Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ

|

Updated on: Aug 12, 2022 | 1:12 AM

Gaalipata 2 Movie Review: ‘ಗಾಳಿಪಟ 2’ ಚಿತ್ರದಲ್ಲಿ ಹಲವು ಭಾವನೆಗಳಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೋಗರಾಜ್​ ಭಟ್.

Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
’ಗಾಳಿಪಟ 2’
Follow us on

ಚಿತ್ರ: ಗಾಳಿಪಟ 2

ನಿರ್ಮಾಣ: ರಮೇಶ್​ ರೆಡ್ಡಿ

ನಿರ್ದೇಶನ: ಯೋಗರಾಜ್​ ಭಟ್​

ಇದನ್ನೂ ಓದಿ
Gaalipata 2: ಅಕ್ಷಯ್​ ಕುಮಾರ್​ ಚಿತ್ರವನ್ನೇ ಮೀರಿಸಿದ ‘ಗಾಳಿಪಟ 2’; ಬುಕ್​ ಮೈ ಶೋನಲ್ಲಿ ಭರ್ಜರಿ ಹವಾ
Gaalipata 2: ‘ಗಾಳಿಪಟ 2’ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​; ಕಾರ್ಯಕ್ರಮದ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ
‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​
ಹೇಗಿತ್ತು ‘ಗಾಳಿಪಟ 2’ ಶೂಟಿಂಗ್​? ಇಲ್ಲಿದೆ ಮೇಕಿಂಗ್​ ವಿಡಿಯೋ

ಪಾತ್ರವರ್ಗ: ಗಣೇಶ್​, ದಿಗಂತ್​, ಪವನ್​ ಕುಮಾರ್​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಅನಂತ್​ ನಾಗ್​ ಮುಂತಾದವರು.

ಸ್ಟಾರ್​: 3.5/5

ಯಾವುದೇ ಹಿಟ್​ ಸಿನಿಮಾದ ಸೀಕ್ವೆಲ್​ ಬರುತ್ತಿದೆ ಎಂದಾಗ ಪ್ರೇಕ್ಷಕರ ನಿರೀಕ್ಷೆ ಗರಿಗೆದರುತ್ತದೆ. ಅದೇ ರೀತಿ ‘ಗಾಳಿಪಟ 2’ ಚಿತ್ರ ಅನೌನ್ಸ್​ ಆದಾಗಲೂ ಸಿನಿಪ್ರಿಯರಿಗೆ ಕೌತುಕ ಮೂಡಿತ್ತು. ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​, ನಟರಾದ ಗೋಲ್ಡನ್​ ಸ್ಟಾರ್​ ಗಣೇಶ್​ (Golden Star Ganesh), ದಿಗಂತ್​ ಮಂಚಾಲೆ, ಅನಂತ್​ ನಾಗ್​ ಮುಂತಾದವರ ಕಾಂಬಿನೇಷನ್​ ಎಂದಾಗ ಸಹಜವಾಗಿಯೇ ಹೈಪ್​ ಕ್ರಿಯೇಟ್​ ಆಗಿತ್ತು. ಈಗ ‘ಗಾಳಿಪಟ 2’ (Gaalipata 2) ರಿಲೀಸ್​ ಆಗಿದೆ. ಹಾಗಾದರೆ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆಯೇ? ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆ ಹೇಳಿದ್ದಾರೆ? ಒಟ್ಟಾರೆ ಸಿನಿಮಾ ಹೇಗಿದೆ? ಇಂಥ ಎಲ್ಲ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ..

‘ಗಾಳಿಪಟ 2’ ಎಂಬ ಟೈಟಲ್​ ಯಾಕೆ?

ಮೊದಲಿಗೆ ಸ್ಪಷ್ಟಪಡಿಸುವುದೇನೆಂದರೆ ಇದು ‘ಗಾಳಿಪಟ’ ಸಿನಿಮಾದ ಮುಂದುವರಿದ ಕಥೆ ಅಲ್ಲ. ಹಾಗಾದರೆ ‘ಗಾಳಿಪಟ 2’ ಎಂಬ ಟೈಟಲ್​ ಯಾಕೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುವುದು ಸಹಜ? ಅದಕ್ಕೆ ಉತ್ತರ ಸಿಂಪಲ್​; ಮೊದಲನೇ ಗಾಳಿಪಟದ ಫ್ಲೇವರ್​ನಲ್ಲೇ ಈ ಹೊಸ ಗಾಳಿಪಟ ಮೂಡಿಬಂದಿದೆ. ಅಲ್ಲದೇ ಗಾಳಿಪಟ ಹಾರಿಸಲು ಹೋಗಿ ಕಾಣೆಯಾದ ಒಬ್ಬ ಹುಡುಗನ ಕಥೆಯೂ ಈ ಚಿತ್ರದಲ್ಲಿದೆ. ಯೋಗರಾಜ್​ ಭಟ್​ ಅವರ ಎಂದಿನ ಸೊಗಡು ಇಲ್ಲಿ ಕಾಣಿಸುತ್ತದೆ. ಅವರ ಶೈಲಿಯ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಗಾಳಿಪಟ 2’ ಆಕರ್ಷಿಸುತ್ತದೆ.

ಹಲವು ಭಾವನೆಗಳ ಕಹಾನಿ:

ಕನ್ನಡ ಕಲಿಯಬೇಕು ಎಂದು ‘ನೀರುಕೋಟೆ’ ಎಂಬ ಊರಿಗೆ ಬರುವ ಮೂವರು ಹುಡುಗರು (ಗಣೇಶ್​, ದಿಗಂತ್​, ಪವನ್​ಕುಮಾರ್​) ಬಹಳ ಉಡಾಫೆ ಬುದ್ಧಿಯವರು. ಈ ಮೂವರಿಗೂ ಒಂದೊಂದು ಲವ್ ಸ್ಟೋರಿ ಇದೆ. ಹಾಸ್ಟೆಲ್​ ಸಿಗದೇ ಇವರು ವಾಸ್ತವ್ಯ ಹೂಡುವುದು ಮೇಷ್ಟ್ರು (ಅನಂತ್​ ನಾಗ್​) ಮನೆಯಲ್ಲಿ. ಕನ್ನಡ ಕಲಿಯಬೇಕು ಎಂದು ಬಂದವರು ಬದುಕಿನ ಪಾಠ ಕಲಿತುಕೊಂಡು ಹೋಗುವುದೇ ‘ಗಾಳಿಪಟ 2’ ಕಥೆಯ ಜೀವಾಳ. ಇಲ್ಲಿ ಹಲವು ಭಾವನೆಗಳಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ನಗು-ಅಳುವಿನ ವಿಶ್ರಣ:

ಯೋಗರಾಜ್​ ಭಟ್​ ಅವರ ಬಹುತೇಕ ಸಿನಿಮಾದಲ್ಲಿ ಕೆಲವು ಪಾತ್ರಗಳು ಹೆಂಗೆಂಗೋ ಆಡುತ್ತವೆ. ಅದು ‘ಗಾಳಿಪಟ 2’ ಚಿತ್ರದಲ್ಲಿಯೂ ಮುಂದುವರಿದಿದೆ. ಅದರಿಂದ ಒಂದಷ್ಟು ಹಾಸ್ಯ ಉಕ್ಕುತ್ತದೆ. ಯೋಗರಾಜ್​ ಭಟ್ಟರ ಈ ಶೈಲಿಯನ್ನು ಇಷ್ಟಪಡುವ ಪ್ರೇಕ್ಷಕರಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ಹಾಗಂತ ಅಷ್ಟಕ್ಕೇ ನಿರ್ದೇಶಕರು ಸೀಮಿತವಾಗಿಲ್ಲ. ನೋಡುಗರನ್ನು ಭಾವುಕರನ್ನಾಗಿಸುವ ಕೆಲವು ದೃಶ್ಯಗಳ ಮೂಲಕ ಅವರು ಸೆಳೆಯಲು ಪ್ರಯತ್ನಿಸಿದ್ದಾರೆ. ಅವರಿಗೆ ಎಲ್ಲ ಕಲಾವಿದರು ಸಾಥ್​ ನೀಡಿದ್ದಾರೆ. ಮೊದಲು ಏನೋ ಅನಿಸುವ ಕಥೆಯು ಕ್ಲೈಮ್ಯಾಕ್ಸ್​ ವೇಳೆಗೆ ಇನ್ನೇನೋ ಆಗಿ ಪ್ರೇಕ್ಷಕರನ್ನು ಆವರಿಸುತ್ತದೆ. ಅದು ಈ ಚಿತ್ರದ ವಿಶೇಷ.

ದೊಡ್ಡದಾಗಿದೆ ಗಾಳಿಪಟದ ಗ್ಯಾಂಗ್​:
ತರಲೆ, ತುಂಟ, ಮಾತಿನ ಮಲ್ಲ, ಒಂದೇ ಕ್ಷಣದಲ್ಲಿ ಪ್ರೀತಿಯಲ್ಲಿ ಬೀಳುವ ಯುವಕನ ಪಾತ್ರಕ್ಕೆ ಗಣೇಶ್​ ಜೀವ ತುಂಬಿದ್ದಾರೆ. ಪ್ರೇಮಿಯಾಗಿ, ಅರೆಬರೆ ಅಘೋರಿಯಾಗಿ ದಿಗಂತ್​ ಸಹ ಗಮನ ಸೆಳೆದಿದ್ದಾರೆ. ಗಾಳಿಪಟ ಗ್ಯಾಂಗ್​ಗೆ ಹೊಸದಾಗಿ ಸೇರ್ಪಡೆ ಆಗಿರುವ ಪವನ್​ ಕುಮಾರ್​ ಅವರಿಗೆ ಇದರಲ್ಲೊಂದು ಮಜವಾದ ಪಾತ್ರವಿದೆ. ಎಮೋಷನಲ್​ ಆಗಿ ಆವರಿಸಿಕೊಳ್ಳುವ ಗುಣ ಅನಂತ್​ ನಾಗ್​ ಅವರ ಪಾತ್ರಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ರಂಗಾಯಣ ರಘು ನಗಿಸುತ್ತಾರೆ, ನಂತರ ಅಳಿಸುತ್ತಾರೆ.

ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಅವರ ಪಾತ್ರಗಳಿಗೂ ಸೂಕ್ತ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಸುಧಾ ಬೆಳವಾಡಿ, ಪದ್ಮಜಾ ರಾವ್​, ನಿಶ್ವಿಕಾ ನಾಯ್ಡು, ವಿಜಯ್​ ಸೂರ್ಯ, ಶ್ರೀನಾಥ್​ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಕೆಲವೇ ನಿಮಿಷ ಕಾಣಿಸಿಕೊಳ್ಳುವ ಪಾತ್ರಗಳು ಕೂಡ ಹೈಲೈಟ್​ ಆಗಿವೆ. ಎಲ್ಲವನ್ನೂ ಬ್ಯಾಲೆನ್ಸ್​ ಮಾಡುವಲ್ಲಿ ಯೋಗರಾಜ್​ ಭಟ್​ ಯಶಸ್ವಿ ಆಗಿದ್ದಾರೆ.

ಹಾಡುಗಳ ಮೇಲೆ ವಿಶೇಷ ಕಾಳಜಿ:

ಗಣೇಶ್​-ಯೋಗರಾಜ್​ ಭಟ್​ ಕಾಂಬಿನೇಷನ್​ ಸಿನಿಮಾ ಎಂದರೆ ಅಲ್ಲಿ ಹಾಡುಗಳು ಹೈಲೈಟ್​ ಆಗಲೇಬೇಕು ಎಂಬುದು ಅಲಿಖಿತ ನಿಯಮ. ಆ ನಿಯಮವನ್ನು ಚೆನ್ನಾಗಿ ಪಾಲಿಸಲಾಗಿದೆ. ‘ನೀನು ಬಗೆಹರಿಯದ ಹಾಡು..’, ‘ನಾನಾಡದ ಮಾತೆಲ್ಲವ ಕದ್ದಾಲಿಸು..’, ‘ನಾವು ಬದುಕಿರಬಹುದು ಪ್ರಾಯಶಃ..’ ಹಾಡುಗಳಿಂದ ಸಿನಿಮಾದ ಮೆರುಗು ಹೆಚ್ಚಿದೆ. ಅರ್ಜುನ್​ ಜನ್ಯ ಅವರಿಗೆ ಅದರ ಕ್ರೆಡಿಟ್​ ಸಲ್ಲುತ್ತದೆ. ಸಾಹಿತ್ಯ ಬರೆದ ಯೋಗರಾಜ್​ ಭಟ್​, ಜಯಂತ್​ ಕಾಯ್ಕಿಣಿ ಅವರಿಗೂ ಅದರಲ್ಲಿ ಪಾಲಿದೆ.

ಅದ್ದೂರಿತನಕ್ಕೆ ಇಲ್ಲ ಕೊರತೆ:

ಮೇಕಿಂಗ್​ ವಿಚಾರದಲ್ಲಿ ಯೋಗರಾಜ್​ ಭಟ್​ ಎಲ್ಲಿಯೂ ರಾಜಿ ಆಗಿಲ್ಲ. ಅದ್ದೂರಿಯಾಗಿಯೇ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದೆ. ಹಲವು ದೃಶ್ಯಗಳನ್ನು ವಿದೇಶದಲ್ಲಿ ಚಿತ್ರಿಸಲಾಗಿದೆ. ಸಂತೋಷ್​ ರೈ ಪಾತಾಜೆ ಕ್ಯಾಮೆರಾ ಕಣ್ಣಿನಲ್ಲಿ ಮಲೆನಾಡಿನ ಮಳೆಯಿಂದ ಹಿಡಿದು ವಿದೇಶದ ಹಿಮದ ಹಾಸಿನವರೆಗೆ ಎಲ್ಲವೂ ಸುಂದರವಾಗಿ ಸೆರೆಯಾಗಿವೆ.

ಹೀಗೊಂದು ಪ್ರಯೋಗ ಮತ್ತು ಫಿಲಾಸಫಿ:

ಇಡೀ ಬದುಕನ್ನು ಗಂಭೀರವಾಗಿ ಕಳೆಯಲಾದೀತೆ? ಅಥವಾ ಬರೀ ಲಘುವಾಗಿಯೇ ಪರಿಗಣಿಸಲಾದೀತೆ? ಜೀವನದ ತಿರುವುಗಳಿಗೆ ಈ ಎರಡರ ಪೈಕಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿದರೂ ಅದರ ಫಲಿತಾಂಶ ಒಂದೆಯೇ? ಇಂಥ ಬಗೆಹರಿಯದ ಹಲವು ಪ್ರಶ್ನೆಗಳನ್ನು ನೋಡುಗನ ಮನಸ್ಸಿನಲ್ಲಿ ಮೂಡಿಸುತ್ತದೆ ಈ ಸಿನಿಮಾ. ಆರಂಭದಿಂದ ಎಲ್ಲವನ್ನೂ ಲಘುವಾಗಿಯೇ ತೋರಿಸಿ, ಅಂತ್ಯ ಸಮೀಪಿಸುವ ವೇಳೆಗೆ ಎಲ್ಲವನ್ನೂ ಗಂಭೀರವಾಗಿಸಿದ್ದಾರೆ ಭಟ್ಟರು. ಹೇಳಲು ಹೊರಟ ಫಿಲಾಸಫಿಯನ್ನು ಪ್ರಯೋಗದ ಮೂಲಕ ಜನರ ಮುಂದಿರಿಸುವ ಕೆಲಸ ಈ ಚಿತ್ರದಲ್ಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:10 am, Fri, 12 August 22