‘ಕಣ್ಣಪ್ಪ’ ಟ್ವಿಟ್ಟರ್ ವಿಮರ್ಶೆ: ಪರೀಕ್ಷೆ ಬರೆದಿದ್ದು ಮಂಚು ವಿಷ್ಣು, ಪಾಸ್ ಆಗಿದ್ದು ಪ್ರಭಾಸ್

Kannappa movie review: ಮಂಚು ವಿಷ್ಣು ನಟಿಸಿ ನಿರ್ಮಾಣವನ್ನೂ ಮಾಡಿರುವ ಭಕ್ತಿ ಪ್ರಧಾನ ಸಿನಿಮಾ ‘ಕಣ್ಣಪ್ಪ’ ಇಂದು (ಜೂನ್ 27) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟವಾದರೆ ಇನ್ನು ಕೆಲವರು ಇದೊಂದು ಸಾಧಾರಣ ಸಿನಿಮಾ ಎಂದಿದ್ದಾರೆ. ಸಿನಿಮಾನಲ್ಲಿರುವ ಪ್ಲಸ್ ಏನು? ಮೈನಸ್ ಏನು? ಜನ ಏನಂದರು? ಇಲ್ಲಿದೆ ಮಾಹಿತಿ...

‘ಕಣ್ಣಪ್ಪ’ ಟ್ವಿಟ್ಟರ್ ವಿಮರ್ಶೆ: ಪರೀಕ್ಷೆ ಬರೆದಿದ್ದು ಮಂಚು ವಿಷ್ಣು, ಪಾಸ್ ಆಗಿದ್ದು ಪ್ರಭಾಸ್
Kannappa

Updated on: Jun 27, 2025 | 12:34 PM

ಮಂಚು ವಿಷ್ಣು (Manchu Vishnu) ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಕಣ್ಣಪ್ಪ’ ಸಿನಿಮಾ ಇಂದು (ಜೂನ್ 27) ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಆಂಧ್ರ-ತೆಲಂಗಾಣ ಸೇರಿದಂತೆ ಹಲವು ಕಡೆ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಸಿನಿಮಾ ನೋಡಿದ ಹಲವಾರು ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನೆಗೆಟಿವ್ ರಿವ್ಯೂಗಳು ಬರದಂತೆ ತಡೆಯಲು ಚಿತ್ರತಂಡ ನಾನಾ ಪ್ರಯತ್ನಗಳನ್ನು ಮಾಡಿದ್ದರೂ ಸಹ ಅಲ್ಲಲ್ಲಿ ಸಿನಿಮಾದ ಬಗ್ಗೆ ಕಟು ವಿಮರ್ಶೆಗಳು ಸಹ ಕೇಳಿ ಬಂದಿವೆ. ಸಿನಿಮಾ ನೋಡಿರುವ ಬಹುತೇಕ ಮಂದಿ ಪ್ರಭಾಸ್ ಅವರ ಅತಿಥಿ ಪಾತ್ರವನ್ನು ಕೊಂಡಾಡಿದ್ದಾರೆ. ಮಂಚು ವಿಷ್ಣು ನಟನೆ ಕೊಂಡಾಡಿರುವವರ ಸಂಖ್ಯೆ ವಿರಳಾತಿವಿರಳ. ಪರೀಕ್ಷೆ ಬರೆದಿದ್ದು ಮಂಚು ವಿಷ್ಣು ಆದರೆ, ಪಾಸ್ ಆಗಿದ್ದು ಪ್ರಭಾಸ್ ಎಂಬಂತಾಗಿದೆ.

ಸಿನಿಮಾ ನೋಡಿರುವ ಆರ್​ಸಿಬಿ ಅಭಿಮಾನಿ ಒಬ್ಬ, ‘ಒಳ್ಳೆಯ ಹಿನ್ನೆಲೆ ಸಂಗೀತ ಹೊಂದಿರುವ ಒಂದು ಒಳ್ಳೆ ಸಿನಿಮಾ. ಪ್ರಭಾಸ್ ಅವರ ಅತಿಥಿ ಪಾತ್ರ ಬಹಳ ಪ್ರಧಾನವಾದುದು, ಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಪಾತ್ರ ಅದು. ಪ್ರಭಾಸ್​ಗಾಗಿ ಭಾರಿ ಎಲಿವೇಷನ್ ಸೀನ್​ಗಳನ್ನು ಸೃಷ್ಟಿಸದೇ ಇರುವುದು ಒಳ್ಳೆಯದೇ ಆಯಿತು’ ಎಂದಿದ್ದಾರೆ. ಪ್ಲೂಟೋ ನಾಯ್ಡು ಎಂಬಾತ ಟ್ವೀಟ್ ಮಾಡಿದ್ದು, ‘ಕಣ್ಣಪ್ಪ’ ಸಿನಿಮಾದ ಕತೆ ಇರುವುದೇ ಸಿನಿಮಾದ ಕೊನೆಯ ಒಂದು ಗಂಟೆಯಲ್ಲಿ, ಅದರಲ್ಲಿ 20 ನಿಮಿಷ ಪ್ರಭಾಸ್ ಸೀನ್​ಗಳೇ ಇವೆ. ಸುಮ್ಮನೆ ಮೂರು ಗಂಟೆ ಸಿನಿಮಾ ಮಾಡುವ ಬದಲು 20 ನಿಮಿಷದ ಶಾರ್ಟ್ ಮೂವಿ ಮಾಡಬಹುದಿತ್ತು’ ಎಂದು ಕಾಲೆಳೆದಿದ್ದಾರೆ.

ಪೀಟರ್ ಎಂಬುವರು ಟ್ವೀಟ್ ಮಾಡಿ, ‘ಸಿನಿಮಾ ನೋಡಿ ಮುಗಿಸಿದೆ. ಸಾಧಾರಣವಾದ ಸಿನಿಮಾ ಅಷ್ಟೆ, ಅದ್ಭುತ ಎನ್ನುವಂಥಹದ್ದು ಏನೂ ಇಲ್ಲ. ಪ್ರಭಾಸ್ ಇರುವ ಸೀನ್​ಗಳು ಚೆನ್ನಾಗಿವೆ. ಇನ್ನೂ ಚೆನ್ನಾಗಿ ಬರೆಯಬಹುದಿತ್ತು. ಸಿನಿಮಾದ ಸಂಗೀತ ಅದ್ಭುತವಾಗಿದೆ. ಸಿನಿಮಾದ ಕ್ಲೈಮ್ಯಾಕ್ಸ್​​ನಲ್ಲಿ ತಿನ್ನರ ಕಣ್ಣಪ್ಪನಾಗಿ ಬದಲಾಗುವುದು ಚೆನ್ನಾಗಿದೆ. ಇನ್ನುಳಿದದ್ದೆಲ್ಲ ಸಪ್ಪೆ’ ಎಂದಿದ್ದಾರೆ.

ಇದನ್ನೂ ಓದಿ:‘ಕಣ್ಣಪ್ಪ’ ಸಿನಿಮಾಕ್ಕೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಪಡೆದ ಸಂಭಾವನೆ ಎಷ್ಟು?

ರಾಮು ಎಂಬುವರು ಸಿನಿಮಾಕ್ಕೆ ಐದರಲ್ಲಿ 3 ಅಂಕಗಳನ್ನು ನೀಡಿದ್ದಾರೆ. ಮಂಚು ವಿಷ್ಣು ನಟನೆ ಎರಡನೇ ಅರ್ಧದಲ್ಲಿ ಚೆನ್ನಾಗಿದೆ. ಪ್ರಭಾಸ್ ಎಂಟ್ರಿ, ಸ್ಕ್ರೀನ್ ಪ್ರೆಸೆನ್ಸ್ ಅದ್ಭುತ. ಅಕ್ಷಯ್ ಕುಮಾರ್-ಕಾಜೊಲ್ ಎಂಟ್ರಿ ಚೆನ್ನಾಗಿದೆ. ಮೋಹನ್​ಲಾಲ್ ಮತ್ತು ಮೋಹನ್ ಬಾಬು ಸೀನ್​ಗಳು ಚೆನ್ನಾಗಿವೆ. ಸಿನಿಮಾದ ಆಕ್ಷನ್ ಚೆನ್ನಾಗಿಲ್ಲ ಹಾಗೂ ಸಿನಿಮಾದಲ್ಲಿ ಬರುವ ಲವ್ ಆಂಗಲ್ ಸಹ ಚೆನ್ನಾಗಿಲ್ಲ ಎಂದು ತೀರ್ಪು ನೀಡಿದ್ದಾರೆ.

ಶನ್ಮುಖ್ ಎಂಬುವರು ಟ್ವೀಟ್ ಮಾಡಿ, ಸಿನಿಮಾದ ಪೋಷಕ ಪಾತ್ರಗಳು ಚೆನ್ನಾಗಿಲ್ಲ, ನಟನೆಯೂ ಚೆನ್ನಾಗಿಲ್ಲ. ಕೆಲವು ಭಾಗಗಳಲ್ಲಿ ವಿಎಫ್​ಎಕ್ಸ್ ಅತ್ಯಂತ ಕೆಟ್ಟದಾಗಿದೆ. ಸಿನಿಮಾದ ಸಂಗೀತ ಚೆನ್ನಾಗಿದೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾನಲ್ಲಿ ಮಂಚು ವಿಷ್ಣು ನಟನೆ ಚೆನ್ನಾಗಿದೆ. ಮೋಹನ್ ಲಾಲ್ ಮತ್ತು ಮೋಹನ್ ಬಾಬು ಅವರಿಂದ ಸಿನಿಮಾಕ್ಕೆ ಏನೂ ಒಳ್ಳೆಯದಾಗಿಲ್ಲ. ಪ್ರಭಾಸ್ ಡೈಲಾಗ್ ಡೆಲಿವರಿ ಅಷ್ಟೇನೂ ಚೆನ್ನಾಗಿಲ್ಲ. ಇದೊಂದು ಸಾಧಾರಣ ಸಿನಿಮಾ ಅಷ್ಟೆ ಎಂದಿದ್ದಾರೆ.

ಆರ್ಟಿಸ್ಟ್ ಅಹಾದ್ ಎಂಬುವರು ಟ್ವೀಟ್ ಮಾಡಿ, ‘ಕಣ್ಣಪ್ಪ ಒಂದೊಳ್ಳೆ ಸಿನಿಮ್ಯಾಟಿಕ್ ಜರ್ನಿ. ಮಂಚು ವಿಷ್ಣು ಅವರದ್ದು ಬಹಳ ಭಾವುಕ ಪಾತ್ರ. ಶಿವನಾಗಿ ಅಕ್ಷಯ್ ಕುಮಾರ್ ನಟನೆ ಅದ್ಭುತ. ಪ್ರಭಾಸ್ ಮತ್ತು ಮೋಹನ್​​ಲಾಲ್ ಅತಿಥಿ ಪಾತ್ರಗಳು ಅದ್ಭುತವಾಗಿವೆ. ಕೊನೆಯ 40 ನಿಮಿಷ ಅದ್ಭುತವಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ