Marigold Movie Review: ದುಬಾರಿ ಗೋಲ್ಡ್​ ಬಗ್ಗೆ ಸಿಂಪಲ್ ಕಥೆ; ದುಡ್ಡಿನ ಹಿಂದೆ ಹೋದ್ರೆ ಚಿತೆ

ಟ್ರೇಲರ್ ಮೂಲಕವೇ ‘ಮಾರಿಗೋಲ್ಡ್’ ಸಿನಿಮಾ ಕುತೂಹಲ ಮೂಡಿಸಿತ್ತು. ದಿಗಂತ್ ಮಂಚಾಲೆ, ಸಂಗೀತಾ ಶೃಂಗೇರಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಸಿನಿಮಾ ಇಂದು (ಏಪ್ರಿಲ್ 5) ರಿಲೀಸ್ ಆಗಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.

Marigold Movie Review: ದುಬಾರಿ ಗೋಲ್ಡ್​ ಬಗ್ಗೆ ಸಿಂಪಲ್ ಕಥೆ; ದುಡ್ಡಿನ ಹಿಂದೆ ಹೋದ್ರೆ ಚಿತೆ
ಮಾರಿಗೋಲ್ಡ್ ತಂಡ
Follow us
ರಾಜೇಶ್ ದುಗ್ಗುಮನೆ
|

Updated on:Apr 05, 2024 | 10:34 AM

ಚಿತ್ರ: ಮಾರಿಗೋಲ್ಡ್. ನಿರ್ಮಾಣ: ರಘುವರ್ಧನ್ ಶರವಣ. ನಿರ್ದೇಶನ: ರಾಘವೇಂದ್ರ ನಾಯಕ್. ಪಾತ್ರವರ್ಗ: ದಿಗಂತ್, ಸಂಗೀತಾ ಶೃಂಗೇರಿ, ಸಂಪತ್ ಮೈತ್ರಿ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ವಜ್ರಂಗ ಶೆಟ್ಟಿ ಮುಂತಾದವರು. ಸ್ಟಾರ್: 3/5

ದಿಗಂತ್ ಅವರು ಚಾಕೋಲೇಟ್ ಬಾಯ್ ಆಗೇ ಫೇಮಸ್. ಅವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ’ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರಿಬ್ಬರೂ ಜೊತೆಯಾಗಿ ನಟಿಸಿರೋ ಸಿನಿಮಾ ‘ಮಾರಿಗೋಲ್ಡ್’. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರೋ ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಸಿನಿಮಾ ಹೇಗಿದೆ, ಪ್ಲಸ್ ಏನು ಮೈನಸ್ ಏನು ಎಂಬ ಬಗ್ಗೆ ಇಲ್ಲಿದೆ ವರದಿ.

ಕೃಷ್ಣನಿಗೆ (ದಿಗಂತ್) ಸದಾ ಹಣದ್ದೇ ಚಿಂತೆ. ಹಣಕ್ಕಾಗಿ ಸಾಕಷ್ಟು ಹೇಸಿಗೆ ಕೆಲಸವನ್ನು ಆತ ಮಾಡಿದ್ದಾನೆ. ಈ ಬಗ್ಗೆ ಆತನಿಗೆ ಬೇಸರವೇ ಇಲ್ಲ. ಆತ ಸಣ್ಣ ಪುಟ್ಟ ಡೀಲ್​ಗಳನ್ನು ಮಾಡಿ ಹಣ ಮಾಡಿಕೊಂಡು ಇರುತ್ತಾನೆ. ಆತನಿಗೆ ಒಂದು ಕಡೆ 20 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನ ಇರೋದು ಗೊತ್ತಾಗುತ್ತದೆ. ಆತನ ಗೆಳೆಯರ (ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಸಂಗೀತಾ) ಜೊತೆ ಸೇರಿ ಇದನ್ನು ಕದಿಯೋಕೆ ಹೋಗುತ್ತಾನೆ. ಅಲ್ಲಿಂದ ಅವರ ಸಂಪೂರ್ಣ ಜೀವನವೇ ಬದಲಾಗುತ್ತದೆ. ಅಷ್ಟಕ್ಕೂ ಆ ಚಿನ್ನ ಯಾರದ್ದು? ಅದನ್ನು ಹೇಗೆ ಕದಿಯುತ್ತಾರೆ? ಬೇರೆಯವರ ದುಡ್ಡಿನ ಹಿಂದೆ ಬಿದ್ದರೆ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

ಈಗಾಗಲೇ ಕನ್ನಡದಲ್ಲಿ ಹಲವು ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾಗಳು ಬಂದು ಹೋಗಿವೆ. ಅದಕ್ಕಿಂತ ಇದು ಹೆಚ್ಚು ಭಿನ್ನವಾಗಿಯೇನೂ ಇಲ್ಲ. ‘ಮಾರಿಗೋಲ್ಡ್’ ಸಿನಿಮಾದ ಮೇಕಿಂಗ್, ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಹಳೆಯ ಸಿದ್ಧ ಸೂತ್ರಗಳನ್ನೇ ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಹೊಸತನ ಇದ್ದಿದ್ದರೆ ಸಿನಿಮಾ ಇನ್ನೂ ಚೆಂದ ಎನಿಸುತ್ತಿತ್ತು. ಕ್ಲೈಮ್ಯಾಕ್ಸ್ ಯಾವ ರೀತಿ ಮೂಡಿಬರುತ್ತದೆ ಎಂದು ಪ್ರೇಕ್ಷಕರು ಊಹಿಸಿರುತ್ತಾರೋ ಆ ರೀತಿಯಲ್ಲಿ ಇಲ್ಲ. ಹಣದ ಆಸೆಗೆ ಬಿದ್ದರೆ ಆಗೋದು ಏನು ಎಂಬುದನ್ನು ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

‘ಮಾರಿಗೋಲ್ಡ್’ ಸಿನಿಮಾಗೆ ರಘು ನಿಡುವಳ್ಳಿ ಬರೆದ ಸಂಭಾಷಣೆ ಪ್ಲಸ್ ಆಗಿದೆ. ಸಿನಿಮಾದ ಉದ್ದಕ್ಕೂ ಪಂಚಿಂಗ್ ಹಾಗೂ ನಗುವಿನ ಕಚಗುಳಿ ಇಡುವ ಸಂಭಾಷಣೆ ಗಮನ ಸೆಳೆದಿವೆ. ಅಶ್ಲೀಲ ಡೈಲಾಗ್​ಗಳು ಯತೇಚ್ಛವಾಗಿದೆ. ಈ ಕಾರಣಕ್ಕೆ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಹೀಗಾಗಿ 18 ವರ್ಷ ಕೆಳಗಿನವರು ಈ ಸಿನಿಮಾನ ವೀಕ್ಷಿಸೋಕೆ ಸಾಧ್ಯವಿಲ್ಲ.

ದಿಗಂತ್ ಅವರು ನಟನೆಯ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಂಡವರು. ‘ಮಾರಿಗೋಲ್ಡ್’ ಸಿನಿಮಾದಲ್ಲಿ ಅವರ ನಟನೆ ಸಾಕಷ್ಟು ಇಷ್ಟವಾಗುತ್ತದೆ. ಪಂಚಿಂಗ್ ಡೈಲಾಗ್​ ಮೂಲಕ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಅವರು ಪ್ರಬುದ್ಧ ನಟನೆ ತೋರಿದ್ದಾರೆ. ಅವರ ಭಿನ್ನ ಮ್ಯಾನರಿಸಂ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಸಿನಿಮಾ ಉದ್ದಕ್ಕೂ ಅವರು ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಸಂಗೀತಾ ಶೃಂಗೇರಿ ಅವರು ಬಾರ್​ನಲ್ಲಿ ಡಾನ್ಸರ್ ಆಗಿ, ಪ್ರೀತಿ ಬಗ್ಗೆ ತನ್ನದೇ ಕಲ್ಪನೆ ಹೊಂದಿ, ಏನೂ ಬೇಕಾದರೂ ಮಾಡುವೆ ಎನ್ನುವ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಕಾಕ್ರೋಚ್ ಸುಧಿ, ಯಶ್ ಶೆಟ್ಟಿ ಪಾತ್ರಕ್ಕೂ ತೂಕ ಇದೆ. ಸಂಪತ್ ಮೈತ್ರಿ ಅವರು ಇಡೀ ಕಥೆಗೆ ಟ್ವಿಸ್ಟ್ ಕೊಡೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ನಟನೆಯಲ್ಲಿ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.

ರಾಘವೇಂದ್ರ ಅವರು ಒಂದು ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಕಥೆಯ ಬಗ್ಗೆ, ನಿರೂಪಣೆಯ ಬಗ್ಗೆ ಅವರು ಇನ್ನಷ್ಟು ಮುತುವರ್ಜಿ ವಹಿಸಬೇಕಿತ್ತು. ಅಶ್ಲೀಲ ಡೈಲಾಗ್​ಗಳು ಇಲ್ಲದೇ ಹೋಗಿದ್ದರೆ ಎಲ್ಲರಿಗೂ ಈ ಸಿನಿಮಾ ನೋಡುವ ಅವಕಾಶ ಸಿಗುತ್ತಿತ್ತು. ಇದು ಸಸ್ಪೆಲ್ಸ್ ಥ್ರಿಲ್ಲರ್ ಸಿನಿಮಾ ಆದರೂ ಕುರ್ಚಿ ತುದಿಮೇಲೆ ಪ್ರೇಕ್ಷಕರನ್ನು ಕೂರಿಸುವುದಿಲ್ಲ. ಕೆಲವು ದೃಶ್ಯಗಳು ಇಲ್ಲಿ ಅವಶ್ಯಕತೆ ಇತ್ತೇ? ಎನ್ನುವ ಪ್ರಶ್ನೆಯೂ ಕಾಡುತ್ತದೆ. ಸಿನಿಮಾದ ಹಾಡುಗಳು ಸಿನಿಮಾಗೆ ಪೂರಕವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:34 am, Fri, 5 April 24