Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್, ಮತ್ತೊಂದಿಷ್ಟು ಮಿಸ್ಸಿಂಗ್
Kotigobba 3 Movie Review: ಹಲವು ವಿಘ್ನಗಳನ್ನು ದಾಟಿ, ಒಂದು ದಿನ ತಡವಾಗಿ ‘ಕೋಟಿಗೊಬ್ಬ 3’ ತೆರೆಕಂಡಿದೆ. ಮುಂಜಾನೆಯಿಂದಲೇ ಫ್ಯಾನ್ಸ್ ಸಂಭ್ರಮ ಮುಗಿಲುಮುಟ್ಟಿತ್ತು. ಹಾಗಾದರೆ, ಈ ಸಿನಿಮಾ ಹೇಗಿದೆ? ಕಿಚ್ಚ ಸುದೀಪ್ ನಟನೆ, ಸಿನಿಮಾ ಕಥೆ ಹೇಗಿದೆ? ಆ ಎಲ್ಲಾ ಪ್ರಶ್ನೆಗೆ ಈ ವಿಮರ್ಶೆಯಲ್ಲಿ ಉತ್ತರವಿದೆ.
ಸಿನಿಮಾ: ಕೋಟಿಗೊಬ್ಬ 3
ಪಾತ್ರವರ್ಗ: ಸುದೀಪ್, ಮಡೊನ್ನಾ, ರವಿ ಶಂಕರ್ ಮುಂತಾದವರು
ನಿರ್ದೇಶನ: ಶಿವ ಕಾರ್ತಿಕ್
ನಿರ್ಮಾಣ: ಸೂರಪ್ಪ ಬಾಬು
ಸ್ಟಾರ್: 3 / 5
ಸತ್ಯ ಮತ್ತು ಶಿವ ಇಬ್ಬರೂ ಬೇರೆ ಅಲ್ಲ, ಇಬ್ಬರೂ ಒಬ್ಬರೇ ಅನ್ನೋದು ‘ಕೋಟಿಗೊಬ್ಬ 2’ ಸಿನಿಮಾದ ಹೈಲೈಟ್ ಆಗಿತ್ತು. ಇದು ಸಾಕಷ್ಟು ಮನರಂಜನೆಯನ್ನೂ ನೀಡಿತ್ತು. ಆದರೆ, ‘ಕೋಟಿಗೊಬ್ಬ 3’ನಲ್ಲಿ ನಿರ್ದೇಶಕರು ಬೇರೆಯದೇ ಟ್ವಿಸ್ಟ್ ಹಿಡಿದು ಬಂದಿದ್ದಾರೆ. ಇದು ಪ್ರೇಕ್ಷಕರ ತಲೆಗೂ ಹುಳ ಬಿಡುತ್ತದೆ.
ಸತ್ಯ (ಸುದೀಪ್) ಅನಾಥಾಶ್ರಮ ನೋಡಿಕೊಳ್ಳುತ್ತಾ ಇರುತ್ತಾನೆ. ಅವನಿಗೆ ಅಲ್ಲಿರುವವರೆಲ್ಲರೂ ಮಕ್ಕಳೇ. ಎಲ್ಲರನ್ನೂ ನೋಡಿಕೊಳ್ಳುವ ಜವಾಬ್ದಾರಿ ಅವನದ್ದೇ. ಅನಾಥಾಶ್ರಮದ ಬಾಲಕಿಗೆಯೊಬ್ಬಳಿಗೆ ತೀವ್ರ ಅನಾರೋಗ್ಯ ಉಂಟಾಗಿರುತ್ತದೆ. ಹೀಗಾಗಿ, ಆಕೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಸತ್ಯ. ಆ ಸಿಟಿಯಲ್ಲಿ ಸಾಕಷ್ಟು ಸ್ಫೋಟಗಳು ಆಗುತ್ತವೆ. ಆ ಎಲ್ಲಾ ಆರೋಪಗಳು ಬರೋದು ಸತ್ಯನ ಮೇಲೆ. ಹಾಗಾದರೆ, ನಿಜವಾಗಲೂ ಇದನ್ನು ಸತ್ಯನೇ ಮಾಡಿರುತ್ತಾನಾ? ಇದನ್ನು ಹುಡುಕಿ ಹೋದಾಗ ಕಥೆ ಬೇರೆ ದಿಕ್ಕಲ್ಲಿ ಸಾಗುತ್ತದೆ.
ಇಡೀ ಸಿನಿಮಾದಲ್ಲಿ ಹೈಲೈಟ್ ಆಗುವ ಅಂಶ ಸಾಕಷ್ಟಿದೆ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ರಸದೌತಣ ಬಡಿಸಲಿದೆ. ಸಿನಿಮಾದ ಬಹುತೇಕ ಕಥೆ ಸಾಗೋದು ವಿದೇಶದಲ್ಲಿ. ಇದಕ್ಕೆ ಚಿತ್ರತಂಡ ಆಯ್ಕೆ ಮಾಡಿಕೊಂಡ ಲೊಕೇಷನ್ಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಇನ್ನು, ಚೇಸಿಂಗ್ ದೃಶ್ಯಗಳು ಮೈ ನವಿರೇಳಿಸುತ್ತವೆ. ಬಿಗ್ ಬಜೆಟ್ ಚಿತ್ರವಾದ್ದರಿಂದ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗಿಲ್ಲ. ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಕಣ್ಣಿಗೆ ಹಬ್ಬದೂಟ ನೀಡುತ್ತದೆ. ಅರ್ಜುನ್ ಜನ್ಯಾ ಎಂದಿನಂತೆ ಸಂಗೀತದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ನಿರ್ದೇಶಕ ಶಿವಕಾರ್ತಿಕ್ ಮೊದಲ ಪ್ರಯತ್ನದಲ್ಲಿ ಒಂದು ಹಂತದವರೆಗೆ ಗೆದ್ದಿದ್ದಾರೆ.
ಇಡೀ ಸಿನಿಮಾದಲ್ಲಿ ಸುದೀಪ್ ನಟನೆ ಹೈಲೈಟ್ ಆಗುತ್ತದೆ. ಅವರಿಗೆ ಸಿನಿಮಾದಲ್ಲಿ ಹಲವು ಗೆಟಪ್ಗಳಿವೆ. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಸಿನಿಮಾದ ಆರಂಭದಲ್ಲೇ ಬರುವ ವಿಶೇಷ ಸಾಂಗ್ನಲ್ಲಿ ಆಶಿಕಾ ಹೆಜ್ಜೆ ಹಾಕಿದ್ದು, ಹುಡುಗರ ಹಾರ್ಟ್ಬೀಟ್ ಹೆಚ್ಚುವಂತೆ ಮಾಡಿದ್ದಾರೆ. ಅವರು ಸೊಂಟ ಬಳುಕಿಸೋ ಶೈಲಿಗೆ ಚಿತ್ರಮಂದಿರದಲ್ಲಿ ಶಿಳ್ಳೆಗಳು ಬೀಳುತ್ತವೆ. ವಿಲನ್ ಆಗಿ ನವಾಬ್ ಶಾ ತಮ್ಮ ಗತ್ತನ್ನು ಮೆರೆದಿದ್ದಾರೆ. ನಟಿ ಮಡೊನ್ನಾ ಸೆಬಾಸ್ಟಿಯನ್ ಗ್ಲಾಮರ್ ಲುಕ್ ವೀಕ್ಷಕರಿಗೆ ಇಷ್ಟವಾಗುತ್ತದೆ. ಬಾಲಿವುಡ್ ಆ್ಯಕ್ಟರ್ಗಳಾದ ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ಪಾತ್ರ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತದೆ.
ಹಾಗಾದರೆ, ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದೆಯಾ? ಎಲ್ಲವೂ ಪರ್ಫೆಕ್ಟ್ ಆಗಿದೆಯೇ? ಎಂದು ಕೇಳಿದರೆ ಪ್ರೇಕ್ಷಕನಿಂದ ಇಲ್ಲ ಎನ್ನುವ ಉತ್ತರವೇ ಬರುತ್ತದೆ. ಸಿನಿಮಾದಲ್ಲಿ ಸಾಕಷ್ಟು ಕಡೆಗಳಲ್ಲಿ ಲಾಜಿಕ್ಗಳನ್ನು ಮೂಟೆ ಕಟ್ಟಿ ಅಟ್ಟಕ್ಕೆ ಸೇರಿಸಲಾಗಿದೆ. ‘ಕೋಟಿಗೊಬ್ಬ 2’ ಸಿನಿಮಾಗೂ ‘ಕೋಟಿಗೊಬ್ಬ 3’ ಕಥೆಗೂ ಲಿಂಕ್ ಕೊಡುವ ಪ್ರಯತ್ನ ನಡೆದಿದೆ. ಆದರೆ, ಕೆಲವೊಂದಷ್ಟು ಮುಖ್ಯ ಅಂಶಗಳು ಈ ಲಿಂಕ್ನಲ್ಲಿ ಮಿಸ್ ಆಗಿವೆ. ಸತ್ಯ ಅನ್ನೋ ಕ್ಯಾರೆಕ್ಟರ್ ಇದರಲ್ಲೂ ಟ್ರಾವೆಲ್ ಆಗಿದೆ. ಆದರೆ, ಸತ್ಯನ ಲವರ್ ಶುಭಾ ( ನಿತ್ಯಾ ಮೆನನ್) ಸೇರಿ ಪ್ರಮುಖ ಪಾತ್ರಗಳು ಇಲ್ಲಿಗೆ ಬಂದಿಲ್ಲ.
ಕೆಲವು ಕಡೆಗಳಲ್ಲಿ ಸಿನಿಮಾ ಬೇಸರ ತರಿಸುತ್ತದೆ. ರವಿ ಶಂಕರ್ ಅದ್ಭುತ ನಟ ಎನ್ನುವುದನ್ನು ಮತ್ತೆ ಹೇಳಬೇಕಿಲ್ಲ. ಆದರೆ, ಈ ಸಿನಿಮಾದಲ್ಲಿ ಅವರ ನಟನೆ ಕೆಲವು ಕಡೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅಚ್ಚರಿ ಎನಿಸುತ್ತದೆ. ಟ್ವಿಸ್ಟ್ ಆ್ಯಂಡ್ ಟರ್ನ್ಗಳು ಹೆಚ್ಚಿದೆ ನಿಜ. ಆದರೆ, ಇದನ್ನು ಪ್ರೇಕ್ಷಕ ಸುಲಭವಾಗಿ ಊಹಿಸುತ್ತಾನೆ. ಹೀರೋನನ್ನು ಹೆಡೆಮುರಿ ಕಟ್ಟೋಕೆ ವಿರೋಧಿ ಗ್ಯಾಂಗ್ನವರು ಅವನ ಆಪ್ತರನ್ನು ಕಿಡ್ನ್ಯಾಪ್ ಮಾಡುವ ಹಳೆಯ ಟೆಕ್ನಿಕ್ ಇಲ್ಲಿಯೂ ಬಳಕೆ ಆಗಿದೆ. ಕಥೆಯಲ್ಲಿ ಗಟ್ಟಿತನ ಇಲ್ಲ. ಆರಂಭದಲ್ಲಿ ಕಥೆ ಟೇಕ್ಆಫ್ ಆಗುವವರೆಗೂ ಪ್ರೇಕ್ಷಕರು ಸ್ವಲ್ಪ ಸಹಿಸಿಕೊಳ್ಳಬೇಕು.
ಇದನ್ನೂ ಓದಿ: ಹೇಗಿದೆ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಮೊದಲಾರ್ಧ? ಇಲ್ಲಿದೆ ಫುಲ್ ರಿಪೋರ್ಟ್
Published On - 2:16 pm, Fri, 15 October 21