ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic City) ಬಳಿಯ ಜಿಆರ್ ಫಾರ್ಮ್ಸ್ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಹೇಮಾ (Hema), ಅಂದು ಪಾರ್ಟಿಯಲ್ಲಿ ಹಾಜರಿದ್ದರು ಎಂಬುದನ್ನು ಪೊಲೀಸ್ ಆಯುಕ್ತರು ಖಾತ್ರಿಪಡಿಸಿದ್ದಾರೆ. ಅಲ್ಲದೆ ಅಂದು ತೆಗೆದುಕೊಂಡಿದ್ದ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿ ಹೇಮಾ ಮಾದಕ ವಸ್ತು ಸೇವಿಸಿದ್ದರು ಎಂಬುದು ಖಾತ್ರಿಯಾಗಿದೆ. ಇದರ ನಡುವೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ನಟಿ ಹೇಮಾ ಬೆಂಬಲಕ್ಕೆ ನಿಂತಿದ್ದು, ಹೇಮಾ ವಿರುದ್ಧ ಕೆಲ ಮಾಧ್ಯಮಗಳು ಆಧಾರ ರಹಿತ ಆರೋಪ ಮಾಡುತ್ತಿವೆ ಎಂದಿದ್ದಾರೆ.
ತೆಲುಗು ಕಲಾವಿದರ ಸಂಘದ ಅಧ್ಯಕ್ಷರಾಗಿರುವ ನಟ ಮಂಚು ವಿಷ್ಣು ಈ ಸಂಬಂಧ ಟ್ವೀಟ್ ಮಾಡಿದ್ದು, ‘ಇತ್ತೀಚೆಗೆ ನಡೆದಿದೆ ಎನ್ನಲಾದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ಹಾಗೂ ವ್ಯಕ್ತಿಗಳು ನಟಿ ಹೇಮಾ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಯಾರೂ ಸಹ ಈಗಲೇ ನಿರ್ಧಾರಕ್ಕೆ ಬಂದು ಸತ್ಯವಲ್ಲದ ವರದಿಗಳನ್ನು ಇತರರಿಗೆ ಹಂಚಿಕೊಳ್ಳುವುದು ಬೇಡ ಎಂದು ನಾನು ಮನವಿ ಮಾಡುತ್ತೇನೆ’ ಎಂದಿದ್ದಾರೆ.
‘ಹೇಮಾ ಮೇಲಿನ ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆಕೆ ಒಬ್ಬ ತಾಯಿ, ಹೆಂಡತಿ ಹಾಗೂ ಮಹಿಳೆ ಅದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಆಕೆಯ ವ್ಯಕ್ತಿತ್ವದ ಬಗ್ಗೆ ಲಘುವಾದ ಹೇಳಿಕೆಗಳನ್ನು ಪಾಸ್ ಮಾಡುವುದು ಸೂಕ್ತವಲ್ಲ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಹೇಮಾ ಅವರ ವಿರುದ್ಧ ಪೊಲೀಸರು ಘನವಾದ ಸಾಕ್ಷಿಯನ್ನು ಸಾಭೀತುಪಡಿಸಿದರೆ ಕಲಾವಿದರ ಸಂಘವು ಹೇಮಾ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಿದೆ. ಆದರೆ ಅಲ್ಲಿಯ ವರೆಗೆ ದಯವಿಟ್ಟು ಈ ವಿಷಯದ ಬಗ್ಗೆ ಸಂವೇದನಾರಹಿತವಾದ ಚರ್ಚೆ ಬೇಡ’ ಎಂದಿದ್ದಾರೆ.
ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ, ಆಶು ರೈ ರಿಪೋರ್ಟ್ ಪಾಸಿಟಿವ್
ನಟಿ ಹೇಮಾ, ತೆಲುಗು ಕಲಾವಿದರ ಸಂಘದ ಪದಾಧಿಕಾರಿಯಾಗಿದ್ದಾರೆ. ಮಂಚು ವಿಷ್ಣು ಅವರ ಸಿಂಡಿಕೇಟ್ನಿಂದಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಚುನಾವಣೆ ಸಮಯದಲ್ಲಿ ಗಲಾಟೆಯಾಗಿ ಎದುರಾಳಿ ಸಿಂಡಿಕೇಟ್ಗೆ ಸೇರಿದ್ದ ಶಿವು ಬಾಲಾಜಿಯ ಕೈಯನ್ನು ಹೇಮಾ ಕಚ್ಚಿದ್ದರು.
ಇದೀಗ ಹೇಮಾ ಹೆಸರು ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ. ಹೇಮಾ, ವಿಡಿಯೋ ಒಂದನ್ನು ಬಿಡುಗಡೆ ಮಾಡಿ ತಾವು ರೇವ್ ಪಾರ್ಟಿಯಲ್ಲಿ ಇರಲಿಲ್ಲವೆಂದು ತಾವು ಹೈದರಾಬಾದ್ನಲ್ಲಿ ಇರುವುದಾಗಿ ಹೇಳಿಕೊಂಡಿದ್ದರು. ಆದರೆ ಅಸಲಿಗೆ ಹೇಮಾ ಪಾರ್ಟಿಯಲ್ಲಿದ್ದರು ಎಂದು ಸ್ವತಃ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಅಲ್ಲದೆ, ಪರೀಕ್ಷೆಗೆ ಕಳಿಸಲಾಗಿದ್ದ ಹೇಮಾರ ರಕ್ತದ ಮಾದರಿಯ ವರದಿ ಪಾಸಿಟಿವ್ ಬಂದಿದ್ದು, ಹೇಮಾ ಡ್ರಗ್ಸ್ ಸೇವಿಸಿದ್ದರು ಎನ್ನಲಾಗುತ್ತಿದೆ. ನಟಿಯನ್ನು ಬೆಂಗಳೂರು ಪೊಲೀಸರು ಶೀಘ್ರವೇ ವಿಚಾರಣೆಗೆ ಕರೆಯಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ