
ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮರಕ್ಕಾರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರವು ದಿನದಿಂದ ದಿನಕ್ಕೆ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಅಭೂತಪೂರ್ವ ದೃಶ್ಯ ವೈಭವಕ್ಕೆ ನೋಡುಗರು ಮನಸೋತಿದ್ದಾರೆ. ಮೋಹನ್ಲಾಲ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ತಾರಾ ನಟರ ದಂಡೇ ಇದೆ. ಅರ್ಜುನ್ ಸರ್ಜಾ, ಕೀರ್ತಿ ಸುರೇಶ್, ಸುನೀಲ್ ಶೆಟ್ಟಿ, ಮಂಜು ವಾರಿಯರ್, ಮುಕೇಶ್, ಸಿದ್ದಿಕ್, ನೆಡುಮುಡಿ ವೇಣು ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದ ಎರಡನೇ ಟ್ರೈಲರ್ನಲ್ಲಿ ದೇಶಭಕ್ತಿ, ಆಕ್ಷನ್ ದೃಶ್ಯಗಳು ಮೇಳೈಸಿವೆ. ಅಲ್ಲದೇ ಚಿತ್ರ ಹೇಗಿರಬಹುದು ಎಂಬ ಕಲ್ಪನೆಯನ್ನು ಟ್ರೈಲರ್ ಹುಟ್ಟುಹಾಕಿದ್ದು, ಚಿತ್ರಮಂದಿರದಲ್ಲಿ ವೀಕ್ಷಿಸಲು ಅಭಿಮಾನಿಗಳು ಮತ್ತಷ್ಟು ಉತ್ಸುಕರಾಗುವಂತೆ ಮಾಡಿದೆ.
‘ಮರಕ್ಕಾರ್’ ಚಿತ್ರದಲ್ಲಿ ಮೋಹನ್ಲಾಲ್ ಕುಂಜಲಿ ಮರಕ್ಕರ್ IV ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 16ನೇ ಶತಮಾನದ ಈ ಕತೆ, ಕೊಟ್ಟಕಲ್ ಬಂದರನ್ನು ಶಕ್ತಿಯುತವಾಗಿಸಿ ಆ ಮೂಲಕ ಪೋರ್ಚುಗೀಸರ ವಿರುದ್ಧ ಹೋರಾಡುವ ಕತೆಯನ್ನು ಚಿತ್ರವು ಒಳಗೊಂಡಿದೆ. ಟ್ರೈಲರ್ನಲ್ಲಿ ಸಮುದ್ರದ ಮೇಲಿನ ಯುದ್ಧಗಳ ತುಣುಕುಗಳಿದ್ದು ಮೈನವಿರೇಳಿಸುವಂತಿದೆ.
‘ಮರಕ್ಕಾರ್’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದಾರೆ. ಆಗಿನ ಕಾಲವನ್ನು ಅಂತೆಯೇ ತೆರೆಯ ಮೇಲೆ ತರಲು ಅವರು ಬಹಳಷ್ಟು ಶ್ರಮಿಸಿರುವುದು ಚಿತ್ರದ ಪ್ರತಿ ಫ್ರೇಮ್ಗಳಲ್ಲೂ ಕಾಣಿಸುವಂತಿದೆ. ವಸ್ತ್ರ ವಿನ್ಯಾಸ, ಆಯುಧಗಳು, ಸೆಟ್ ಈ ಎಲ್ಲವುಗಳಲ್ಲೂ ಆದಷ್ಟು ನೈಜವಾಗಿ ಹಿಂದಿನ ಕಾಲಘಟ್ಟವನ್ನು ಮರುಸೃಷ್ಟಿಸಲು ಪ್ರಯತ್ನಿಸಲಾಗಿದೆ.
ಚಿತ್ರದ ಮಲಯಾಳಂ ಟ್ರೈಲರ್ ಇಲ್ಲಿದೆ:
‘ಮರಕ್ಕಾರ್’ ಚಿತ್ರವು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅದ್ದೂರಿ ಬಜೆಟ್ ಚಿತ್ರವಾಗಿದೆ. ಚಿತ್ರಕ್ಕೆ ಸುಮಾರು ₹ 100 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಚಿತ್ರವು 2020ರ ಮಾರ್ಚ್ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು. ಇತ್ತೀಚೆಗೆ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆದರೆ ಸರ್ಕಾರ ಹಾಗೂ ಗಣ್ಯರು ಮಧ್ಯಪ್ರವೇಶಿಸಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರ ಮನವೊಲಿಸಿದರು. ಇದೀಗ ಚಿತ್ರವು ನಾಳೆ (ಡಿಸೆಂಬರ್ 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ‘ಮರಕ್ಕಾರ್: ಅರೇಬಿಯನ್ ಸಮುದ್ರದ ಸಿಂಹ’ ಹೆಸರಿನಲ್ಲಿ ಚಿತ್ರವು ಬಿಡುಗಡೆಯಾಗಲಿದ್ದು, ಪರಂವಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿದೆ. ಇದಲ್ಲದೇ ಚಿತ್ರವು ಮಲಯಾಳಂ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
Alia Bhatt: ಮದುವೆಯನ್ನು ಮುಂದೂಡಿದ ಆಲಿಯಾ- ರಣಬೀರ್; ಮಹತ್ವದ ನಿರ್ಧಾರಕ್ಕೆ ಈ ಅಂಶಗಳೇ ಕಾರಣವಂತೆ!
Published On - 11:21 am, Wed, 1 December 21