ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕಳೆದುಕೊಂಡ ಬಳಿಕ ಬಾಲಿವುಡ್ಗೆ ದೊಡ್ಡ ನಷ್ಟವಾಯಿತು. ಅವರ ಅನುಪಸ್ಥಿತಿಯನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಅವರ ಸ್ಥಾನವನ್ನು ತಾವು ತುಂಬುವುದಾಗಿ ನಟ ಶಾಹೀರ್ ಶೇಖ್ ಮುಂದೆಬಂದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ. ಅಷ್ಟಕ್ಕೂ ಸುಶಾಂತ್ ಸ್ಥಾನವನ್ನು ಶಾಹೀರ್ ಶೇಖ್ ತುಂಬುವುದು ಹೇಗೆ? ಅದಕ್ಕೆ ಉತ್ತರ; ‘ಪವಿತ್ರ ರಿಶ್ತಾ 2’!
ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಶಾಂತ್ ಸಿಂಗ್ ರಜಪೂತ್ ಅವರು ಸೀರಿಯಲ್ನಲ್ಲಿ ನಟಿಸುತ್ತಿದ್ದರು. ಜೀ ಟಿವಿಯಲ್ಲಿ ಪ್ರಸಾರವಾದ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ಅವರು ಮಾಡಿದ ಪಾತ್ರ ಸೂಪರ್ ಹಿಟ್ ಆಗಿತ್ತು. ಆ ಮೂಲಕ ಸುಶಾಂತ್ ಅವರು ಹಿಂದಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಅವರಿಗೆ ಜೋಡಿಯಾಗಿ ಅಂಕಿತಾ ಲೋಖಂಡೆ ನಟಿಸಿದ್ದರು. ಈಗ ಅದೇ ಸೀರಿಯನ್ನ ಸೀಕ್ವೆಲ್ ಬರುತ್ತಿದೆ. ‘ಪವಿತ್ರ ರಿಶ್ತಾ 2.0’ ಎಂಬ ಶೀರ್ಷಿಕೆಯಲ್ಲಿ ಆ ಧಾರಾವಾಹಿಯ ಕಥೆ ಮುಂದುವರಿಯಲಿದೆ. ಅಂದು ಸುಶಾಂತ್ ಮಾಡಿದ್ದ ಪಾತ್ರವನ್ನು ಇಂದು ಶಾಹೀರ್ ಶೇಖ್ ಮಾಡಲು ಮುಂದೆಬಂದಿದ್ದಾರೆ.
‘ಪವಿತ್ರ ರಿಶ್ತಾ 2.0’ ಬರುವುದು ನಿಜ ಎಂದು ಕೆಲವೇ ದಿನಗಳ ಹಿಂದೆ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹೇಳಿದ್ದರು. ಈಗ ಆ ಧಾರಾವಾಹಿಯ ಅಧಿಕೃತ ಮೂಲಗಳಿಂದ ಸುದ್ದಿ ಹೊರಬಿದ್ದಿದೆ. ಸುಶಾಂತ್ ಮಾಡಿದ್ದ ಪಾತ್ರವನ್ನು ಶಾಹೀರ್ ಶೇಖ್ ಮಾಡುವುದು ಖಚಿತ ಆಗಿದೆ. ಈ ಹಿಂದೆ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾದ ‘ಮಹಾಭಾರತ’ ಧಾರಾವಾಹಿಯಲ್ಲಿ ಅರ್ಜುನನ ಪಾತ್ರವನ್ನು ಮಾಡುವ ಮೂಲಕ ಶಾಹೀರ್ ಶೇಖ್ ಫೇಮಸ್ ಆಗಿದ್ದರು. ಈಗ ‘ಪವಿತ್ರ ರಿಶ್ತಾ 2.0’ ಸೀರಿಯಲ್ನಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಹೊರಿಸಲಾಗುತ್ತಿದೆ.
ಟಿವಿ ಬದಲಿಗೆ ಈ ಬಾರಿ ಆನ್ಲೈನ್ನಲ್ಲಿ ಈ ಸೀರಿಯಲ್ ಪ್ರಸಾರ ಆಗಲಿದೆ. ದಿನಾಂಕ, ಸಮಯ ಮುಂತಾದ ವಿವರಗಳು ಇನ್ನಷ್ಟೇ ಸಿಗಬೇಕಿದೆ. ‘ಪವಿತ್ರ ರಿಶ್ತಾ’ ಸೀರಿಯಲ್ ಈಗಾಗಲೇ ಒಂದು ದೊಡ್ಡ ಮೈಲುಗಲ್ಲು ಸ್ತಾಪಿಸಿತ್ತು. ಅದನ್ನು ಮೀರಿಸುವ ಸವಾಲಿನೊಂದಿಗೆ ‘ಪವಿತ್ರ ರಿಶ್ತಾ 2.0’ ತಂಡ ಸಜ್ಜಾಗಿದೆ. ಸುಶಾಂತ್ ಜಾಗದಲ್ಲಿ ಶಾಹೀರ್ ಶೇಖ್ ಅವರನ್ನು ಜನರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ:
SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ