ ಇರುತ್ತದೆ. ಒಂದು ವೇಳೆ ಕಥೆ ವರ್ಕೌಟ್ ಆಗದಿದ್ದರೆ ಮೊದಲ ಭಾಗದ ಯಶಸ್ಸಿಗೂ ಧಕ್ಕೆ ಬರಬಹುದು. ಆದರೆ ರಾಜ್ ನಿಡಿಮೋರು ಅವರು ಸೀಕ್ವೆಲ್ ಮಾಡುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ಹೀಗಾಗಿ ಅವರು ಮೊದಲ ಭಾಗಕ್ಕಿಂತಲೂ ಉತ್ತಮವಾದ ಕಥೆಯೊಂದನ್ನು ತರಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.
ನಟಿ ಸಮಂತಾ ಸದ್ಯ ಗರ್ಭಿಣಿಯಾಗಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕೆಲಸಗಳಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ. ಅವರ ಎಲ್ಲಾ ಶೂಟಿಂಗ್ ಕೆಲಸಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಸಮಂತಾ ಅವರು ಇನ್ನೊಂದು ವರ್ಷದ ನಂತರ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳಲಿದ್ದಾರೆ. ಆ ಸಮಯದೊಳಗೆ ರಾಜ್ ನಿಡಿಮೋರು ಅವರು ಚಿತ್ರಕಥೆಯ ಕೆಲಸಗಳನ್ನು ಮುಗಿಸಿಕೊಳ್ಳಲಿದ್ದಾರೆ. ನಂತರ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ಶ್ರೀಮುಖಿ, ದಿಗಂತ್, ಮಂಜು, ಗೌತಮಿ ಸೇರಿದಂತೆ ಹಲವರು ನಟಿಸಿದ್ದಾರೆ.
ಇದನ್ನೂ ಓದಿ: ಸಮಂತಾ ಸಿನಿಮಾಕ್ಕೆ ನಿರ್ಮಾಪಕರೇ ಇರಲಿಲ್ಲ, ಈಗ ಕೋಟಿಗಳಲ್ಲಿ ಗಳಿಕೆ
ಇನ್ನು ಚಿತ್ರದ ಕಲೆಕ್ಷನ್ ವಿಚಾರಕ್ಕೆ ಬಂದರೆ 8ನೇ ದಿನ ಈ ಸಿನಿಮಾ ಬರೋಬ್ಬರಿ 3,074 ಶೋಗಳಿಂದ 4.65 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 46.83 ಕೋಟಿ ರೂಪಾಯಿ ದಾಟಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ ಸದ್ಯಕ್ಕೆ 40.50 ಕೋಟಿ ರೂಪಾಯಿ ಆಗಿದೆ. ವಿದೇಶದಲ್ಲೂ ಈ ಚಿತ್ರ 8ನೇ ದಿನಕ್ಕೆ 0.35 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಕಲೆಕ್ಷನ್ 18.30 ಕೋಟಿ ರೂಪಾಯಿ ತಲುಪಿದೆ. ಇವೆಲ್ಲವನ್ನೂ ಸೇರಿಸಿ ‘ಮಾ ಇಂಟಿ ಬಂಗಾರಂ’ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 65.13 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.