‘ಕಾಂತಾರ: ಚಾಪ್ಟರ್1’ ವಿಮರ್ಶೆ: ದಂತಕಥೆಯಲ್ಲಿ ಅದ್ದೂರಿತನ; ಇದು ದೈವದ ಕಥನ

‘ಕಾಂತಾರ: ಚಾಪ್ಟರ್1’ ವಿಮರ್ಶೆ: ದಂತಕಥೆಯಲ್ಲಿ ಅದ್ದೂರಿತನ; ಇದು ದೈವದ ಕಥನ
Kantara Chapter 1 (1)
ಕಾಂತಾರ: ಚಾಪ್ಟರ್ 1
UA
  • Time - 168 Minutes
  • Released - October 2, 2025
  • Language - ಕನ್ನಡ
  • Genre - Adventure,Drama,Thriller
Cast - ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮೊದಲಾದವರು
Director - ರಿಷಬ್ ಶೆಟ್ಟಿ
3.5
Critic's Rating

Updated on: Oct 02, 2025 | 12:59 AM

‘ಕಾಂತಾರ’ ಸಿನಿಮಾ ನೋಡಿದ ಬಹುತೇಕರು ಮೆಚ್ಚಿಕೊಂಡಿದ್ದರು. ಇದೇ ಹುರುಪಲ್ಲಿ ರಿಷಬ್ ‘ಕಾಂತಾರ: ಚಾಪ್ಟರ್ 1’ ಮಾಡುವ ಸಾಹಸಕ್ಕೆ ಮುಂದಾದರು. ಈ ಚಿತ್ರದ ಮೇಲೆ ಇರುವ ನಿರೀಕ್ಷೆ ಬೆಟ್ಟದಷ್ಟು. ‘ಕಾಂತಾರ’ ಸಿನಿಮಾದಲ್ಲಿ ಪಂಜುರ್ಲಿ ದೈವದ ಬಗ್ಗೆ ರಿಷಬ್ ಹೇಳಿದ್ದರು. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ದೈವದ ವಿಚಾರವೇ ಹೈಲೈಟ್. ಇಲ್ಲಿ ಹಲವು ದೈವಗಳ ಅವತಾರವನ್ನು ತೋರಿಸಲಾಗಿದೆ.  ಹಾಗಾದರೆ, ಸಿನಿಮಾದಲ್ಲಿ ಏನೆಲ್ಲ ಇದೆ? ಏನು ಪ್ಲಸ್, ಏನು ಮೈನಸ್ ಎಂಬ ಬಗ್ಗೆ ವಿಮರ್ಶೆಯಲ್ಲಿದೆ ಮಾಹಿತಿ.

‘ಕಾಂತಾರ: ಚಾಪ್ಟರ್ 1’ ಕದಂಬರ ಕಾಲದಲ್ಲಿ ನಡೆಯುವ ಕಥೆ.  ಕಾಡಿನಲ್ಲಿ ವಾಸ ಮಾಡುವ ಜನಾಂಗ ಒಂದುಕಡೆಯಾದರೆ, ಶ್ರೀಮಂತಿಕೆಯಿಂದ ಕಂಗೊಳಿಸುವ ರಾಜಾಡಳಿತ ಮತ್ತೊಂದು ಕಡೆ. ರಾಜನಿಗೆ ಕಾಡಿನ ಮೇಲೆ ಕಣ್ಣು, ಕಾಡಿನವರಿಗೆ ರಾಜ್ಯದ ಮೇಲೆ ಕಣ್ಣು. ಹೀಗೆ ಪರಸ್ಪರ ಆಸೆ ಹುಟ್ಟಿಕೊಳ್ಳಲು ಕಾರಣ ಏನು? ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ವಿವರಿಸುವ ಬದಲು ಸಿನಿಮಾದಲ್ಲೇ ಕಣ್ತುಂಬಿಕೊಳ್ಳುವುದು ಉತ್ತಮ.

ರಿಷಬ್ ಶೆಟ್ಟಿ ಅವರು ಬೆರ್ಮೆ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ (ಕಾಡು)  ಕಾಯುವ ಕಾಯಕ ಅವನದ್ದು. ಸಿನಿಮಾ ಉದ್ದಕ್ಕೂ ರಿಷಬ್ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಅವರ ಹಣೆಮೇಲೆ ಆಗಾಗ ಒಂದಷ್ಟು ಬೆವರಿನ ಹನಿಗಳು ಮೂಡುತ್ತದೆ. ಬಹುಶಃ ಈ ಸಿನಿಮಾ ಮಾಡುವಾಗಲೂ ಇದಕ್ಕಿಂತ ಹೆಚ್ಚಿನ ಬೆವರು ಅವರ ಹಣೆ ಮೇಲೆ ಮೂಡಿರಬಹುದು. ಅವರು ಹಾಕಿದ ಶ್ರಮ ಎದ್ದು ಕಾಣುತ್ತದೆ. ರಿಸ್ಕಿ ಆ್ಯಕ್ಷನ್ ದೃಶ್ಯಗಳನ್ನು ಡ್ಯೂಪ್ ಇಲ್ಲದೆ ಮಾಡಿ ತೋರಿಸಿದ್ದಾರೆ. ಅದು ಅವರ ಬದ್ಧತೆಯನ್ನು ತೋರಿಸುತ್ತದೆ. ‘ಕಾಂತಾರ’ ಚಿತ್ರದಲ್ಲಿ ದೈವದ ಪಾತ್ರ ಮಾಡುವಾಗ ಇರುವ ಎನರ್ಜಿಗಿಂತ ಹೆಚ್ಚಿನ ಎನರ್ಜಿಯನ್ನು ಅವರು ಇಲ್ಲಿ ಹಾಕಿದ್ದಾರೆ. ತೆರೆಮೇಲೆ ನೋಡುವಾಗ ನಿಜವಾಗಿಯೂ ರಿಷಬ್ ಶೆಟ್ಟಿ ಮೇಲೆ ದೈವ ಬಂದಿದೆಯೇ ಎಂದು ಪ್ರಶ್ನೆ ಮಾಡುವಂತೆ ನಟಿಸಿ ತೋರಿಸಿದ್ದಾರೆ. ಹಾವ ಭಾವಗಳನ್ನು ಎಲ್ಲಿಯೂ ಹೆಚ್ಚೂ ಇಲ್ಲದೆ, ಕಡಿಮೆಯೂ ಇಲ್ಲದೆ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಇದನ್ನೂ ಓದಿ
ಅಡುಗೆ ಮಾಡುತ್ತಾ ರಿಷಬ್, ಮೇಘನಾ, ಸುದೀಪ್ ಹರಟೆ; ಅಪರೂಪದ ವಿಡಿಯೋ ಇಲ್ಲಿದೆ
ಸ್ತನ ಕ್ಯಾನ್ಸರ್​ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಜಾನ್ವಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ದಂತದ ಗೊಂಬೆಯಂತೆ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳುತ್ತಾರೆ. ಪ್ರತಿ ಫ್ರೇಮ್​ನಲ್ಲೂ ಯಾರೋ ಬಿಡಿಸಿದ ಸುಂದರ ಚಿತ್ರದಂತೆ ಕಾಣಿಸುತ್ತಾರೆ. ಯುವ ರಾಣಿಯ ಪಾತ್ರಕ್ಕೆ ಅವರಿಗಿಂತ ಹೆಚ್ಚು ಸೂಕ್ತ ಮತ್ತೊಬ್ಬರು ಇರಲಿಕ್ಕಿಲ್ಲ ಎಂದನಿಸಬಹುದು. ರಾಜರ ಕಾಲದ ಉಡುಗೆಯು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಬುದ್ಧ ನಟನೆಯ ಮೂಲಕ ಅವರು ಇಷ್ಟ ಆಗುತ್ತಾರೆ. ಗುಲ್ಶನ್ ದೇವಯ್ಯ ಮಾಡಿದ ಕುಲಶೇಖರ ಪಾತ್ರಕ್ಕೆ ಇನ್ನೂ ಗಟ್ಟಿತನ ಕೊಡಬಹುದಿತ್ತು ಎಂದನಿಸದೇ ಇರದು. ಜಯರಾಮ್, ಪ್ರಮೋದ್ ಶೆಟ್ಟಿ ಮೊದಲಾವರು ತಮಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಗುವಿನ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ರಾಕೇಶ್ ಪೂಜಾರಿ ಪಾತ್ರವೂ ಹೈಲೈಟ್ ಆಗುತ್ತದೆ. ಅವರು ಬದುಕಿದ್ದಿದ್ದರೆ ಖುಷಿ ಪಡುತ್ತಿದ್ದರೇನೋ.

ಅದ್ಭುತ ಎನಿಸುವ ಓಪನಿಂಗ್ ದೃಶ್ಯದೊಂದಿಗೆ ಸಿನಿಮಾ ಆರಂಭ ಆಗುತ್ತದೆ. ನಂತರ ನಿಧಾನವಾಗಿ ಟೇಕ್​ಆಫ್ ಆಗುತ್ತದೆ. ಇಂಟರವಲ್ ಬ್ಲಾಕ್​ಗೂ ಮೊದಲು ಬರುವ ಫೈಟಿಂಗ್ ದೃಶ್ಯ ಕ್ಲೈಮ್ಯಾಕ್ಸ್ ರೀತಿಯ ಫೀಲ್ ಕೊಡುತ್ತದೆ. ಇದನ್ನೇ ಕ್ಲೈಮ್ಯಾಕ್ಸ್ ಮಾಡಬಹುದಿತ್ತಲ್ಲ ಎನಿಸಬಹುದು.  ಇದರ  ಫೈಟ್ ಸಂಯೋಜನೆ ಭಿನ್ನವಾಗಿದೆ. ರಿಷಬ್  ಕ್ಲೈಮ್ಯಾಕ್ಸ್​ನ ಒಳ್ಳೆಯ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಥಿಯೇಟರ್​ನಿಂದ ಹೊರ ಬರುವಾಗ ಒಳ್ಳೆಯ ಫೀಲ್ ಕೊಡುತ್ತದೆ.  ಸಿನಿಮಾದಲ್ಲಿ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗದಂತೆ ‘ಹೊಂಬಾಳೆ ಫಿಲ್ಮ್ಸ್’ ನೋಡಿಕೊಂಡಿದೆ. ರಿಷಬ್ ಅವರು ಸಿನಿಮಾನ ತಾಂತ್ರಿಕವಾಗಿ ಶ್ರೀಮಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಹೆಚ್ಚು ಇಷ್ಟ ಆಗೋದು ವಿಎಫ್​ಎಕ್ಸ್. ಇಡೀ ಚಿತ್ರಕ್ಕೆ ಬೇರೆಯದೇ ತೂಕ ಬರಲು ವಿಎಫ್​ಎಕ್ಸ್ ಪಾತ್ರ ದೊಡ್ಡದಿದೆ. ಹುಲಿ, ಕಾಡು ಪಾಪಗಳು ನಿಜವಾದವೇನೋ ಎಂದನಿಸುವ ರೀತಿಯಲ್ಲಿ ವಿಎಫ್​ಎಕ್ಸ್ ಮೂಡಿ ಬಂದಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. 300-400 ದಶಕಕ್ಕೆ  ತಕ್ಕಂತೆ ಕಾಸ್ಟ್ಯೂಮ್ ಬಳಕೆ ಮಾಡಲಾಗಿದೆ. ಮ್ಯೂಸಿಕ್ ವಿಚಾರದಲ್ಲಿ ಅಜನೀಶ್ ಹೊಸದನ್ನೇನು ಮಾಡಿಲ್ಲ. ‘ಕಾಂತಾರ’ ಸಿನಿಮಾದ ಎರಡು ಹಾಡುಗಳನ್ನೇ ಇಲ್ಲಿಯೂ ಬಳಕೆ ಮಾಡಿಕೊಂಡಿದ್ದು, ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡುತ್ತದೆ.

‘ಕಾಂತಾರ’ ಸಿನಿಮಾದಲ್ಲಿ ಎಲ್ಲವೂ ಎಷ್ಟಕ್ಕೆ ಬೇಕೋ ಅಷ್ಟೇ ಇದ್ದವು. ಈ ಕಾರಣದಿಂದಲೇ ಪ್ರೇಕ್ಷಕರಿಗೆ ಅದು ಇಷ್ಟವಾಗಿತ್ತು. ಆದರೆ, ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಫೈಟ್​ಗಳೇ ಹೆಚ್ಚು ಅಬ್ಬರಿಸಿದಂತೆ ಕಾಣಿಸುತ್ತದೆ. ಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯುವ ಅವಕಾಶ ರಿಷಬ್​ಗೆ ಇತ್ತು.  ಚಿತ್ರದಲ್ಲಿ ಬರುವ ಯುದ್ಧದ ದೃಶ್ಯ ರಾಜಮೌಳಿಯ ‘ಬಾಹುಬಲಿ’ ಸಿನಿಮಾನ ನೆನಪಿಸದೆ ಇರದು. ‘ನಮ್ಮ ಊರಿನಿಂದ ಕಾಡಿಗೆ ನಡೆದು ಹೋದರೆ ಒಂದು ದಿನ ಬೇಕು’ ಎಂದು ಆರಂಭದಲ್ಲಿ ಡೈಲಾಗ್ ಒಂದು ಬರುತ್ತದೆ. ಆದರೆ, ಕ್ಲೈಮ್ಯಾಕ್ಸ್ ವೇಳೆಗೆ ಕಥಾ ನಾಯಕ ಕ್ಷಣಮಾತ್ರದಲ್ಲಿ, ನಾಡಿನಿಂದ ಕಾಡಿಗೆ ತೆರಳುತ್ತಾನೆ. ಈ ರೀತಿ ಕೆಲವು ದೃಶ್ಯಗಳು ಲಾಜಿಕ್ ಕೇಳುತ್ತವೆ. ‘ಕಾಂತಾರ’ದ ಸಕ್ಸಸ್ ಸೂತ್ರವನ್ನೇ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೂ ಬಳಸಿದ್ದಾರೆ ರಿಷಬ್. ಬೇಡ ಬೇಡವೆಂದರೂ ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ನಡುವಿನ ಹೋಲಿಕೆ ನಡೆಯುತ್ತಲೇ ಇರುತ್ತದೆ. ‘ಕಾಂತಾರ: ಚಾಪ್ಟರ್ 2’ ಬರುವ ಸೂಚನೆಯನ್ನೂ ಕ್ಲೈಮ್ಯಾಕ್ಸ್​ನಲ್ಲಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:24 am, Thu, 2 October 25