‘ಮೋಡ ಕವಿದ ವಾತಾವರಣ’ದಲ್ಲಿ ಬೆಚ್ಚಗಾಗಿಸೋ ಸಿಂಪಲ್ ಸುನಿ

‘ಮೋಡ ಕವಿದ ವಾತಾವರಣ’ದಲ್ಲಿ ಬೆಚ್ಚಗಾಗಿಸೋ ಸಿಂಪಲ್ ಸುನಿ
ಮೋಡ ಕವಿದ ವಾತಾವರಣ

ಮೋಡ ಕವಿದ ವಾತಾವರಣ

UA
  • Time - 120 Minutes
  • Released - ಜೂನ್ 26, 2026
  • Language - ಕನ್ನಡ
  • Genre - ರೊಮ್ಯಾಂಟಿಕ್ ಥ್ರಿಲ್ಲರ್
Cast - ಶೀಲಮ್, ಮೋಕ್ಷಾ ಕುಶಾಲ್, ಸಾತ್ವಿಕಾ
Director - ಸಿಂಪಲ್ ಸುನಿ
3
Critic's Rating

Updated on: Jun 26, 2026 | 11:24 AM

‘ಸಿಂಪಲ್ ಆಗ್ ಒಂದ್ ಲವ್​ ಸ್ಟೋರಿ’ ಸಿನಿಮಾ 2013ರಲ್ಲಿ ರಿಲೀಸ್ ಆಯಿತು. ಸುನಿ ನಿರ್ದೇಶನದ ಈ ಚಿತ್ರ ಓಪನ್ ಆಗೋದ ಮಳೆಯ ದೃಶ್ಯದಿಂದ. ಈಗ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಂದಿದೆ. ಈ ಚಿತ್ರದ ಓಪನ್ ದೃಶ್ಯದಲ್ಲೂ ಮಳೆ ಇದೆ. ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ರೀತಿಯ ಕವನದ ಸಾಲುಗಳು ಇಲ್ಲಿಯೂ ಬಂದು ಹೋಗುತ್ತವೆ. ಆ ಸಿನಿಮಾ ರೀತಿಯೇ ಇಲ್ಲಿಯೂ ಕಥೆ ಸಿಂಪಲ್. ಆದರೆ, ಒಂದಷ್ಟು ಥ್ರಿಲ್ ಹಾಗೂ ಕಥೆಯ ಮೂಲಕ ಸುನಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಅಲ್ಲಲ್ಲಿ ಥ್ರಿಲ್ ಕೊಡುತ್ತಾ, ಪ್ರೀತಿಯ ಮಳೆ ಸುರಿಸುತ್ತಾ, ಶೃಂಗಾರದ ಹೊಳೆ ಹರಿಸುತ್ತಾ, ಸಾಗುತ್ತದೆ ‘ಮೋಡ ಕವಿದ ವಾತಾವರಣ’. ಹಾಗಾದರೆ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ.

ಚೆರಿಶ್ (ಶೀಲಮ್) ಸಿಂಪಲ್ ಹುಡುಗ. ಆತನಿಗೆ ಜೀವನ ಹಾಗೂ ಪ್ರೀತಿ ಎರಡರಲ್ಲೂ ಗಂಭೀರತೆ ಇಲ್ಲ. ಪ್ರೀತಿಸಿದ ಹುಡುಗಿ ಸಾತ್ವಿಕಾ (ಸಾತ್ವಿಕಾ) ಜೊತೆ ಪದೇ ಪದೇ ಬ್ರೇಕಪ್ ಆಗುತ್ತಲೇ ಇರುತ್ತದೆ. ಇದೆಲ್ಲವನ್ನೂ ಸಾರ್ಟ್​​​ಔಟ್ ಮಾಡಬೇಕು, ಭವಿಷ್ಯದ ಬಗ್ಗೆ ಮಾತನಾಡಬೇಕು ಎಂದು ಆಕೆಯ ಜೊತೆ ಒಂದು ರೆಸಾರ್ಟ್​​ಗೆ ತೆರಳುತ್ತಾನೆ. ಅಲ್ಲಿ ಸೌಪರ್ಣಿಕಾ (ಮೋಕ್ಷಾ ಕುಶಾಲ್) ಭೇಟಿ ಆಗುತ್ತದೆ. ಆಕೆಗೆ ಎಂಗೇಜ್​​ಮೆಂಟ್ ಕೂಡ ಆಗಿರುತ್ತದೆ. ಅಲ್ಲಿಂದ ಕಥೆ ಬೇರೆಯದೇ ರೀತಿ ಸಾಗುತ್ತದೆ. ಹಾಗಾದರೆ ಇದು ಟ್ರಯಾಂಗಲ್ ಲವ್​ ಸ್ಟೋರಿನಾ? ಸೌಪರ್ಣಿಕಾ ಭೇಟಿ ಬಳಿಕ ಏನೆಲ್ಲ ಆಗುತ್ತದೆ ಎಂಬುದನ್ನು ಥಿಯೇಟರ್​​ನಲ್ಲಿಯೇ ನೋಡಬೇಕು.

ಸಿಂಪಲ್ ಸುನಿಯ ಸ್ಟ್ರೆಂತ್ ಎಂದರೆ ಹಾಸ್ಯ ಹಾಗೂ ಪಂಚಿಂಗ್​ ಡೈಲಾಗ್​​ಗಳು. ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಅವರು ಹಾಸ್ಯದ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿಲ್ಲ. ಬದಲಿಗೆ ಥ್ರಿಲ್ಲರ್ ಅಂಶ, ಶೃಂಗಾರದ ಮೂಲಕ ಪ್ರೇಕ್ಷಕರನ್ನು ಬೆಚ್ಚಗಾಗಿಸುತ್ತಾರೆ. ಇಂಟರ್​​ವಲ್ ವೇಳೆ ಸೀಟಿನ ತುದಿಯಲ್ಲಿ ತಂದು ಕೂರಿಸುತ್ತಾರೆ. ದ್ವಿತೀಯಾರ್ಧದಲ್ಲಿ ಪುಟಗಳು ತಿರುವಿ ಹಾಕಿದಂತೆಲ್ಲ ಹೊಸ ಹೊಸ ವಿಷಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಸಲಿಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಕ್ಲೈಮ್ಯಾಕ್ಸ್​​ವರೆಗೆ ಕಾಯಲೇಬೇಕು. ಆ ರೀತಿಯಲ್ಲಿ ಸುನಿ ಸಿನಿಮಾ ಮಾಡಿದ್ದಾರೆ.

ಸುನಿ ಸಿನಿಮಾದ ಮತ್ತೊಂದು ಹೈಲೈಟ್ ಎಂದರೆ ಪ್ರೀತಿ-ಪ್ರೇಮ-ಪ್ರಣಯ. ಈ ಚಿತ್ರದಲ್ಲಿ ಈ ಮೂರು ಅಂಶಗಳನ್ನು ಬೆರೆಸಿದ್ದಾರೆ. ಆದರೆ, ಪ್ರೀತಿ ಎಂಬ ವಿಷಯವನ್ನು ಆಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಅವರು ಆಯ್ದುಕೊಂಡ ಕಥೆ ಉತ್ತಮವಾಗಿ ಹೊಂದಿಕೆ ಆಗಿದೆ. ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು, ಸಣ್ಣ ಬಜೆಟ್​ನಲ್ಲಿ ಹೇಗೆ ಮಾಡಬೇಕು ಎಂಬುದಕ್ಕೆ ಸುನಿ ಮಾದರಿ ಆಗುತ್ತಾರೆ. ಜುಡಾ ಸ್ಯಾಂಡಿ ಸಂಗೀತ ಚಿತ್ರದ ಮೆರುಗನ್ನು ಹೆಚ್ಚಿಸಿದೆ.
ಪಾತ್ರವರ್ಗದ ವಿಷಯಕ್ಕೆ ಬರೋದಾದರೆ ಶೀಲಮ್ ಅವರು ಚಾಕೋಲೇಟ್ ಬಾಯ್ ಆಗಿ ಇಷ್ಟ ಆಗುತ್ತಾರೆ. ಅವರು ಭರವಸೆ ಮೂಡಿಸುತ್ತಾರೆ. ಮೋಕ್ಷಾ ಕುಶಾಲ್ ಹಾಗೂ ಸಾತ್ವಿಕಾ ಅವರು ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದಾರೆ. ರಿಷಿ ಅವರ ಅತಿಥಿ ಪಾತ್ರ ಸಿನಿಮಾಗೆ ದೊಡ್ಡ ತಿರುವು ನೀಡುತ್ತದೆ.

ಇದನ್ನೂ ಓದಿ: ‘ಮೋಡ ಕವಿದ ವಾತಾವರಣ’: ಹೊಸ ಹೀರೋ ಪರಿಚಯಕ್ಕೆ ಟೀಸರ್ ತೋರಿಸಿದ ಸಿಂಪಲ್ ಸುನಿ

ಹಾಗಾದರೆ ಸಿನಿಮಾ ಪರ್ಫೆಕ್ಟಾ?

ಇಲ್ಲ, ‘ಮೋಡ ಕವಿದ ವಾತಾವರಣ’ ಪರ್ಫೆಕ್ಟ್ ಅಲ್ಲ. ಇದರಲ್ಲೂ ಕೆಲವು ನೆಗೆಟಿವ್ ವಿಷಯಗಳು ಇವೆ. ಸಿನಿಮಾದಲ್ಲಿ ಲವ್ ವಿಷಯವನ್ನು ಆಳವಾಗಿ ಹೇಳಲಾಗಿದೆ. ಇದು ಕೆಲವರಿಗೆ ಬೌನ್ಸರ್ ರೀತಿಯಲ್ಲಿ ಫೀಲ್ ಆಗಬಹುದು. ಇನ್ನು ಕ್ಲೈಮ್ಯಾಕ್ಸ್ ವೇಳೆಗೆ ಸಿನಿಮಾ ತುಂಬಾನೇ ವೇಗ ಪಡೆದುಕೊಳ್ಳುವುದರಿಂದ ಸ್ವಲ್ಪ ಗೊಂದಲಗಳು ಸೃಷ್ಟಿ ಆಗಬಹುದು. ಸಣ್ಣ-ಪುಟ್ಟ ತಪ್ಪುಗಳನ್ನು ಮನ್ನಿಸಿ ನೀವು ಸಿನಿಮಾ ವೀಕ್ಷಿಸುತ್ತೀರಿ ಎಂದಾದರೆ, ಮಳೆಗಾಲದಲ್ಲಿ ‘ಮೋಡ ಕವಿದ ವಾತಾವರಣ’ ಉತ್ತಮ ಆಯ್ಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us