
ಚಿತ್ರರಂಗದಲ್ಲಿ ಇತ್ತೀಚೆಗೆ ಮಂಗಳಮುಖಿಯರ ಕುರಿತ ಕಥೆಗಳು ಮುನ್ನೆಲೆಗೆ ಬರುತ್ತಿವೆ. ತೃತೀಯ ಲಿಂಗಿಗಳ ಬಗ್ಗೆ ಗಂಭೀರವಾದ ಚರ್ಚೆ ಆಗುತ್ತಿದೆ. ಒಂದು ಕಾಲದಲ್ಲಿ ಕೇವಲ ಹಾಸ್ಯಕ್ಕಾಗಿ ಬಳಕೆ ಆಗುತ್ತಿದ್ದ ಪಾತ್ರಗಳು ಈಗ ಕಥೆಯ ಕೇಂದ್ರಬಿಂದು ಆಗುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ ಕನ್ನಡದ ‘ಭಾವಾಂತರ’ ಸಿನಿಮಾ ಕೂಡ ಸೇರ್ಪಡೆ ಆಗಿದೆ. ನವೆಂಬರ್ 6ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಕಾರ್ತಿಕ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ, ಮನೋಜ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ.
ಕೆಲವೇ ಕೆಲವು ಪಾತ್ರಗಳ ಸುತ್ತ ‘ಭಾವಾಂತರ’ ಸಿನಿಮಾ ಸಾಗುತ್ತದೆ. ಕಥಾನಾಯಕಿ ರಾಧಾ (ತನ್ವಿ ರಾವ್) ಮೂಲಕ ಕಥೆ ಆರಂಭ ಆಗುತ್ತದೆ. ಸಿನಿಮಾ ನಿರ್ದೇಶಕಿ ಆಗಬೇಕು ಎಂಬುದು ಆಕೆಯ ಕನಸು. ರಾಧಾಳ ತಂಡದಲ್ಲಿ ಕೆಲಸ ಮಾಡುವ ಅಭಿ ಎಂಬ ಹುಡುಗನಿಗೆ ಆಕೆಯ ಮೇಲೆ ಪ್ರೀತಿ ಚಿಗುರುತ್ತದೆ. ಆದರೆ ಆ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆಕೆ ಮುಲಾಜಿಲ್ಲದೇ ನಿರಾಕರಿಸುತ್ತಾಳೆ. ಯಾವಾಗಲೂ ಏನೋ ಕಳೆದುಕೊಂಡವಳಂತೆ ಇರುವ ರಾಧಾ ಮನಸ್ಸಿನಲ್ಲಿ ಏನೋ ಒಂದು ಚಿಂತೆ ಕಾಡುತ್ತಲೇ ಇರುತ್ತದೆ. ಅದೇನು ಎಂಬುದು ಮಧ್ಯಂತರದ ವೇಳೆಗೆ ತಿಳಿಯುತ್ತದೆ.
ರಾಧಾ ಬದುಕಿನಲ್ಲಿ ಒಂದು ಪ್ರೀತಿಯ ಫ್ಲ್ಯಾಶ್ ಬ್ಯಾಕ್ ಇದೆ. ಅದನ್ನು ಆಕೆ ಎಲ್ಲರಿಂದ ಮುಚ್ಚಿಟ್ಟಿರುತ್ತಾಳೆ. ಏಕಾಏಕಿಯಾಗಿ ಅದು ಎಲ್ಲರ ಎದುರು ತೆರೆದುಕೊಳ್ಳುತ್ತದೆ. ಒಂದು ಕಾಲದಲ್ಲಿ ತನ್ನ ಪ್ರೇಮಿ ಆಗಿದ್ದ ಹುಡುಗ ಈಗ ಮಂಗಳಮುಖಿ ಆಗಿದ್ದಾನೆ ಎಂಬ ಶಾಕಿಂಗ್ ವಿಷಯ ತಿಳಿದು ಆಕೆಗೆ ಆಘಾತ ಆಗುತ್ತದೆ. ಯಾಕೆ ಆತ ಮಂಗಳಮುಖಿ ಆದ ಎಂಬುದೇ ‘ಭಾವಾಂತರ’ ಸಿನಿಮಾದ ಕಥಯ ಸಾರಾಂಶ.
ಒಂದು ಸೂಕ್ಷ್ಮವಾದ ವಿಚಾರವನ್ನು ಇಟ್ಟುಕೊಂಡು ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ಈ ಸಿನಿಮಾವನ್ನು ಮಾಡಿದ್ದಾರೆ. ಯಾವುದೇ ಅನಗತ್ಯ ಪ್ರಸಂಗಗಳನ್ನು ತುರುಕದೇ ಅಚ್ಚುಕಟ್ಟಾಗಿ ಕಥೆಯನ್ನು ನಿರೂಪಿಸಿದ್ದಾರೆ. ಆ ಕಾರಣದಿಂದ ಚಿತ್ರದ ಅವಧಿ (1 ಗಂಟೆ 45 ನಿಮಿಷ) ಚುಟುಕಾಗಿದೆ. ಗಂಭೀರ ಕಥಾವಸ್ತುವಿನ ನಡುವೆ, ಅಲ್ಲಲ್ಲಿ ತೆಳುವಾದ ಹಾಸ್ಯ ಮತ್ತು ಹಾಡುಗಳ ಮೂಲಕ ಮನರಂಜನೆಯನ್ನು ಕೂಡ ನೀಡಲಾಗಿದೆ.
ತೃತೀಯ ಲಿಂಗಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಈಗೀಗ ಹೆಚ್ಚುತ್ತಿದೆ. ಆ ಒಂದು ಪ್ರಯತ್ನದ ರೂಪದಲ್ಲಿ ‘ಭಾವಾಂತರ’ ಸಿನಿಮಾ ಮೂಡಿಬಂದಿದೆ. ಹುಟ್ಟುವಾಗ ಗಂಡಾಗಿ ಹುಟ್ಟಿ, ನಂತರ ಹೆಣ್ಣಾಗಿ ಬದಲಾಗುವ ವ್ಯಕ್ತಿಗಳ ಮನದ ತಳಮಳಗಳನ್ನು ಈ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಮಂಗಳಮುಖಿಯರ ಮನದೊಳಗಿನ ಗೊಂದಲ ಮತ್ತು ನೋವುಗಳಿಗೆ ಹಿಡಿದ ಕನ್ನಡಿಯಂತೆ ಈ ಸಿನಿಮಾ ಇದೆ.
ತಮಿಳುನಾಡಿನ ಕೂವಗಂನಲ್ಲಿ ಲಿಂಗಪರಿವರ್ತಿತರ ಉತ್ಸವ ನಡೆಯುತ್ತದೆ. ಅದನ್ನು ‘ಭಾವಾಂತರ’ ಸಿನಿಮಾದಲ್ಲಿ ತೋರಿಸಲಾಗಿದೆ. ಆ ಉತ್ಸವದ ಹಿಂದಿರುವ ನಂಬಿಕೆ ಏನು? ಆಚರಣೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ಕೂಡ ವಿವರಿಸಲಾಗಿದೆ. ಸಾಕ್ಷ್ಯಚಿತ್ರದ ರೀತಿ ತೋರಿಸದೇ, ಎಲ್ಲ ವಿವರಗಳನ್ನು ಕಥೆಯೇ ಒಳಗೊಳ್ಳುವ ರೀತಿಯಲ್ಲಿ ಸಿನಿಮಾ ಮಾಡಲಾಗಿದೆ. ಅದು ಕೂಡ ಈ ಚಿತ್ರದ ಹೈಲೈಟ್ ಆಗಿದೆ.
ಇದನ್ನೂ ಓದಿ: ಮದ್ವೆಯಾದ 3 ತಿಂಗಳಿಗೆ ಬೆಂಗಳೂರಿನಲ್ಲಿ ಕೋಟ್ಯಾಧಿಪತಿ ಮಂಗಳಮುಖಿ ಹತ್ಯೆ!
ಕಥೆಯಲ್ಲಿ ಲಿಂಗಪರಿವರ್ತಿತರ ಕುರಿತು ವಿವರಿಸುವುದರ ಜೊತೆಗೆ ಸಲಿಂಗಿಗಳ ಬಗ್ಗೆಯೂ ಒಂದೆರಡು ದೃಶ್ಯಗಳನ್ನು ಸೇರಿಸಲಾಗಿದೆ. ಸಾಂಪ್ರದಾಯಿಕವಾದ ಕಮರ್ಷಿಯಲ್ ಕಥೆಗಳ ಬದಲು ಈ ರೀತಿಯ ಭಿನ್ನವಾದ ವಸ್ತುವಿಷಯವನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಈ ಸಿನಿಮಾ ಗಮನ ಸೆಳೆಯುತ್ತದೆ. ಮನರಂಜನೆಯ ಹೊರತಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ಆಲೋಚನೆ ಹುಟ್ಟುಹಾಕುವ ಪ್ರಯತ್ನವಾಗಿ ‘ಭಾವಾಂತರ’ ಸಿನಿಮಾ ಮೂಡಿಬಂದಿದೆ.
ಕಥೆಯ ಆರಂಭವು ತುಸು ಮಂದಗತಿಯಲ್ಲಿ ಸಾಗುತ್ತದೆ. ಮಂಗಳಮುಖಿ ಪಾತ್ರದ ಬರವಣಿಗೆಯಲ್ಲಿ ನಿರ್ದೇಶಕರಿಗೆ ಒಂದಷ್ಟು ಗೊಂದಲಗಳು ಇವೆಯೇನೋ ಎಂಬ ಅನುಮಾನವು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುತ್ತದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಒಂದು ಬಗೆಯ ಅಸ್ಪಷ್ಟತೆ ಕಾಣಿಸುತ್ತದೆ. ಆಯ್ದುಕೊಂಡ ವಿಷಯಕ್ಕೆ ಸೂಕ್ತ ತಾರ್ತಿಕ ಅಂತ್ಯ ಸಿಗದ ಕಾರಣ ಕೆಲವು ಪ್ರೇಕ್ಷಕರಿಗೆ ಇದು ಹಿಡಿಸದೆಯೂ ಇರಬಹುದು. ಉಳಿದಂತೆ ಒಂದು ಡಿಫರೆಂಟ್ ಪ್ರಯತ್ನವಾಗಿ ‘ಭಾವಾಂತರ’ ಸಿನಿಮಾ ಗುರುತಿಸಿಕೊಳ್ಳುತ್ತದೆ. ನಟನೆಯಲ್ಲಿ ತನ್ವಿ ರಾವ್ ಮತ್ತು ಕಾರ್ತಿಕ್ ಶರ್ಮಾ ಚಪ್ಪಾಳೆ ಗಿಟ್ಟಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.