ಜಾತಿ ವೈಷಮ್ಯಕ್ಕೆ ತಿರುಗಿದ ರೌಡಿ ಕೊಲೆ: ನಿರ್ದೇಶಕ ಪಾ ರಂಜಿತ್ ವಿರುದ್ಧ ಪ್ರಕರಣ ದಾಖಲು
ತಮಿಳುನಾಡಿನ ತಿರುನಾಲ್ವೇಲಿಯಲ್ಲಿ ದೀಪಕ್ ರಾಜಾ ಹೆಸರಿನ ರೌಡಿಯ ಕೊಲೆಯಾಗಿದ್ದು, ಆ ಕೊಲೆ ಜಾತಿ ವೈಷಮ್ಯದ ತಿರುವು ಪಡೆದುಕೊಂಡಿದೆ. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪಾ ರಂಜಿತ್ ವಿರುದ್ಧ ದೂರು ದಾಖಲಾಗಿದೆ.
ತಮಿಳುನಾಡಿನ ತಿರುನಾಲ್ವೇಲಿಯಲ್ಲಿ ನಡೆದಿರುವ ರೌಡಿಯೊಬ್ಬನ ಕೊಲೆ ಜಾತಿ ವೈಷಮ್ಯದ ತಿರುವು ಪಡೆದುಕೊಂಡಿದ್ದು, ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಪಾ ರಂಜಿತ್ (Pa Ranjith) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 21 ರಂದು ರೌಡಿ ದೀಪಕ್ ರಾಜಾ ಅನ್ನು ಕೆಲವರು ಹಾಡಹಗಲೆ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ದೊಡ್ಡ ಸುದ್ದಿಯಾಗಿತ್ತು.
ಈ ಕೊಲೆ ಪ್ರಕರಣ ತಿರುನಾಲ್ವೇಲಿ ಜಾತಿ ವೈಷಮ್ಯಕ್ಕೆ ತಿರುಗಿದ್ದು, ದೀಪಕ್ ರಾಜಾ ಹಾಗೂ ಕೊಲೆಗಾರರ ಜಾತಿಗಳನ್ನು ಆಧಾರವಾಗಿಟ್ಟುಕೊಂಡು ಕೆಲವು ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹರಿದಾಡುತ್ತಿವೆ. ದಲಿತ ಹೋರಾಟಗಾರರೂ ಆಗಿರುವ ನಿರ್ದೇಶಕ ಪಾ ರಂಜಿತ್ ಅವರದ್ದು ಎನ್ನಲಾದ ಸಾಮಾಜಿಕ ಜಾಲತಾಣ ಖಾತೆಯಿಂದ ದೀಪಕ್ ರಾಜಾ ಕೊಲೆಯನ್ನು ಸಂಬಂಧಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಆ ಪೋಸ್ಟ್ ಎರಡು ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುತ್ತಿದೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರಕ್ಕೆ ಸಿಕ್ತು ವಸಿಷ್ಠ ಸಿಂಹ, ಪಾ. ರಂಜಿತ್ ಬೆಂಬಲ
ಪಾ ರಂಜಿತ್ ಸಿನಿಮಾಗಳಲ್ಲಿ ದಲಿತ ಸಂವೇದನೆಗಳು ಇದ್ದೇ ಇರುತ್ತವೆ. ದಲಿತ ಹೋರಾಟಗಾರರಾಗಿರುವ ರಂಜಿತ್, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಆಗಾಗ್ಗೆ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸುತ್ತಿರುತ್ತಾರೆ. ಇದೀಗ ಅದೇ ರೀತಿಯ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ.
‘ಕಾಲ’, ‘ಕಬಾಲಿ’, ‘ಸರ್ಪಟ್ಟ ಪರಂಬರೈ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಾ ರಂಜಿತ್, ಇದೀಗ ಚಿಯಾನ್ ವಿಕ್ರಂ ನಟಿಸಿರುವ ‘ತಾಂಗಾಲನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಕೋಲಾರದಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು, ‘ಕೆಜಿಎಫ್’ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:04 pm, Sat, 25 May 24