SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?
Sushant Singh Rajput Death Anniversary: ಸುಶಾಂತ್ ಇಲ್ಲದೆ ಒಂದು ವರ್ಷ ಕಳೆದಿದೆ. ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ.
ಬಾಲಿವುಡ್ನಲ್ಲಿ ಮಿಂಚಿ ಮೆರೆಯಬೇಕಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಅವರು 2020ರ ಜೂನ್ 14ರಂದು ದುರ್ಮರಣ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಕೂಡ ಆ ಸುದ್ದಿ ಸಿಡಿಲಿನಂತೆ ಬಂದೆರಗಿತ್ತು. ಈಗ ಸುಶಾಂತ್ ಸಿಂಗ್ ರಜಪೂತ್ ಇಲ್ಲದೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಅನೇಕ ಗಮನಾರ್ಹ ಘಟನೆಗಳು ನಡೆದಿವೆ. ಯಾವ ದಿನಾಂಕದಲ್ಲಿ ಏನೆಲ್ಲ ಆಯ್ತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜೂ.14, 2020: ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಅಂದು ಮಧ್ಯಾಹ್ನ ಸುದ್ದಿ ಕೇಳಿದ ಎಲ್ಲರಿಗೂ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ.
ಜೂ.15, 2020: ಸುಶಾಂತ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದು ಆತ್ಮಹತ್ಯೆ ಅಲ್ಲ ಎಂದು ಕಂಗನಾ ರಣಾವತ್ ಧ್ವನಿ ಎತ್ತಿದರು. ಪ್ರಕರಣದ ತನಿಖೆ ಆಗಬೇಕೆಂದು ಸುಶಾಂತ್ ಭಾವ ಓಪಿ ಸಿಂಗ್ ಪಟ್ಟು ಹಿಡಿದರು.
ಜೂ.16, 2020: ಬಿಜೆಪಿ ಸಂಸದ ನಿಶಿಕಾಂತ್ ದುವೆ ಅವರು ಈ ಸಾವಿನ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಆರೋಪಿಸಿದರು.
ಜೂ.18, 2020: ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಅವರು ತಮ್ಮ ಹೇಳಿಕೆ ನೀಡಿದರು.
ಜೂ.19, 2020: ಸೋಶಿಯಲ್ ಮೀಡಿಯಾದಲ್ಲಿ ನೆಪೋಟಿಸಂ, ಗುಂಪುಗಾರಿಕೆ, ಮೂವೀ ಮಾಫಿಯಾದ ಬಗ್ಗೆ ದೊಡ್ಡ ಚರ್ಚೆ ಆರಂಭ ಆಯಿತು.
ಜೂ.24, 2020: ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ವರದಿ ಬಂತು. ಸುಶಾಂತ್ ದೇಹದ ಮೇಲೆ ಯಾವುದೇ ಗಾಯಗಳು ಆಗಿರಲಿಲ್ಲ ಎಂಬುದು ತಿಳಿದುಬಂತು.
ಜು.4, 2020: ಸುಶಾಂತ್ ತಂದೆ ಕೆಕೆ ಸಿಂಗ್ ಅವರು ತಮ್ಮ ಮಗನ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೇಡಿಕೆ ಇಟ್ಟರು.
ಜು.6, 2020: ನಿರ್ದೇಶಕ ಸಂಜಯ್ ಲೀಲಾ ಬನ್ಸಾರಿ ಅವರು ಮುಂಬೈ ಪೊಲೀಸರ ಎದುರು ತಮ್ಮ ಹೇಳಿಕೆ ನೀಡಿದರು.
ಜು.14, 2020: ಸುಶಾಂತ್ ನಿಧನದ ಬಳಿಕ ಅದೇ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ನಲ್ಲಿ ಕಾಣಿಸಿಕೊಂಡ ರಿಯಾ ಚಕ್ರವರ್ತಿ ಅವರು ತಮ್ಮ ಅಳಲು ತೋಡಿಕೊಂಡರು.
ಜು.16, 2020: ರಿಯಾ ಚಕ್ರವರ್ತಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೇಳಿಕೊಂಡರು.
ಜು.24, 2020: ಸುಶಾಂತ್ ನಟನೆಯ ಕೊನೇ ಸಿನಿಮಾ ‘ದಿಲ್ ಬೇಚಾರ’ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಯಿತು. ಸುಶಾಂತ್ಗೆ ನಮನ ಸಲ್ಲಿಸುವ ಸಲುವಾಗಿ ಉಚಿತವಾಗಿ ಪ್ರಸಾರ ಮಾಡಲಾಯಿತು.
ಜು.29, 2020: ಸುಶಾಂತ್ ತಂದೆ ಕೆಕೆ ಸಿಂಗ್ ಅವರು ಪಾಟ್ನಾದಲ್ಲಿ 6 ಮಂದಿ ವಿರುದ್ಧ ಮಗನ ಕೊಲೆ ಸಂಚು ಆರೋಪಿಸಿ ದೂರು ನೀಡಿದರು.
ಜು.29, 2020: ಕೆಕೆ ಸಿಂಗ್ ದಾಖಲಿಸಿದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿಕೊಂಡರು.
ಜು.29, 2020: ಬಿಹಾರ ಪೊಲೀಸರು ತನಿಖೆ ನಡೆಸುವ ಸಲುವಾಗಿ ಮುಂಬೈಗೆ ಬಂದರು. ಕಾರ್ಯವ್ಯಾಪ್ತಿ ವಿಚಾರಕ್ಕೆ ಬಿಹಾರ ಮತ್ತು ಮಹಾರಾಷ್ಟ್ರ ಪೊಲೀಸರ ನಡುವೆ ವಿವಾದ ಆಯಿತು.
ಜು.30, 2020: ಈ ಪ್ರಕರಣದ ಸಂಪೂರ್ಣ ಮಾಹಿತಿ ಬೇಕು ಎಂದು ಜಾರಿ ನಿರ್ದೇಶನಾಲಯ ಕೂಡ ಕೇಳಿತು.
ಆ.4, 2020: ಬಿಹಾರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಶಿಫಾರಸು ಮಾಡಿತು.
ಆ.5, 2020: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು.
ಆ.6, 2020: ರಿಯಾ ಚಕ್ರವರ್ತಿ, ಅವರ ತಂದೆ ಇಂದ್ರಜಿತ್ ಚಕ್ರವರ್ತಿ, ತಾಯಿ ಸಂಧ್ಯಾ, ಸಹೋದರ ಶೋವಿಕ್, ಸುಶಾಂತ್ ಮ್ಯಾನೇಜರ್ ಸ್ಯಾಮುಯಲ್ ಮಿರಾಂಡ, ಶ್ರುತಿ ಮೋದಿ ಮುಂತಾದವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತು.
ಆ.10, 2020: ತಮ್ಮನ್ನು ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿ, ರಿಯಾ ಚಕ್ರವರ್ತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.
ಆ.19, 2020: ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು.
ಆ.26, 2020: ಈ ಪ್ರಕರಣವನ್ನು ಎನ್ಸಿಬಿ ತನಿಖೆ ನಡೆಸಿದರೆ ಬಾಲಿವುಡ್ನ ಹಲವು ಪ್ರಮುಖರ ಹೆಸರು ಹೊರಬರುತ್ತದೆ ಎಂದು ಕಂಗನಾ ಹೇಳಿದರು.
ಆ.27, 2020: ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ತಂದೆ ಕೆಕೆ ಸಿಂಗ್ ಹೇಳಿಕೆ ನೀಡಿದರು.
ಆ.28, 2020: ಸಿಬಿಐ ಮುಂದೆ ರಿಯಾ ಚಕ್ರವರ್ತಿ ಹಾಜರಾದರು. 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು.
ಸೆ.4, 2020: ರಿಯಾ ಸಹೋದರ ಶೋವಿಕ್ ಸೇರಿದಂತೆ ಕೆಲವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದರು.
ಸೆ.8, 2020: ರಿಯಾ ಚಕ್ರವರ್ತಿಯನ್ನು ಮೂರು ದಿನ ವಿಚಾರಣೆ ಮಾಡಿದ ಬಳಿಕ ಎನ್ಸಿಬಿ ಅಧಿಕಾರಿಗಳು ಬಂಧಿಸಿದರು.
ಸೆ.23, 2020: ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್ ಮುಂತಾದವರಿಗೆ ಎನ್ಸಿಬಿ ಸಮನ್ಸ್ ನೀಡಿತು.
ಅ.5. 2020: ಏಮ್ಸ್ ಮೆಡಿಕಲ್ ಬೋರ್ಡ್ ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿತು. ಕೊಲೆ ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕಿತು.
ಅ.8. 2020: ರಿಯಾ ಚಕ್ರವರ್ತಿ ಜಾಮೀನು ಪಡೆದು ಬೈಕುಲ್ಲಾ ಜೈಲಿನಿಂದ ಹೊರಬಂದರು.
ಫೆ.15, 2021: ಸುಶಾಂತ್ ಸಹೋದರಿ ವಿರುದ್ಧ ರಿಯಾ ಚಕ್ರವರ್ತಿ ಹೂಡಿದ್ದ ಪ್ರಕರಣವನ್ನು ಬಾಂಬೆ ಹೈ ಕೋರ್ಟ್ ವಜಾಗೊಳಿಸಿತು.
ಮೇ 28, 2021: ಸುಶಾಂತ್ ಫ್ಲ್ಯಾಟ್ಮೇಟ್ ಸಿದ್ದಾರ್ಥ್ ಪಿಟಾನಿಯನ್ನು ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಎನ್ಸಿಬಿ ಅಧಿಕಾರಿಗಳು ಬಂಧಿಸಿದರು.
ಸುಶಾಂತ್ ಸಾವಿನ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ. ಸಿಬಿಐ ಅಧಿಕಾರಿಗಳು ಇನ್ನೂ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಕುಟುಂಬದವರು ಹೋರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:
SSR Case: ಸಾಯುವುದಕ್ಕೂ ಮುನ್ನ ನಟನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದ ಸುಶಾಂತ್; ಅವರು ಯೋಚಿಸಿದ್ದೇನು?
ಸುಶಾಂತ್ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್; ಅಭಿಮಾನಿಗಳಿಗೆ ಶಾಕ್ ನೀಡಿದ ಡೈಲಾಗ್ಗಳು