
ತೆಲುಗು ಚಿತ್ರರಂಗದಲ್ಲಿ (Tollywood) ಯಶಸ್ವಿಯಾಗಿರುವ ಹಲವಾರು ನಟ, ನಟಿಯರು ರಿಯಲ್ ಎಸ್ಟೇಟ್ ಮೇಲೆ ತಪ್ಪದೆ ಹೂಡಿಕೆ ಮಾಡುತ್ತಾರೆ. ತೆಲುಗಿನ ಹಿರಿಯ ನಟ ಶೋಭನ್ ಬಾಬು ಕಲಿಸಿಕೊಟ್ಟ ಪಾಠವದು. ಶೋಭನ್ ಬಾಬು ಅವರನ್ನು ಅನುಸರಿಸಿ ತೆಲುಗಿನ ಹಲವಾರು ನಟ, ನಟಿಯರು ಸಿನಿಮಾ ಸಂಭಾವನೆ ಹಣವನ್ನು ಭೂಮಿ ಮೇಲೆ ಹೂಡಿಕೆ ಮಾಡಿದರು, ಈಗಲೂ ಮಾಡುತ್ತಲೇ ಇದ್ದಾರೆ. ಅವರಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಸಹ ಒಬ್ಬರು.
ಸಿನಿಮಾ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಭಾರಿ ಯಶಸ್ಸು ಗಳಿಸಿರುವ ಮೋಹನ್ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಶಾಲೆಗಳು, ಅಪಾರ್ಟ್ಮೆಂಟ್ಗಳು, ರೆಸಾರ್ಟ್, ಹೋಟೆಲ್ ಚೈನ್ಗಳನ್ನು ಸಹ ಮೋಹನ್ಬಾಬು ಹೊಂದಿದ್ದಾರೆ. ಸಾಕಷ್ಟು ಕಡೆ ರಿಯಲ್ ಎಸ್ಟೇಟ್ ಮೇಲೆ ಮೋಹನ್ಬಾಬು ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಮೋಹನ್ ಬಾಬು ಸಹ ನಿರ್ಮಾಣದ ‘ಕಣ್ಣಪ್ಪ’ ಸಿನಿಮಾದ ಚಿತ್ರೀಕರಣ ನ್ಯೂಜಿಲೆಂಡ್ನಲ್ಲಿ ನಡೆಯಿತು. ಇದೀಗ ಅಲ್ಲಿಯೂ ಸಹ ಭಾರಿ ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ ಮೋಹನ್ಬಾಬು.
ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ವಿಷ್ಣು ಅವರ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ನ್ಯೂಜಿಲೆಂಡ್ನ ವಲಾಕ ಎಂಬಲ್ಲಿ ತಾವು ಏಳು ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದಾಗಿ ಮೋಹನ್ ಬಾಬು ಹೇಳುತ್ತಿದ್ದಾರೆ. ಮಂಚು ವಿಷ್ಣು ಅದಕ್ಕೆ ಹೌದೆನ್ನುತ್ತಿದ್ದಾರೆ. ಮೋಹನ್ ಬಾಬು ವಿಶಾಲವಾದ ಸ್ಥಳವೊಂದರ ಮುಂದೆ ನಿಂತಿದ್ದಾರೆ. ಅವರ ಮುಂದೆ ಸಾಲು ಸಾಲು ಬೆಟ್ಟಗಳು, ನದಿ ಎಲ್ಲವೂ ಇದೆ. ಅವನ್ನೆಲ್ಲ ತೋರಿಸುತ್ತಾ, ಏಳು ಸಾವಿರ ಎಕರೆ ಜಮೀನು ಖರೀದಿಸಿದ್ದೀವಿ. ಈ ಮನೆ ಸ್ಥಳ ಎಲ್ಲವೂ ಇನ್ನು ಮುಂದೆ ಮಂಚು ವಿಷ್ಣುವಿನದ್ದೆ ಎಂದಿದ್ದಾರೆ.
ಅದೇ ಸಮಯದಲ್ಲಿ ಅಲ್ಲಿಗೆ ನಟ ಪ್ರಭುದೇವ ಸಹ ಬರುತ್ತಾರೆ. ಆಗ ಮೋಹನ್ಬಾಬು, ಈ ಖರೀದಿಗೆ ಪ್ರಭುದೇವ ಸಹ ಸಾಕ್ಷಿ ಆಗಿದ್ದಾರೆ ಎಂದಿದ್ದಾರೆ. ಆಗ ಪ್ರಭುದೇವ ಸಹ ಹೌದು ಎನ್ನುತ್ತಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಮೋಹನ್ಬಾಬು ಆಂಧ್ರ, ತೆಲಂಗಾಣದಲ್ಲಿ ಸಾಕಷ್ಟು ಜಮೀನು, ಹಲವು ಲಾಭದಾಯಕ ಉದ್ಯಮಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ನ್ಯೂಜಿಲೆಂಡ್ನಲ್ಲಿ ಜಮೀನು ಖರೀದಿ ಮಾಡಿರಬಹುದು ಎನ್ನಲಾಗುತ್ತಿದೆ.
ಆದರೆ ನ್ಯೂಜಿಲೆಂಡ್ನಲ್ಲಿ ವಿದೇಶಿಗರಿಗೆ ಜಮೀನು ಖರೀದಿ ಅಷ್ಟು ಸುಲಭವಿಲ್ಲ. ಕನಿಷ್ಟ 12 ತಿಂಗಳು ಅಲ್ಲಿ ವಾಸಿಸದೇ ಇರುವವರು ರೆಸಿಡೆನ್ಶಿಯಲ್ ಪ್ರಾಪರ್ಟಿಗಳನ್ನು ಖರೀದಿಸುವುದು ಬಹಳ ಕಷ್ಟದ ಕೆಲಸ. ಓವರ್ಸೀಸ್ ಇನ್ವೆಸ್ಟ್ಮೆಂಟ್ ಆಫೀಸ್ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದರೆ ಖರೀದಿ ಮಾಡುವವರು ಸಿಂಗಪುರ ಅಥವಾ ಆಸ್ಟ್ರೇಲಿಯಾ ಪ್ರಜೆಯಾಗಿದ್ದರೆ ಖರೀದಿ ಸುಲಭ ಆಗುತ್ತದೆ. ಕೆಲ ಮೂಲಗಳ ಪ್ರಕಾರ ಮಂಚು ವಿಷ್ಣು ಸಿಂಗಪುರ ಪ್ರಜೆ ಆಗಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಮೋಹನ್ಬಾಬು ಖರೀದಿ ಮಾಡಿರಬಹುದು ಎನ್ನಲಾಗುತ್ತದೆ. ಆದರೆ ಮೋಹನ್ಬಾಬು, ವಿಡಿಯೋನಲ್ಲಿ ಏಳು ಸಾವಿರ ಎಕರೆ ಖರೀದಿ ಮಾಡಿದ್ದೀನಿ ಎಂದಿದ್ದಾರೆ. ಇದು ನಿಜವೇ, ಅಥವಾ ಮೋಹನ್ಬಾಬು ಸುಳ್ಳು ಹೇಳಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ