ಚಿತ್ರ: ಕೆಟಿಎಂ. ನಿರ್ಮಾಣ: ವಿನಯ್ ಕುಮಾರ್ ಎಚ್. ನಿರ್ದೇಶನ: ಅರುಣ. ಪಾತ್ರವರ್ಗ: ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್, ಕಾಜಲ್ ಕುಂದರ್, ದೇವ್ ದೇವಯ್ಯ, ಉಷಾ ಭಂಡಾರಿ, ತುಕಾಲಿ ಸಂತೋಷ್, ಅಭಿಷೇಕ್ ಶ್ರೀಕಾಂತ್ ಮುಂತಾದವರು. ಸ್ಟಾರ್: 3/5
ಕಿರುತೆರೆಯಿಂದ ಬಂದು, ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟ ದೀಕ್ಷಿತ್ ಶೆಟ್ಟಿ (Deekshith Shetty) ಅವರು ಭರವಸೆಯ ಕಲಾವಿದನಾಗಿ ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ದೀಕ್ಷಿತ್ ಶೆಟ್ಟಿ ಅಭಿನಯಿಸಿದ ಮೊದಲ ಸಿನಿಮಾ ‘ದಿಯಾ’ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಅದರಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ಮತ್ತೊಮ್ಮೆ ದೀಕ್ಷಿತ್ ಶೆಟ್ಟಿ ಅವರ ಅಭಿನಯವನ್ನು ಎಂಜಾಯ್ ಮಾಡಬೇಕು ಎಂಬುವವರಿಗಾಗಿ ‘ಕೆಟಿಎಂ’ ಸಿನಿಮಾ (KTM Kannada Movie) ಬಂದಿದೆ. ಅರುಣ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿನಯ್ ಕುಮಾರ್ ಎಚ್. ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ ಜೊತೆ ನಾಯಕಿಯರಾಗಿ ಸಂಜನಾ ದಾಸ್ ಮತ್ತು ಕಾಜಲ್ ಕುಂದರ್ ನಟಿಸಿದ್ದಾರೆ. ಹಲವು ಭಾವನೆಗಳ ಮಿಶ್ರಣದಂತೆ ಇರುವ ‘ಕೆಟಿಎಂ’ ಸಿನಿಮಾದ ವಿಮರ್ಶೆ (KTM Review) ಇಲ್ಲಿದೆ..
‘ಕೆಟಿಎಂ’ ಸಿನಿಮಾದ ಕಥೆ ಶುರುವಾಗುವುದು ಕರಾವಳಿಯಿಂದ. ಉಡುಪಿ, ಕೋಟ, ಕುಂದಾಪುರ ಮುಂತಾದ ಊರುಗಳಲ್ಲಿ ಆಡಿ ಬೆಳೆದ ಹುಡುಗನ ಕಹಾನಿ ಇದು. ಇಲ್ಲಿನ ಪರಿಸರಲ್ಲಿ ಮುಗ್ಧ ಬಾಲಕನಾಗಿದ್ದ ಕಥಾನಾಯಕನ ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸುತ್ತದೆ. ನಂತರ ಆತನ ಪಯಣ ಬೆಂಗಳೂರಿನತ್ತ ಸಾಗುತ್ತದೆ. ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸಿದಾಗ ಮುಗ್ಧ ಯುವಕನ ಜೀವನದಲ್ಲಿ ತಲ್ಲಣಗಳು ಸೃಷ್ಟಿ ಆಗುತ್ತವೆ. ತನ್ನನ್ನೇ ಅರಸಿ ಬಂದ ಪ್ರೀತಿಯನ್ನು ಉಳಿಸಿಕೊಳ್ಳಲು ಅವನಿಗೆ ಎದುರಾಗುವ ಸವಾಲುಗಳು ಹಲವು. ಬಳಿಕ ಜೂಜಿನ ಜಾಲವೂ ಎದುರಾಗುತ್ತದೆ. ಇನ್ನೇನು ಕಥಾನಾಯಕನ ಜೀವನ ಅಂತ್ಯವೇ ಆಯ್ತು ಎನ್ನುವ ಪರಿಸ್ಥಿತಿ ಬರುತ್ತದೆ. ‘ಈಗ ಏನ್ ಮಾಡ್ತಾನೆ ನಿಮ್ ಹೀರೋ’ ಎಂಬ ಪ್ರಶ್ನೆ ಎದುರಾಗುವಾಗ ದೊಡ್ಡ ಟ್ವಿಸ್ಟ್ ನೀಡುತ್ತಾರೆ ನಿರ್ದೇಶಕರು. ಅದೇನು ಎಂಬುದು ತಿಳಿಯಲು ‘ಕೆಟಿಎಂ’ ಸಿನಿಮಾ ಪೂರ್ತಿ ನೋಡಬೇಕು.
ಒಂದೇ ಮಾತಲ್ಲಿ ಇದನ್ನು ದೀಕ್ಷಿತ್ ಶೆಟ್ಟಿಯ ಸಿನಿಮಾ ಎನ್ನಬಹುದು. ಯಾಕೆಂದರೆ, ಆರಂಭದಿಂದ ಅಂತ್ಯದ ತನಕ ಈ ಸಿನಿಮಾದಲ್ಲಿ ಅವರು ಮಿಂಚುತ್ತಾರೆ. ಹಲವು ಶೇಡ್ ಮತ್ತು ಗೆಟಪ್ ಇರುವ ಪಾತ್ರವನ್ನು ನಿಭಾಯಿಸಲು ಅವರಿಗೆ ಅವಕಾಶ ಸಿಕ್ಕಿದೆ. ಒಮ್ಮೊಮ್ಮೆ ಅತಿ ಒಳ್ಳೆಯವನಾಗಿ, ಕೆಲವೊಮ್ಮೆ ಕೆಟ್ಟವನಾಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಎಲ್ಲ ಬಗೆಯ ಶೇಡ್ಗೂ ಅವರು ಜೀವ ತುಂಬಿದ್ದಾರೆ. ಕೆಲವು ದೃಶ್ಯಗಳಲ್ಲಿ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ನೆನಪಿಸುತ್ತಾರೆ. ಶಾಲಾ ಬಾಲಕನಾಗಿ, ಮುಗ್ಧ ಮನಸ್ಸಿನ ಲವರ್ ಬಾಯ್ ಆಗಿ, ಭಗ್ನ ಪ್ರೇಮಿಯಾಗಿ, ಮಧ್ಯವ್ಯಸನಿಯಾಗಿ, ಜೂಜುಕೋರನಾಗಿ, ಎಲ್ಲರೂ ಹೆಮ್ಮೆಪಡುವ ವ್ಯಕ್ತಿಯಾಗಿ.. ಹೀಗೆ ಹಲವು ಮುಖಗಳಿರುವ ಪಾತ್ರವನ್ನು ದೀಕ್ಷಿತ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: Review: ‘ನಗುವಿನ ಹೂಗಳ ಮೇಲೆ’ ಪ್ರೀತಿ ಹಾಗೂ ತಾಳ್ಮೆಯ ಪಾಠ; ಇದು ಪ್ರೇಮಿಗಳ ದಿನದ ಸ್ಪೆಷಲ್
‘ಕೆಟಿಎಂ’ ಸಿನಿಮಾದಲ್ಲಿ ನಾಯಕಿಯರಾಗಿ ಸಂಜನಾ ದಾಸ್ ಮತ್ತು ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಆರಂಭದಲ್ಲಿ ಮತ್ತು ಕ್ಲೈಮ್ಯಾಕ್ಸ್ನಲ್ಲಿ ಕಾಜಲ್ ಕುಂದರ್ ಮಿಂಚಿದ್ದಾರೆ. ಇನ್ನುಳಿದ ದೃಶ್ಯಗಳಲ್ಲಿ ಸಂಜನಾ ದಾಸ್ ಹೈಲೈಟ್ ಆಗಿದ್ದಾರೆ. ತ್ರಿಕೋನ ಪ್ರೇಮಕಥೆ ಈ ಸಿನಿಮಾದಲ್ಲಿ ಇದೆ. ನಟಿಯರಿಬ್ಬರು ಕೂಡ ದೀಕ್ಷಿತ್ ಶೆಟ್ಟಿಗೆ ಉತ್ತಮವಾಗಿ ಜೋಡಿಯಾಗಿದ್ದಾರೆ. ಅಂತಿಮವಾಗಿ ಯಾರ ಮಡಿಲಿಗೆ ಕಥಾನಾಯಕನ ಪ್ರೀತಿ ಸಿಗುತ್ತದೆ ಎಂಬುದೇ ‘ಕೆಟಿಎಂ’ ಚಿತ್ರದ ಸಸ್ಪೆನ್ಸ್.
ಈ ಸಿನಿಮಾದಲ್ಲಿ ನಿರ್ದೇಶಕ ಅರುಣ ಅವರು ಹಲವು ವಿಚಾರಗಳನ್ನು ಎಳೆದು ತಂದಿದ್ದಾರೆ. ಆ ಮೂಲಕ ಯುವಕರಿಗೆ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಜವಾಬ್ದಾರಿ ಇಲ್ಲದೇ ಹುಚ್ಚು ಪ್ರೀತಿ ಮತ್ತು ಜೂಜಿನ ಸುಳಿಗೆ ಸಿಲುಕುವ ಯುವಕರ ಬದುಕು ಎಂಥ ದುಸ್ಥಿತಿಗೆ ತಲುಪುತ್ತದೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅವರ ಉದ್ದೇಶ ಒಳ್ಳೆಯದೇ ಇದ್ದರೂ ಕೂಡ ಕಥೆ ಎತ್ತೆತ್ತಲೋ ಸಾಗಿದಂತೆ ಭಾಸವಾಗುತ್ತದೆ. ಮೊದಲು ಪ್ರೇಮ್ ಕಹಾನಿ ನೋಡುವ ಪ್ರೇಕ್ಷಕರಿಗೆ ನಂತರ ಬೆಟ್ಟಿಂಗ್ ಭೂತ ಕಾಣಿಸುತ್ತದೆ. ಇದರಿಂದ ಪ್ರೇಕ್ಷಕರ ಗಮನ ಬೇರೆಡೆಗೆ ಸೆಳೆದಂತಾಗುತ್ತದೆ. ಇದೆಲ್ಲದರ ಜೊತೆಗೆ ಸ್ನೇಹದ ಮಹತ್ವ ಸಾರಲು ಕೂಡ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಹೀಗೆ ಇದು ಎಲ್ಲದರ ಮಿಶ್ರಣದಂತೆ ಕಾಣುತ್ತದೆ. ಹೀರೋ ಫ್ರೆಂಡ್ಸ್ ಪಾತ್ರದಲ್ಲಿ ತುಕಾಲಿ ಸಂತೋಷ್ ಮತ್ತು ಅಭಿಷೇಕ್ ಶ್ರೀಕಾಂತ್ ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದಿದ್ದಾರೆ.
ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡಲು ಫ್ಲ್ಯಾಶ್ಬ್ಯಾಕ್ ತಂತ್ರವನ್ನು ಬಳಸಲಾಗಿದೆ. ಓದಿ ಉದ್ದಾರ ಆಗಲು ಬೆಂಗಳೂರಿಗೆ ಬರುವ ಹೀರೋ ನಂತರದ ದೃಶ್ಯದಲ್ಲಿ ಗಡ್ಡ ಬಿಟ್ಟುಕೊಂಡು ಭಿಕಾರಿಯಂತೆ ಕಾಣಿಸಿಕೊಳ್ಳುತ್ತಾನೆ. ಹೆಂಡಕ್ಕೆ ದಾಸನಾಗಿ ಅಲೆಯುತ್ತಾನೆ. ಅಪ್ಪ-ಅಮ್ಮನಿಗೆ ಬೇಡವಾಗುವ ಮಗನಾಗಿ ಶಾಪ ಹಾಕಿಸಿಕೊಳ್ಳುತ್ತಾನೆ. ಇದಕ್ಕೆಲ್ಲ ಕಾರಣ ಏನು ಎಂಬುದು ಗೊತ್ತಾಗುವುದು ಫ್ಲ್ಯಾಶ್ಬ್ಯಾಕ್ ತೆರೆದುಕೊಂಡಾಗ. ಈ ಪರಿ ತದ್ವಿರುದ್ಧ ಶೇಡ್ ಇರುವ ಪಾತ್ರಕ್ಕೆ ದೀಕ್ಷಿತ್ ಶೆಟ್ಟಿ ಅವರು ನ್ಯಾಯ ಒದಗಿಸಿದ್ದಾರೆ. ತಮ್ಮ ಅಭಿನಯವನ್ನು ತೋರಿಸಲು ಅವರಿಗೆ ಈ ಸಿನಿಮಾದಲ್ಲಿ ಉತ್ತಮ ವೇದಿಕೆ ಸಿಕ್ಕಿದೆ.
ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ
ಒಂದೆಡೆಯಿಂದ ಮತ್ತೊಂದೆಡೆಗೆ ಗುರಿ ಇಲ್ಲದಂತೆ ಸಾಗುವ ಕಹಾನಿಯಿಂದಾಗಿ ‘ಕೆಟಿಎಂ’ ಸ್ವಲ್ಪ ಸ್ಕಿಡ್ ಆದಂತೆ ಅನಿಸುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ನಿರ್ದೇಶಕರು ನೀಡಿದ ಟ್ವಿಸ್ಟ್ ಸಿಕ್ಕಾಪಟ್ಟೆ ಸಿನಿಮೀಯವಾಗಿದೆ. ಕಾಮಿಡಿ ಹೆಸರಲ್ಲಿ ಒಂಚೂರು ಕಾಲಹರಣ ಆಗಿದೆ. ಫಸ್ಟ್ ಹಾಫ್ನಲ್ಲಿ ಬರುವ ಹಾಡುಗಳು ಕಥೆಗೆ ಹೆಚ್ಚೇನೂ ಪೂರಕವಾಗಿಲ್ಲ. ಇಂಥ ಕೆಲವು ಮೈನಸ್ ಅಂಶಗಳನ್ನು ಬದಿಗಿಟ್ಟರೆ ದೀಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಿಗೆ ‘ಕೆಟಿಎಂ’ ಸಿನಿಮಾ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.