ಬ್ರ್ಯಾಟ್ ವಿಮರ್ಶೆ: ಜೂಜಿನ ಅಡ್ಡೆಯಲ್ಲಿ ಡಾರ್ಲಿಂಗ್ ಕೃಷ್ಣ ಕಮಾಲ್; ಸಂದೇಶದ ಜೊತೆ ಥ್ರಿಲ್

ಬ್ರ್ಯಾಟ್ ವಿಮರ್ಶೆ: ಜೂಜಿನ ಅಡ್ಡೆಯಲ್ಲಿ ಡಾರ್ಲಿಂಗ್ ಕೃಷ್ಣ ಕಮಾಲ್; ಸಂದೇಶದ ಜೊತೆ ಥ್ರಿಲ್
Brat Movie
ಬ್ರ್ಯಾಟ್
UA
  • Time - 155 Minutes
  • Released - ಅಕ್ಟೋಬರ್ 31,2025
  • Language - ಕನ್ನಡ
  • Genre - ಆ್ಯಕ್ಷನ್, ಥ್ರಿಲ್ಲರ್
Cast - ಡಾರ್ಲಿಂಗ್ ಕೃಷ್ಣ, ಅಚ್ಯುತ್ ಕುಮಾರ್, ಮನಿಷಾ, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು
Director - ಶಶಾಂಕ್
3.5
Critic's Rating

Updated on: Oct 31, 2025 | 11:58 AM

‘ಹೇಗಾದರೂ ಸರಿ ಹಣ ಮಾಡಬೇಕು’- ಈ ಥೀಮ್ ಇಟ್ಟುಕೊಂಡು ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್ 2016’ ಸೇರಿದಂತೆ ಕೆಲವು ಸಿನಿಮಾಗಳು ಬಂದಿವೆ. ಈಗ ನಿರ್ದೇಶಕ ಶಶಾಂಕ್ ಅವರು ಇದೇ ರೀತಿಯ ಕಥಾ ಹಂದರ ಇಟ್ಟುಕೊಂಡು ‘ಬ್ರ್ಯಾಟ್’ ಸಿನಿಮಾ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಬಳಿಕ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರೋ ಎರಡನೇ ಸಿನಿಮಾ. ಈ ಚಿತ್ರದ ವಿಮರ್ಶೆ ಇಲ್ಲಿದೆ.

ಸಿನಿಮಾದ ಒಂದೆಳೆ

ಕಾನ್​ಸ್ಟೇಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ನ್ಯಾಯವೇ ತಂದೆ-ತಾಯಿ ಎಂದು ಬದುಕುತ್ತಿರುವ ವ್ಯಕ್ತಿ. ಆದರೆ, ಹುಟ್ಟುವ ಮಕ್ಕಳು ಹಾಗೆ ಇರಬೇಕು ಎಂದೇನು ಇಲ್ಲವಲ್ಲ. ಈತನ ಮಗ ಕ್ರಿಸ್ಟಿ (ಕೃಷ್ಣ) ಪಕ್ಕಾ ಬ್ರ್ಯಾಟ್. ಅಂದರೆ ಹಾಳಾಗಿ ಹೋಗಿದ್ದಾನೆ. ಸಣ್ಣ ವಯಸ್ಸಲ್ಲೇ ಜೂಜಾಡಿ ಹಣ ಮಾಡುವ ಚಟಕ್ಕೆ ಬೀಳುತ್ತಾನೆ. ‘ನಾವು ದುಡಿಯೋ ಹಣದಲ್ಲಿ ನಮ್ಮ ಬೆವರಿನ ವಾಸನೆ ಇರಬೇಕು’ ಎಂದು ತಂದೆ ಹೇಳಿದ ಮಾತಿಗೆ ಕ್ರಿಸ್ಟಿ ತಾತ್ಕಾಲಿಕವಾಗಿ ಬದಲಾಗುತ್ತಾನೆ ಎನ್ನುವುದಕ್ಕಿಂತ, ಕೆಟ್ಟ ಬುದ್ಧಿಯನ್ನು ಅದಮಿಟ್ಟುಕೊಳ್ಳುತ್ತಾನೆ ಎಂಬುದು ಹೆಚ್ಚು ಸೂಕ್ತ. ವಿದ್ಯೆ ತಲೆಗೆ ಹತ್ತದ್ದಕ್ಕೆ ಬೇರೆ ದಾರಿ ಕಾಣದೆ ಫುಡ್ ಡೆಲಿವರಿ ಕೆಲಸ ಶುರು ಮಾಡುತ್ತಾನೆ. ಒಂದು ದಿನ ಬೆಂಜ್ ಕಾರಲ್ಲಿ ಹೋಗೋ ನಾಯಿ ಈತನ ಬದುಕಿದೆ ದೊಡ್ಡ ತಿರುವು ನೀಡುತ್ತದೆ. ಆ ಬಳಿಕ ಏನಾಗುತ್ತದೆ, ಅದೆಷ್ಟು ತಿರುವುಗಳು ಬರುತ್ತವೆ ಎಂದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಮೆಚ್ಚುಗೆ ಪಡೆಯೋ ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ ಅವರು ಇಡೀ ಚಿತ್ರದಲ್ಲಿ ಕ್ರಿಸ್ಟಿ ಆಗಿ ಗಮನ ಸೆಳೆಯುತ್ತಾರೆ. ಹಣದ ಆಸೆಗೆ ಬಿದ್ದ ವ್ಯಕ್ತಿ ಯಾವೆಲ್ಲ ಹಂತಕ್ಕೆ ಹೋಗಬಹುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನಟಿಸಿ ತೋರಿಸಿದ್ದಾರೆ. ಅವರು ಈ ಬಾರಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಆ್ಯಕ್ಷನ್ ಹಾಗೂ ಲವ್​ಗಿಂತ ಹೆಚ್ಚಾಗಿ ಅವರು ಬುದ್ಧಿವಂತಿಕೆ ಮೂಲಕ ಹೆಚ್ಚು ಇಷ್ಟ ಆಗುತ್ತಾರೆ. ನಟನೆಯಲ್ಲಿ ಅವರು ಹೆಚ್ಚು ಅಂಕ ಪಡೆಯುತ್ತಾರೆ.

ಅಚ್ಯುತ್ ಕುಮಾರ್, ಮಗ ಹಾಳಾಗುವುದನ್ನು ನೋಡಿ ಒದ್ದಾಡುವ ಹಾಗೂ ಮಗನಿಗಿಂತ ಸಮಾಜದ ಸ್ವಾಸ್ಥ್ಯ, ನ್ಯಾಯ ಮುಖ್ಯ ಎಂದು ಪ್ರತಿಪಾದಿಸುವ ಪೊಲೀಸ್ ಕಾನ್​ಸ್ಟೇಬಲ್ ಆಗಿ ಹೆಚ್ಚು ಇಷ್ಟ ಆಗುತ್ತಾರೆ. ಅವರು ಮಹದೇವಯ್ಯ ಪಾತ್ರದಲ್ಲಿ ನಿಜವಾಗಲೂ ಜೀವಿಸಿದ್ದಾರೆ. ಹೊಸ ಪ್ರತಿಭೆ ನಾಯಕಿ ಮನಿಶಾ ಅವರು ಭರವಸೆ ಮೂಡಿಸುತ್ತಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಮಾನಸಿ ಸುಧೀರ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಬೆಟ್ಟಿಂಗ್ ಬಗ್ಗೆ ವಿವರವಾಗಿ ಹೇಳಿದ ಶಶಾಂಕ್

ನಿರ್ದೇಶಕ ಶಶಾಂಕ್ ಅವರು ಕ್ರಿಕೆಟ್ ಬೆಟ್ಟಿಂಗ್​ನ ಆಳ-ಅಗಲವನ್ನು ಅರಿತು ಕಥೆ ಬರೆದಿರೋದು ಸ್ಪಷ್ಟವಾಗುತ್ತದೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂಬುದು ತೆರೆಮೇಲೆ ಗೊತ್ತಾಗುತ್ತದೆ. ಬೆಟ್ಟಿಂಗ್​ನಿಂದ ಆರಂಭ ಆಗುವ ಕಥೆ ಕೊನೆಗೆ ಫಿಕ್ಸಿಂಗ್​ವರೆಗೆ ಸಾಗುತ್ತದೆ. ಬೆಟ್ಟಿಂಗ್ ಹೇಗೆ ನಡೆಯುತ್ತದೆ ಎಂಬುದನ್ನು ವಿವರವಾಗಿ ತೋರಿಸುವ ಪ್ರಯತ್ನ ನಡೆದಿದೆ. ಇದು ಕನ್ನಡದಲ್ಲಿ ಹೊಸ ಪ್ರಯತ್ನ. ಈ ಮೊದಲು ಹಿಂದಿಯಲ್ಲಿ ಬಾಲಿವುಡ್​ನಲ್ಲಿ ‘ಇನ್​ಸೈಡ್ ಎಡ್ಜ್’ ಹೆಸರಿನ ವೆಬ್ ಸೀರಿಸ್ ಬಂದಿತ್ತು. ಇದರಲ್ಲಿ ಸಂಪೂರ್ಣವಾಗಿ ಬೆಟ್ಟಿಂಗ್ ಬಗ್ಗೆಯೇ ವಿವರವಾಗಿ ಹೇಳಲಾಗಿತ್ತು.

ಮೈಮರೆತು ದುಡ್ಡು ಹಾಕಿದರೆ ಯಾವ ಗತಿ ಬರುತ್ತದೆ ಎಂಬುದನ್ನು ತೋರಿಸಿದ್ದಾರೆ. ಹಾಸ್ಯ, ಮನರಂಜನೆ ಜೊತೆಗೆ ಒಂದೊಳ್ಳೆಯ ಸಂದೇಶ ಕೊಡೋ ಪ್ರಯತ್ನ ಶಶಾಂಕ್ ಅವರಿಂದ ಆಗಿದೆ. ತಿರುವುಗಳೇ ಈ ಚಿತ್ರದ ಬಲ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವು ತಿರುವುಗಳನ್ನು ಸುಲಭವಾಗಿ ಊಹಿಸಿದರೆ, ಕೆಲವು ತಿರುವುಗಳು ದಸಕ್ಕನೆ ಬಂದು ನಿಮ್ಮೆದುರು ನಿಲ್ಲುತ್ತವೆ. ಕ್ಲೈಮ್ಯಾಕ್ಸ್ ಒಳ್ಳೆಯ ಮನರಂಜನೆ ಕೊಟ್ಟಿದ್ದಾರೆ ಶಶಾಂಕ್. ಮೊದಲಾರ್ಧ ಬಿಗಿಯಾಗಿ ಮೂಡಿ ಬಂದಿದೆ. ದ್ವಿತೀಯಾರ್ಧದಲ್ಲಿ ಇನ್ನೂ ಏನೋ ಬೇಕು ಎಂದು ಅನಿಸುತ್ತದೆ.

‘ಗುಲ್ಟು’ ಹಾಗೂ ‘ಮಾಯಾ ಬಜಾರ್ 2016’ ಸಿನಿಮಾಗಳಲ್ಲಿ ತಪ್ಪು ದಾರಿಯಲ್ಲಿ ಸಾಗಿ ಹಣ ಮಾಡೋದು ಹೇಗೆ ಎಂಬುದನ್ನು ಹೇಳಲಾಗಿತ್ತು. ಎರಡೂ ಸಿನಿಮಾಗಳಲ್ಲಿ ಒಂದೊಳ್ಳೆಯ ಸಂದೇಶ ಇತ್ತು. ಈ ಚಿತ್ರದಲ್ಲೂ ಇದೇ ತಂತ್ರ ಬಳಕೆ ಆಗಿದೆ.

ಅರ್ಜುನ್ ಜನ್ಯ ಅವರು ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ನಾನೇ ನೀನಂತೆ..’, ‘ಗಂಗಿ.. ಗಂಗಿ..’ ಹಾಡುಗಳು ಮನಸ್ಸಿನಲ್ಲಿ ಉಳಿಯುತ್ತವೆ. ಬಿಜಿಎಂನಲ್ಲೂ ಅವರು ಹೊಸ ಪ್ರಯತ್ನ ಮಾಡಿದ್ದಾರೆ. ನವೆಂಬರ್ 1ರಿಂದ ಏಳರವರೆಗೆ ಕರ್ನಾಟಕದ ಥಿಯೇಟರ್​ನಲ್ಲಿ ಕನ್ನಡದ ಸಿನಿಮಾಗಳನ್ನೇ ಪ್ರದರ್ಶನ ಮಾಡಬೇಕು ಎಂಬ ಆದೇಶ ಬಂದಿದೆ. ಇದು ಚಿತ್ರಕ್ಕೆ ಸಹಕಾರಿ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:22 am, Fri, 31 October 25