‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರಕ್ಕೆ ಸಿಕ್ತು ವಸಿಷ್ಠ ಸಿಂಹ, ಪಾ. ರಂಜಿತ್ ಬೆಂಬಲ
‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಸಿಷ್ಠ ಸಿಂಹ ಮತ್ತು ಪಾ. ರಂಜಿತ್ ಅವರು ಈ ಟೀಸರ್ ಬಿಡುಗಡೆ ಮಾಡಿದ್ದಾರೆ. ವಿವಾನ್ ಕೆ.ಕೆ. ಮತ್ತು ಅನುಷಾ ರೈ ಅವರು ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಎ.ಆರ್. ಸಾಯಿರಾಮ್ ನಿರ್ದೇಶನ, ಆನಂದ್ ಬಾಬು ಜಿ. ನಿರ್ಮಾಣ ಮಾಡಿದ್ದಾರೆ.
ಟೀಸರ್ ಮೂಲಕ ‘ಧೈರ್ಯಂ ಸರ್ವತ್ರ ಸಾಧನಂ’ (Dhairyam Sarvatra Sadhanam) ಗಮನ ಸೆಳೆಯುತ್ತಿದೆ. ಈ ಸಿನಿಮಾದ ಶೀರ್ಷಿಕೆಯನ್ನು ಶಾರ್ಟ್ ಆಗಿ ‘ಡಿಎಸ್ಎಸ್’ (DSS) ಎಂದೂ ಕರೆಯಲಾಗುತ್ತಿದೆ. ಎ.ಆರ್. ಸಾಯಿರಾಮ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಟೀಸರ್ ಅನ್ನು ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಅವರು ಬಿಡುಗಡೆ ಮಾಡಿದ್ದಾರೆ. ಈ ಟೀಸರ್ನಲ್ಲಿ ಇರುವ ಒಂದು ದೃಶ್ಯ ಅವರಿಗೆ ವಿಶೇಷ ಎನಿಸಿದೆ. ಮಲಗಿರುವ ವ್ಯಕ್ತಿಯ ಬೆನ್ನಿನ ಮೇಲೆ ಇನ್ನೂ ಮೂವರು ಒಬ್ಬರ ಮೇಲೊಬ್ಬರಂತೆ ನಿಂತುಕೊಂಡಿರುವುದು ಈ ಟೀಸರ್ನಲ್ಲಿ ಹೈಲೈಟ್ ಆಗಿದೆ. ಅದರ ಹಿಂದಿರುವ ಕಥೆ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
‘ಒಳ್ಳೆಯ ಸಂದೇಶದ ಜೊತೆಗೆ, ಸಮಾಜದಲ್ಲಿ ನಡೆದಿರುವ ವಿಷಯಗಳನ್ನು ಪರೆದೆ ಮೇಲೆ ತೋರಿಸಿರುವುದು ಟೀಸರ್ನಲ್ಲಿ ಕಾಣಿಸಿದೆ. ಇಂತಹ ಚಿತ್ರಗಳು ಜನರಿಗೆ ಹೆಚ್ಚು ತಲುಪಬೇಕು’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ. ಆ ಮೂಲಕ ಅವರು ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಅದೇ ರೀತಿ, ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಸಿನಿಮಾಗೆ ನಿರ್ದೇಶನ ಮಾಡಿರುವ ತಮಿಳಿನ ಪಾ. ರಂಜಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ತಾವು ಕೂಡ ಈ ಸಿನಿಮಾ ನೋಡಲು ಕಾದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಬರುತ್ತಿದೆ ‘ಗಂಗೆ-ಗೌರಿ’ ಸಿನಿಮಾ, ಇದು ‘ಕೈಲಾಸ’ದ ಕತೆ
‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಗೆ ‘ಎ.ಪಿ. ಪ್ರೊಡಕ್ಷನ್’ ಮೂಲಕ ಉದ್ಯಮಿ ಆನಂದ್ ಬಾಬು ಜಿ. ಅವರು ಬಂಡವಾಳ ಹೂಡಿದ್ದಾರೆ. ಹೀರೋ ಆಗಿ ವಿವಾನ್ ಕೆ.ಕೆ. ನಟಿಸಿದ್ದಾರೆ. ನಾಯಕಿಯಾಗಿ ಅನುಷಾ ರೈ ಅಭಿನಯಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಯಶ್‌ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಬಾಲ ರಾಜವಾಡಿ, ವರ್ಧನ್, ಪ್ರದೀಪ್ ಪೂಜಾರಿ, ರಾಮ್ ಪವನ್ ಶೆಟ್ಟಿ, ರಾಮ್ ನಾಯಕ್, ಅರ್ಜುನ್ ಪಾಳೆಗಾರ, ಪದ್ಮಿನಿ ಶೆಟ್ಟಿ, ಹೊಂಗಿರಣ ಚಂದ್ರು ಮುಂತಾದವರು ನಟಿಸಿದ್ದಾರೆ.
‘ಎ2’ ಮ್ಯೂಸಿಕ್ ಮೂಲಕ ಬಿಡುಗಡೆ ಆಗಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಟೀಸರ್ ನೋಡಿ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಯಾವುದೇ ಗ್ರಾಫಿಕ್ಸ್ ಬಳಸದೆ ರಿಯಲಿಸ್ಟಿಕ್ ಆಗಿ ಚಿತ್ರೀಕರಣ ಮಾಡಿರುವುದು ಈ ಸಿನಿಮಾದ ವಿಶೇಷ. ಟೀಸರ್ ಗಮನಿಸಿದರೆ, ಇದು ಶೋಷಣೆಗೆ ಒಳಗಾದವರ ಸಿನಿಮಾ ಎಂಬುದು ತಿಳಿಯುತ್ತದೆ. ಬಡವ-ಶ್ರೀಮಂತ, ಅಪ್ಪ-ಮಗನ ಕಥೆ ಕೂಡ ಇದರಲ್ಲಿ ಇರಲಿದೆಯೇ ಎಂಬ ಕುತೂಹಲವನ್ನು ಮೂಡಿಸಿದೆ.
ಜ್ಯೂಡಾ ಸ್ಯಾಂಡಿ ಅವರು ಈ ಸಿನಿಮಾದ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹೃದಯಶಿವ, ಅರಸು ಅಂತಾರೆ, ಕಿನ್ನಾಳ್‌ರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ರವಿಕುಮಾರ್ ಸನಾ ಅವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಕುಂಗ್ಫು ಚಂದ್ರು ಅವರು ಸಾಹಸ ನಿರ್ದೇಶನ ಹಾಗೂ ಕ್ಯಾಪ್ಟನ್ ಕಿಶೋರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ತುಮಕೂರು, ದೇವರಾಯನದುರ್ಗ, ಕೊರಟಗೆರೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 19 January 24