ಮಲಯಾಳಂ (Malayalam) ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’ (Manjummel boys) ಸೂಪರ್ ಡೂಪರ್ ಹಿಟ್ ಆಗಿದೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಆಗಿದ್ದು, ಕಮಲ್ ಹಾಸನ್ ನಟನೆಯ ತಮಿಳಿನ ‘ಗುಣ’ ಸಿನಿಮಾದ ಕನೆಕ್ಷನ್ ಈ ಸಿನಿಮಾಕ್ಕಿದೆ. ‘ಗುಣ’ ಸಿನಿಮಾದ ಚಿತ್ರೀಕರಣ ನಡೆದಿದ್ದ ಗುಹೆಗೆ ಹೋದಾಗ ನಡೆದ ಅವಘಡ ಹಾಗೂ ಆ ಅನಿರೀಕ್ಷಿತ ಅವಘಡದಿಂದ ಒಂದು ಸ್ನೇಹಿತರ ತಂಡ ಹೇಗೆ ಹೊರಗೆ ಬರುತ್ತದೆ ಎಂಬುದೇ ಈ ಸಿನಿಮಾದ ಕತೆ. ಸಿನಿಮಾದಲ್ಲಿ ತಮಿಳಿನ ಗುಣ ಸಿನಿಮಾದ ಸೂಪರ್ ಹಿಟ್ ಹಾಡು ‘ಕಣ್ಮನಿ’ಯನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದ ಹೈಲೆಟ್ ಆ ಹಾಡು. ಆದರೆ ‘ಗುಣ’ ಸಿನಿಮಾದ ಸಂಗೀತ ನಿರ್ದೇಶಕ ಇಳಯರಾಜ ತಮ್ಮ ಹಾಡನ್ನು ಅನುಮತಿ ಇಲ್ಲದೇ ಬಳಸಿರುವುದಕ್ಕೆ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರಿಗೆ ನೊಟೀಸ್ ನೀಡಿದ್ದರು. ಇದೀಗ ನಿರ್ಮಾಪಕರು ಇಳಯರಾಜ ಅವರ ನೊಟೀಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರಿಗೆ ನೊಟೀಸ್ ನೀಡಿದ್ದ ಇಳಯರಾಜ, ತಮ್ಮ ಎಲ್ಲ ಹಾಡುಗಳಿಗೂ ಮೂಲ ಮಾಲೀಕ ತಾವೇ ಆಗಿದ್ದು, ಕ್ರಿಯಾತ್ಮಕ ಹಕ್ಕು ತಮ್ಮದೇ ಆಗಿರುತ್ತದೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರು ನನ್ನ ಸಂಗೀತ ಸಂಯೋಜನೆಯ ಹಾಡನ್ನು ತಮ್ಮ ಸಿನಿಮಾದಲ್ಲಿ ಬಳಸಲು ನನ್ನ ಅನುಮತಿ ಪಡೆದಿಲ್ಲ, ಟೈಟಲ್ ಕಾರ್ಡ್ನಲ್ಲಿ ನನ್ನ ಹೆಸರು ಬಳಸಿರುವುದು ನನ್ನ ಅನುಮತಿ ದೊರೆತಿದೆ ಎಂದರ್ಥವಲ್ಲ’ ಎಂದಿದ್ದರು.
ಇದನ್ನೂ ಓದಿ:ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್ಲಾಲ್; ಇಲ್ಲಿದೆ ವಿಡಿಯೋ
ಇದೀಗ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ಶಾನ್ ಆಂಟೊನಿ ಈ ಬಗ್ಗೆ ಮಾತನಾಡಿದ್ದು, ‘ಗುಣ’ ಸಿನಿಮಾದ ಆಡಿಯೋ ಹಕ್ಕುಗಳು ಎರಡು ಸಂಸ್ಥೆಗಳ ಬಳಿ ಇದ್ದವು. ಎರಡೂ ಸಂಸ್ಥೆಗಳಿಂದಲೂ ನಾವು ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ನಾಯಕ ಕಮಲ್ ಹಾಸನ್ ಅವರೊಂದಿಗೆ ಸಂವಾದವನ್ನು ಸಹ ಚಿತ್ರತಂಡ ಮಾಡಿತ್ತು.
ಇಳಯರಾಜ, ಈ ಮೊದಲು ಸಹ ಹಲವರಿಗೆ ಇದೇ ರೀತಿಯ ನೊಟೀಸ್ಗಳನ್ನು ಕಳುಹಿಸಿದ್ದಾರೆ. ತಾವು ರಾಗ ಸಂಯೋಜಿಸಿದ ಹಾಡುಗಳನ್ನು ಬಳಸಿದ್ದಕ್ಕೆ, ಹೆಸರು ಬಳಸಿದ್ದಕ್ಕೆ ಮಾತ್ರವೇ ಅಲ್ಲದೆ ಲೈವ್ ಶೋಗಳಲ್ಲಿ ತಮ್ಮ ಹಾಡುಗಳನ್ನು ಹಾಡಿದವರಿಗೂ ಸಹ ನೊಟೀಸ್ಗಳನ್ನು ಇಳಯರಾಜ ಕಳಿಸಿದ್ದರು. ಅವರ ಆತ್ಮೀಯ ಸ್ನೇಹಿತ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಸಹ ಇಳಯರಾಜ ನೊಟೀಸ್ ನೀಡಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ