ತೆಲುಗು ಚಿತ್ರರಂಗದ ತಾರಾ ಕುಟುಂಬಗಳಲ್ಲಿ ಒಂದು ಮಂಚು ಕುಟುಂಬ. ಮೋಹನ್ ಬಾಬು ತೆಲುಗು ಚಿತ್ರರಂಗದ ಜನಪ್ರಿಯ ನಟ. ಚಿರಂಜೀವಿಗಿಂತಲೂ ಹೆಚ್ಚು ಸಿನಿಮಾಗಳು, ಹೆಚ್ಚು ಸಂಭಾವನೆಯನ್ನು ಒಂದು ಸಮಯದಲ್ಲಿ ಪಡೆಯುತ್ತಿದ್ದರು ಮೋಹನ್ ಬಾಬು. ಇವರ ಮಕ್ಕಳು ಸಹ ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಕುಟುಂಬದಲ್ಲಿ ಈಗ ಎಲ್ಲವೂ ಸರಿಯಿಲ್ಲ. ಕುಟುಂಬದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಂಚು ಕುಟುಂಬದ ಕಿರಿಯ ಸದಸ್ಯ ಮತ್ತು ನಟ ಮಂಜು ಮನೋಜ್, ತಮ್ಮ ತಂದೆ ಮೋಹನ್ ಬಾಬು ವಿರುದ್ಧವೇ ದೂರು ನೀಡಿದ್ದಾರೆ.
ಮೋಹನ್ ಬಾಬು ತನ್ನ ಮೇಲೆ ಹಾಗೂ ತನ್ನ ಪತ್ನಿ, ಮಕ್ಕಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ಮಂಚು ಮನೋಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋಹನ್ ಬಾಬು ದಾಳಿಯಿಂದ ತಮಗೆ ತಮ್ಮ ಕುಟುಂಬದವರಿಗೆ ಗಾಯಗಳಾಗಿವೆ ಎಂದು ಮಂಚು ಮನೋಜ್ ಆರೋಪ ಮಾಡಿದ್ದಾರೆ. ಗಾಯಗಳೊಂದಿಗೆ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಮಂಚು ಮನೋಜ್, ತಮ್ಮ ಸಹೋದರ ಮಂಚು ವಿಷ್ಣು ವಿರುದ್ಧವೂ ಇದೇ ರೀತಿ ದೂರು ದಾಖಲಿಸಿದ್ದರು.
ಹಿರಿಯ ನಟ ಮೋಹನ್ ಬಾಬು ಸಹ ಪುತ್ರ ಮಂಚು ಮನೋಜ್ ವಿರುದ್ಧ ದೂರು ನೀಡಿದ್ದಾರೆ. ಮನೋಜ್ ನನ್ನ ಮೇಲೆ ದಾಳಿ ಮಾಡಿದ್ದಾನೆ ಹಲ್ಲೆ ಮಾಡಿದ್ದಾನೆ ಎಂದು ಮೋಹನ್ ಬಾಬು ಸಹ ದೂರು ನೀಡಿದ್ದಾರೆ. ಮಂಚು ಕುಟುಂಬಕ್ಕೆ ಸೇರಿದ ಕೋಟ್ಯಂತರ ಮೌಲ್ಯದ ಶಾಲಾ-ಕಾಲೇಜು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಿಂದಲೂ ಕುಟುಂಬದಲ್ಲಿ ವಿವಾದಗಳು ನಡೆಯುತ್ತಿದ್ದು, ಅದೇ ಕಾರಣಕ್ಕೆ ಈಗ ಅಪ್ಪ-ಮಗನ ನಡುವೆ ಜಗಳ ಆಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ
ಮಂಚು ಕುಟುಂಬದಲ್ಲಿ ಕಳೆದ ಕೆಲ ವರ್ಷಗಳಿಂದಲೂ ಆಸ್ತಿಗಳಿಗೆ ಸಂಬಂಧಿಸಿದಂತೆ ಸಮಸ್ಯೆ ನಡೆಯುತ್ತಲೇ ಇದೆ. ಕಳೆದ ವರ್ಷ, ಮಂಚು ಮನೋಜ್, ತಮ್ಮ ಸಹೋದರ ಮಂಚು ವಿಷ್ಣು ತಮ್ಮ ಮೇಲೆ ಹಾಗೂ ತಮ್ಮ ನೌಕರನ ಮೇಲೆ ದಾಳಿ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದ ಎಂದು ದೂರು ದಾಖಲಿಸಿದ್ದರು. ನೌಕರನ ಮನೆಯೊಂದಕ್ಕೆ ಮಂಚು ವಿಷ್ಣು ಬಂದು ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ಮಂಚು ಮನೋಜ್ ಬಿಡುಗಡೆ ಮಾಡಿದ್ದರು.
ಮೋಹನ್ ಬಾಬು ತೆಲುಗು ಚಿತ್ರರಂಗದ ಹಿರಿಯ ನಟರಾಗಿದ್ದು, ಕನ್ನಡದ ನಟರೊಂದಿಗೆ ಆಪ್ತ ಬಂಧ ಹೊಂದಿದ್ದರು. ಅಂಬರೀಶ್ ಅವರ ಆಪ್ತ ಗೆಳೆಯರಾಗಿದ್ದ ಮೋಹನ್ ಬಾಬು ಅಂಬರೀಶ್ ನಿಧನ ಹೊಂದಿದ್ದಾಗ ಕೆಲವು ದಿನ ಬೆಂಗಳೂರಿನಲ್ಲಿಯೇ ಇದ್ದರು. ಅಣ್ಣಾವ್ರ ಕುಟುಂಬಕ್ಕೂ ಹತ್ತಿರದ ಬಂಧವನ್ನು ಇವರು ಹೊಂದಿದ್ದರು. ಅಪ್ಪು ನಿಧನ ಹೊಂದಿದ ಬಳಿಕ ನಡೆದ ಸಂತಾಪ ಸಭೆಗಳಲ್ಲಿ ಮಂಚು ಮನೋಜ್ ಭಾಗವಹಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ