‘ದಿ ಡಾರ್ಕ್ ವೆಬ್’ ಪತ್ರಕರ್ತರ ಸಿನಿಮಾಕ್ಕೆ ವಸಿಷ್ಠ ಸಿಂಹ ಸಾಥ್
Vasishta Simha: ಪತ್ರಕರ್ತರೇ ಮಾಡಿರುವ ಹೊಸ ಸಿನಿಮಾಕ್ಕೆ ನಟ ವಸಿಷ್ಠ ಸಿಂಹ ಬೆಂಬಲ ನೀಡಿದ್ದಾರೆ.
ಸಿನಿಮಾ (Cinema) ಎಂಬುದು ಮಾಯೆ, ಮೋಹ. ಎಲ್ಲ ಯುವಕನೂ ಸಿನಿಮಾ ಮೇಕರ್ ಆಗಬೇಕು ಅಂದುಕೊಳ್ಳುತ್ತಾನಂತೆ, ಎಲ್ಲ ಹಿರಿಯರೂ ಸಾಹಿತಿ ಆಗಬೇಕು ಎಂದುಕೊಳ್ಳುತ್ತಾರಂತೆ. ಸಾಹಿತಿ ಆಗಬೇಕು ಎಂದು ಹಂಬಲಿಸುವವರಿಗಿಂತಲೂ ಸಿನಿಮಾಕ್ಕಾಗಿ ಹಂಬಲಿಸುವವರ ಸಂಖ್ಯೆ ಬಹಳ ಹೆಚ್ಚು. ಬೇರೆ ಬೇರೆ ಉದ್ಯಮಗಳಲ್ಲಿ ಇರುವವರೂ ಸಹ ಒಮ್ಮೆಯಾದರೂ ಒಂದು ಸಿನಿಮಾ ಮಾಡಬೇಕು ಎಂದು ಅಂದುಕೊಂಡೇ ಇರುತ್ತಾರೆ. ಪತ್ರಕರ್ತರೂ ಇದಕ್ಕೆ ಹೊರತಲ್ಲ. ಆದರೆ ಹಾಸನದ ಕೆಲವು ಪತ್ರಕರ್ತರು ಧೈರ್ಯ ಮಾಡಿ ಸಿನಿಮಾ ಮಾಡಲು ಮುಂದಡಿ ಇಟ್ಟಿದ್ದಾರೆ. ಇದಕ್ಕೆ ನಟ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ.
ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ತಮ್ಮ ಸಿನಿಮಾಸ್ ಬ್ಯಾನರ್ ಮೂಲಕ ಸೈಬರ್ ಕ್ರೈಂ ಆಧರಿತ ‘ದಿ ಡಾರ್ಕ್ ವೆಬ್’ ಹೆಸರಿನ ಸಿನಿಮಾ ಮಾಡಿದ್ದು ಈ ಸಿನಿಮಾ ಇದೀಗ ಬಿಡುಗಡೆಗೆ ತಯಾರಾಗುತ್ತಿದೆ. ಸಿನಿಮಾದ ವಿಶೇಷವೆಂದರೆ ಈ ಸಿನಿಮಾದಲ್ಲಿ ನಟಿಸಿರುವ ಹಲವು ನಟರು ಪತ್ರಕರ್ತರೇ ಆಗಿದ್ದಾರೆ.
ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಆಗಿದ್ದು ಕುತೂಹಲ ಹುಟ್ಟಿಸುವಂತಿದೆ. ‘ದಿ ಡಾರ್ಕ್ ವೆಬ್’ ಸಿನಿಮಾದ ಫಸ್ಟ್ ಲುಕ್ ಅನ್ನು ವಸಿಷ್ಠ ಸಿಂಹ ಬಿಡುಗಡೆ ಮಾಡಿದ್ದಾರೆ. ತಮ್ಮದೇ ಊರಿನ ಪತ್ರಕರ್ತರು ಸೇರಿ ಮಾಡಿರೋ ಸಿನಿಮಾ ಬಗ್ಗೆ ನಟ ವಸಿಷ್ಠ ಮೆಚ್ಚುಗೆಯ ಮಾತುಗಳನ್ನಾಡಿದರು. ಫಸ್ಟ್ ಲುಕ್ ರಿಲೀಸ್ ಮಾಡಿದ ಮಾತಾಡಿದ ವಸಿಷ್ಠ, ‘ಜನನಿ ಜನ್ಮಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಬೇಕು’ ಎಂದರು.
ಇದನ್ನೂ ಓದಿ:ನಟರ ಮೇಲೆ ಗೂಬೆ ಕೂರಿಸಬೇಡಿ: ಕಾವೇರಿ ಕುರಿತು ವಸಿಷ್ಠ ಸಿಂಹ ಮಾತು
‘ದಿ ಡಾರ್ಕ್ ವೆಬ್’ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿದ್ದಾರೆ. ಮಂಜು ಬನವಾಸೆ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಕಿರಣ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಚಂದ್ರಮೌಳಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿವಿಲ್ ಆಗಿದ್ದು ಶೀಘ್ರದಲ್ಲಿಯೇ ಟೀಸರ್ ಬಿಡುಗಡೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿಕೊಂಡಿದೆ.
ಪತ್ರಕರ್ತರು ಸಿನಿಮಾ ಮಾಡಿರುವುದು ಹೊಸದೇನೂ ಅಲ್ಲ. ಆರಂಭದಲ್ಲಿ ಪತ್ರಕರ್ತರಾಗಿ ಆ ನಂತರ ಸಿನಿಮಾಕ್ಕೆ ಸೆಳೆತಕ್ಕೆ ಸಿಲುಕಿ ಸಿನಿಮಾ ಕರ್ಮಿಗಳಾದ ಹಲವರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ ಕೆಲವರು ಯಶಸ್ಸಿಗಾಗಿ ಹಂಬಲಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ