
ಮಲಯಾಳಂ (Malayalam) ಚಿತ್ರರಂಗಕ್ಕೆ ಡ್ರಗ್ಸ್ ಪಿಡುಗು ತುಸು ಗಟ್ಟಿಯಾಗಿಯೇ ಅಂಟಿದಂತಿದೆ. ಸತತವಾಗಿ ಒಬ್ಬರ ಮೇಲೊಬ್ಬರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಶೈನ್ ಟಾಮ್ ಚಾಕೊ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಜಾಮೀನಿನ ಮೇಲೆ ಅವರು ಹೊರಬಂದಿದ್ದರು. ಇದೀಗ ಮಲಯಾಳಂ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಿರ್ದೇಶಕರು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.
‘ಉಂಡ’, ‘ಲವ್’, ‘ತಲ್ಲುಮಾಲ’ ಇತ್ತೀಚೆಗಷ್ಟೆ ಬಿಡುಗಡೆ ಆದ ‘ಅಲಪುಳಲ್ ಜಿಮ್ಕಾನಾ’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ಖಲೀದ್ ರೆಹಮಾನ್ ಹಾಗೂ ಮಲಯಾಳಂ ಸಿನಿಮಾ ‘ತಮಾಶಾ’, ‘ಭೀಮಂಟೆ ವಾಳಿ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹಶ್ರಫ್ ಹಮ್ಜಾ ಅವರುಗಳನ್ನು ಡ್ರಗ್ಸ್ ಪ್ರಕರಣದಲ್ಲಿ ಕೇರಳ ಪೊಲೀಸರು ಬಂಧಿಸಿದ್ದಾರೆ.
ಸಮೀರ್ ತಾಹಿರ್ ಎಂಬುವರ ಕೊಚ್ಚಿ ಅಪಾರ್ಟ್ಮೆಂಟ್ನಲ್ಲಿ ಖಲೀದ್ ರೆಹಮಾನ್, ಹಶ್ರಫ್ ಹಮ್ಜಾ ಇನ್ನೂ ಒಬ್ಬ ವ್ಯಕ್ತಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸಮಯದಲ್ಲಿ ನಿಖರ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶನಿವಾರ ತಡರಾತ್ರಿ 3 ಗಂಟೆಗೆ ಪೊಲೀಸರು ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಇವರ ಬಳಿ 1.5 ಗ್ರಾಂ ಹೈಡ್ರೋ ಗಾಂಜಾ ದೊರಕಿದೆಯಂತೆ. ಮೂವರನ್ನು ಬಂಧಿಸಿದ ಪೊಲೀಸರು ಭಾನುವಾರ ಬೆಳಿಗ್ಗೆ 7 ಗಂಟೆಗೆ ಸ್ಟೇಷನ್ ಬೇಲ್ ನೀಡಿ ಕಳಿಸಿಕೊಟ್ಟಿದ್ದಾರೆ. ಆದರೆ ಮೂವರ ಮೇಲೆ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಹೈಡ್ರೋ ಗಾಂಜಾದ ಮೂಲದ ಬಗ್ಗೆ ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ:ಮತ್ತೊಬ್ಬ ನಟಿಯಿಂದಲೂ ಶೈನ್ ಟಾಮ್ ಚಾಕೊ ವಿರುದ್ಧ ಆರೋಪ
ಕೆಲ ದಿನಗಳ ಹಿಂದಷ್ಟೆ ನಟ ಶೈನ್ ಟಾಮ್ ಚಾಕೊ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದರು. ಈ ವೇಳೆ, ಚಾಕೊ, ಮಲಯಾಳಂ ಚಿತ್ರರಂಗದಲ್ಲಿ ಇನ್ನೂ ಯಾರ್ಯಾರು ಡ್ರಗ್ಸ್ ಬಳಕೆ ಮಾಡುತ್ತಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ತಡರಾತ್ರಿ ಬಂಧವಾಗಿದ್ದ ಖಲೀದ್ ರೆಹಮಾನ್ ಅವರ ನಿರ್ದೇಶನದ ‘ತಲ್ಲುಮಾಲ’ ಸಿನಿಮಾನಲ್ಲಿ ಶೈನ್ ಟಾಮ್ ಚಾಕೊ ನಟಿಸಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಒಂದರ ಹಿಂದೊಂದರಂತೆ ಡ್ರಗ್ಸ್ ಪ್ರಕರಣಗಳು ಹೊರ ಬೀಳುತ್ತಲೇ ಇವೆ. ಈ ಹಿಂದೆ ಮಲಯಾಳಂ ನಟರಾದ ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಅವರುಗಳ ಮೇಲೆಯೂ ಸಹ ಡ್ರಗ್ಸ್ ಸೇವನೆ ಆರೋಪ ಬಂದು ಅವರ ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ