
‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟ ವಿಜಯ್ ದೇವರಕೊಂಡ ಟಾಲಿವುಡ್ನ ಬೇಡಿಕೆಯ ನಟ. ಅವರು ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್ಗೂ ಕಾಲಿಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಅವರು ಎಂಟ್ರಿ ನೀಡುತ್ತಿದ್ದಾರೆ ಎನ್ನುವುದನ್ನು ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಈಗ ದೀಪಾವಳಿ ಪ್ರಯುಕ್ತ ಮೈಕ್ ಟೈಸನ್ ಲುಕ್ ಅನಾವರಣಗೊಂಡಿದೆ. ಇದನ್ನು ನೋಡಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ಬಾಕ್ಸಿಂಗ್ ಜಗತ್ತಿನಲ್ಲಿ ಅಮೆರಿಕದ ಮೈಕ್ ಟೈಸನ್ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್’ ಸಿನಿಮಾ ತಂಡ ಭಾರತಕ್ಕೆ ಬರುವಂತೆ ಆಹ್ವಾನ ನೀಡಿತ್ತು. ಆದರೆ, ಈ ವಿಚಾರದಲ್ಲಿ ಅವರು ಷರತ್ತೊಂದನ್ನು ಹಾಕಿದ್ದರು. ತಮ್ಮ ಭಾಗದ ಶೂಟ್ಅನ್ನು ಅಮೆರಿಕದಲ್ಲೇ ಮಾಡಬೇಕು ಎಂದು ಹೇಳಿದ್ದರು. ಇದಕ್ಕಾಗಿ ಚಿತ್ರತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಶೂಟಿಂಗ್ ಪೂರ್ಣಗೊಳಿಸಿತ್ತು. ಈಗ ಮೈಕ್ ಟೈಸನ್ ಲುಕ್ ಅನಾವರಣ ಮಾಡಲಾಗಿದೆ.
ಚಿತ್ರತಂಡ ರಿಲೀಸ್ ಮಾಡಿರುವ ಫಸ್ಟ್ ಲುಕ್ ಸಾಕಷ್ಟು ಗಮನ ಸೆಳೆದಿದೆ. ಮೈಕ್ ಮುಖದಲ್ಲಿ ಕ್ರೋಧ ಕುದಿಯುತ್ತಿದೆ. ಕೈಯಲ್ಲಿ ಬೆಂಕಿಯ ಚೆಂಡಿದೆ. ಈ ಪೋಸ್ಟರ್ ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿ ಅವರ ಪೋರ್ಷನ್ ಹೇಗಿರಲಿದೆ ಎನ್ನುವ ಕುತೂಹಲವೂ ಮೂಡಿದೆ.
ಈ ಚಿತ್ರದಲ್ಲಿ ಮೈಕ್ ಟೈಸನ್ ಮಾಡುತ್ತಿರುವುದು ಒಂದು ಅತಿಥಿ ಪಾತ್ರ ಅಷ್ಟೇ. ಕ್ಲೈಮ್ಯಾಕ್ಸ್ಗಿಂತಲೂ ಮುನ್ನ ಬರುವ ದೃಶ್ಯದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕಾಗಿ ಅವರು ದುಬಾರಿ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದು ವಿಜಯ್ ದೇವರಕೊಂಡ ಅವರ ಸಂಬಳಕ್ಕಿಂತಲೂ ದೊಡ್ಡ ಮೊತ್ತ ಎಂಬ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು.
‘ಕಿಂಗ್ ಆಫ್ ದಿ ರಿಂಗ್ ಎನಿಸಿಕೊಂಡ ಮೈಕ್ ಟೈಸನ್ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಮ್ಮ ಲೈಗರ್ ತಂಡದಿಂದ ಸ್ವಾಗತ’ ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ವಿಜಯ್ ದೇವರಕೊಂಡ ಸಿನಿಮಾ ತಂಡಕ್ಕೆ ಸಂಕಷ್ಟ; ಮೈಕ್ ಟೈಸನ್ ಜತೆ ಸಾಧ್ಯವಾಗುತ್ತಿಲ್ಲ ಶೂಟ್