‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಚಿತ್ರದ ಬಗ್ಗೆ ಹಲವು ರೀತಿಯಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಚಿಂತನ-ಮಂಥನಗಳು ನಡೆಯುತ್ತಿವೆ. ಜನರು ಕೂಡ ತಮ್ಮ ಗಮನಕ್ಕೆ ಬರದೇ ಉಳಿದ ಘಟನೆಗಳ ಬಗ್ಗೆ ಚಿತ್ರದಿಂದ ಮತ್ತಷ್ಟು ತಿಳಿದುಕೊಳ್ಳುವ ಆಸಕ್ತಿ ವಹಿಸಿದ್ದಾರೆ. ಜತೆಗೆ ಬಹುತೇಕರು ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸುತ್ತಿದ್ದು, ಬಾಕ್ಸಾಫೀಸ್ನಲ್ಲೂ ಕಾಶ್ಮೀರ್ ಫೈಲ್ಸ್ ಉತ್ತಮ ಗಳಿಕೆ ಮಾಡುತ್ತಿದೆ. ಈ ನಡುವೆ ಚಿತ್ರತಂಡ ಸಂವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದೆ. ಜನರ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಬೆಂಗಳೂರಿನಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ವಿಮರ್ಶೆ- ಸಂವಾದ ಕಾರ್ಯಕ್ರಮ ‘ಮೇಕಿಂಗ್ ಆಫ್ ಕಾಶ್ಮೀರ್ ಫೈಲ್ಸ್’ ಆಯೋಜಿಸಲಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ಕಲಾವಿದ ಪ್ರಕಾಶ್ ಬೆಳವಾಡಿ ಈ ವಿಮರ್ಶೆ- ಸಂವಾದ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಲೇಖಕ, ವಿಮರ್ಶಕ ಡಾ.ಜಿ.ಬಿ.ಹರೀಶ್ ಹಾಗೂ ಲೇಖಕ, ಅಂಕಣಕಾರ ರೋಹಿತ್ ಚಕ್ರತೀರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು (ಮಾರ್ಚ್ 27, ಭಾನುವಾರ) ಬೆಂಗಳೂರಿನ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಂಥನ, ಬೆಂಗಳೂರು ಕಾರ್ಯಕ್ರಮ ಪ್ರಸ್ತುತಪಡಿಸಲಿದೆ.
ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ್ದ ಪ್ರಕಾಶ್ ಬೆಳವಾಡಿ:
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಿಡುಗಡೆಗೂ ಮುನ್ನ ನಟ ಪ್ರಕಾಶ್ ಬೆಳವಾಡಿ ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅದರಲ್ಲಿ ಅವರು, ಸ್ಕ್ರಿಪ್ಟ್ ಮೊದಲ ಬಾರಿಗೆ ಓದಿದಾಗ ಅನುಭವ ತೆರೆದಿಟ್ಟಿದ್ದರು. “ಚಿತ್ರದ ಸ್ಕ್ರಿಪ್ಟ್ ಅನ್ನು ಮೊದಲ ಬಾರಿಗೆ ಓದಲು ವಿವೇಕ್ ಅಗ್ನಿಹೋತ್ರಿ ಕಳುಹಿಸಿದ್ದರು. ಅದನ್ನು ಓದಿ ನನಗೆ ಶಾಕ್ ಆಯಿತು. ಕಾರಣ, ಅದುವರೆಗೆ ನನಗೆ ಜಮ್ಮು ಕಾಶ್ಮೀರದಲ್ಲಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಮತ್ತು ವಲಸೆಯ ಬಗ್ಗೆ ವಿವರಗಳು ತಿಳಿದಿರಲಿಲ್ಲ. ಇದನ್ನು ಓದಿ ಅಪರಾಧಿ ಮನೋಭಾವ ಕಾಡಿತು. ಕಾರಣ, 1990ರ ಕಾಶ್ಮೀರಿ ಘಟನೆ ನಡೆಯುವಾಗ ನಾನು ಪತ್ರಕರ್ತನಾಗಿದ್ದೆ’’ ಎಂದು ಬೆಳವಾಡಿ ಹೇಳಿಕೊಂಡಿದ್ದರು.
ಮುಂದುವರೆದು ಮಾತನಾಡಿದ್ದ ಅವರು, ‘‘ನನಗೆ ಕಾಶ್ಮೀರಿ ಪಂಡಿತರ ಕ್ಷಮೆಯನ್ನು ಕೇಳಬೇಕು ಎನ್ನಿಸಿದೆ. ಕಾರಣ, ಇಷ್ಟೊಂದು ಭೀಕರ ದುರಂತವನ್ನು ಜನರೆದುರು ಇದುವರೆಗೆ ಹೇಳದ ಸಮಾಜದ ಭಾಗವಾಗಿ ನಾನೂ ಇದ್ದೆ’’ ಎಂದಿದ್ದರು. ಇದುವರೆಗೆ ಹೇಳದ ಕತೆಯನ್ನು ತೆರೆಯ ಮೇಲೆ ತಂದ ನಿರ್ದೇಶಕರಿಗೆ ಅಭಿನಂದನೆ ಹೇಳಿರುವ ಪ್ರಕಾಶ್ ಬೆಳವಾಡಿ, ‘‘ಈ ಕೆಲಸವನ್ನು ಮಾಡುವ ಆಸಕ್ತಿ ಹಾಗೂ ಧೈರ್ಯ ತೋರಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಿಗೆ ಅಭಿನಂದನೆಗಳು. ಪ್ರತಿ ಭಾರತೀಯರು ಈ ಚಿತ್ರವನ್ನು ನೋಡಬೇಕು. ನಮ್ಮದೇ ನೆಲದಲ್ಲಿ ನಡೆದ ಕತೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕಾಶ್ಮೀರಿ ಪಂಡಿತರಿಗೆ ನ್ಯಾಯ ದೊರೆಯಬೇಕು’’ ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ:
‘ಆ ನಗರಕ್ಕೆ ಸಲಿಂಗಕಾಮಿ ಎಂಬ ಅರ್ಥವಿದೆ’; ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ
Published On - 8:07 am, Sun, 27 March 22