ಮಲಯಾಳಂ ಚಿತ್ರರಂಗ: ಒಂದೇ ತಿಂಗಳಲ್ಲಿ 52 ಕೋಟಿ ನಷ್ಟ

|

Updated on: Mar 26, 2025 | 1:02 PM

Malayalam Movie: ಮಲಯಾಳಂ ಚಿತ್ರರಂಗ ಅತ್ಯುತ್ತಮ ಸಿನಿಮಾಗಳನ್ನು ನೀಡುವ ಮೂಲಕ ದೇಶದ ಅತ್ಯುತ್ತಮ ಚಿತ್ರರಂಗ ಎಂಬ ಹೆಸರುಗಳಿಸಿದೆ. ಆದರೆ ಫೆಬ್ರವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ ಬರೋಬ್ಬರಿ 52 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. 1.60 ಕೋಟಿ ಹಣ ಹಾಕಿ ಮಾಡಿದ ಸಿನಿಮಾ ಕೇವಲ 10 ಸಾವಿರ ರೂಪಾಯಿ ಗಳಿಸಿದೆ.

ಮಲಯಾಳಂ ಚಿತ್ರರಂಗ: ಒಂದೇ ತಿಂಗಳಲ್ಲಿ 52 ಕೋಟಿ ನಷ್ಟ
Malayalam Movie Industry
Follow us on

ಕೋವಿಡ್ ಬಳಿಕ ಮಲಯಾಳಂ ಚಿತ್ರರಂಗ ದೇಶದ ನಂಬರ್ 1 ಚಿತ್ರರಂಗ ಎನಿಸಿಕೊಂಡಿದೆ. ಮಲಯಾಳಂ ಚಿತ್ರರಂಗದಿಂದ ಹೊರಬರುತ್ತಿರುವ ಸಿನಿಮಾಗಳನ್ನು ಇಡೀ ದೇಶವೇ ಮೆಚ್ಚಿಕೊಳ್ಳುತ್ತಿದೆ. ಕೋವಿಡ್ ಸಮಯದಲ್ಲಂತೂ ಒಟಿಟಿಗಳಲ್ಲಿ ಮಲಯಾಳಂ ಸಿನಿಮಾಗಳು ಹಂಗಾಮ ಎಬ್ಬಿಸಿದ್ದವು. ಈಗಲೂ ಸಹ ಹಲವು ಮಲಯಾಳಂ ಸಿನಿಮಾಗಳಿಗಾಗಿ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಒಂದರ ಹಿಂದೊಂದು ಅದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡುತ್ತಿದೆ. ಹಾಗಿದ್ದರೂ ಸಹ ಮಲಯಾಳ ಚಿತ್ರರಂಗದ ಪ್ರತಿ ತಿಂಗಳು ನಷ್ಟವನ್ನೇ ಅನುಭವಿಸುತ್ತಿದೆ. ಇತ್ತೀಚೆಗೆ ಕೇವಲ ಒಂದು ತಿಂಗಳಲ್ಲಿ 52 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ.

ಮಲಯಾಳಂ ಸಿನಿಮಾ ನಿರ್ಮಾಪಕರ ಅಸೋಸಿಯೇಷನ್ (ಕೆಎಫ್​ಪಿಎ) ಪ್ರತಿ ತಿಂಗಳೂ ಸಹ ಮಾಸಿಕ ವರದಿಗಳನ್ನು ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ ಫೆಬ್ರವರಿ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ 52 ಕೋಟಿ ರೂಪಾಯಿ ಹಣ ನಷ್ಟ ಅನುಭವಿಸಿದೆ. ಇತರೆ ಕೆಲ ಚಿತ್ರರಂಗಗಳಿಗೆ ಹೋಲಿಸಿದರೆ ಇದು ಕಡಿಮೆ ಮೊತ್ತವಾದರೂ 52 ಕೋಟಿ ಮೊತ್ತ ಚಿಕ್ಕದೇನೂ ಅಲ್ಲ.

ನಿರ್ಮಾಪಕರು ಬಿಡುಗಡೆ ಮಾಡಿರುವ ವರದಿಯಂತೆ ಫೆಬ್ರವರಿ ತಿಂಗಳಲ್ಲಿ ಒಟ್ಟು 17 ಮಲಯಾಳಂ ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ ಗೆದ್ದಿರುವುದು ಕೇವಲ ಒಂದೇ ಒಂದು ಸಿನಿಮಾ. 17 ಸಿನಿಮಾಗಳಲ್ಲಿ ಒಂದು ಸಿನಿಮಾ ಅಂತೂ ಬಾಕ್ಸ್ ಆಫೀಸ್​ನಲ್ಲಿ ಗಳಿಸಿರುವುದು ಕೇವಲ 10 ಸಾವಿರ ರೂಪಾಯಿಗಳಂತೆ! ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆದ 17 ಸಿನಿಮಾಗಳ ಒಟ್ಟು ಬಜೆಟ್ 75.23 ಕೋಟಿ ರೂಪಾಯಿಗಳು. ಚಿತ್ರಮಂದಿರದಿಂದ ಕಲೆಕ್ಷನ್ ಆದ ಮೊತ್ತ ಕೇವಲ 23.55 ಕೋಟಿ ರೂಪಾಯಿಗಳು. 1.60 ಕೋಟಿ ಬಜೆಟ್ ಹಾಕಿ ಮಾಡಲಾಗಿದ್ದ ‘ಲವೆಬಲ್’ ಮಲಯಾಳಂ ಸಿನಿಮಾ ಗಳಿಸಿರುವುದು ಕೇವಲ 10 ಸಾವಿರ ರೂಪಾಯಿ. ಗೆದ್ದ ಸಿನಿಮಾ ‘ಆಫೀಸರ್ ಆನ್ ಡ್ಯೂಟಿ’ ಚಿತ್ರಮಂದಿರಗಳಿಂದ ಗಳಿಸಿರುವುದು 13 ಕೋಟಿ.

ಇದನ್ನೂ ಓದಿ:ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ

ಆಸಕ್ತಿಕರ ಸಂಗತಿಯೆಂದರೆ ಜನವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗಕ್ಕೆ ಬರೋಬ್ಬರಿ 110 ಕೋಟಿ ನಷ್ಟವಾಗಿತ್ತು. ಜನವರಿ ತಿಂಗಳಲ್ಲಿ 28 ಸಿನಿಮಾಗಳು ಬಿಡುಗಡೆ ಆಗಿದ್ದವು. ಅವುಗಳಲ್ಲಿ ಗೆದ್ದಿದ್ದು ಕೇವಲ ಎರಡು ಸಿನಿಮಾಗಳು, ಹಾಗಾಗಿ ಜನವರಿ ತಿಂಗಳಲ್ಲಿ ಮಲಯಾಳಂ ಚಿತ್ರರಂಗ 110 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಅಂದಹಾಗೆ ನಿರ್ಮಾಪಕರು ಬಿಡುಗಡೆ ಮಾಡುತ್ತಿರುವ ಪಟ್ಟಿಯಲ್ಲಿ ಕೇವಲ ಚಿತ್ರಮಂದಿರದಿಂದ ಬರುವ ಕಲೆಕ್ಷನ್ ಅನ್ನು ಮಾತ್ರವೇ ಲೆಕ್ಕ ಹಾಕಲಾಗಿದೆ. ಒಟಿಟಿ, ಆಡಿಯೋ ರೈಟ್ಸ್, ಸ್ಯಾಟಲೈಟ್ ರೈಟ್ಸ್​ಗಳ ಲೆಕ್ಕಾಚಾರ ಇಲ್ಲ.

ಇದೇ ಕಾರಣಕ್ಕೆ ನಿರ್ಮಾಪಕರು ಮತ್ತು ಪ್ರದರ್ಶಕರು ಪ್ರತಿಭಟನೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಸಂಪೂರ್ಣ ಚಿತ್ರರಂಗ ಬಂದ್​ಗೆ ಈಗಾಗಲೇ ಕರೆ ನೀಡಲಾಗಿದೆ. ಸಿನಿಮಾ ಟಿಕೆಟ್​ಗಳ ಮೇಲೆ ತೆರಿಗೆ ಏರಿಕೆಗೆ ವಿರೋಧ, ನಿರ್ಮಾಣ ವೆಚ್ಚ ಹೆಚ್ಚಳ, ನಟರ ಸಂಭಾವನೆ ಇಳಿಕೆ ಇನ್ನಿತರೆ ವಿಷಯಗಳನ್ನು ಇರಿಸಿಕೊಂಡು ಪ್ರತಿಭಟನೆಗೆ ಕರೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ