ಸಿನಿಮಾ: ಮೂರನೇ ಕೃಷ್ಣಪ್ಪ. ನಿರ್ಮಾಣ: ಮೋಹನ್ ರೆಡ್ಡಿ, ರವಿಶಂಕರ್. ನಿರ್ದೇಶನ: ನವೀನ್ ನಾರಾಯಣಘಟ್ಟ. ಪಾತ್ರವರ್ಗ: ಸಂಪತ್ ಮೈತ್ರೇಯ, ರಂಗಾಯಣ ರಘು, ಉಗ್ರಂ ಮಂಜು, ಸುಪ್ರಿಯಾ, ತುಕಾಲಿ ಸಂತೋಷ್, ಸಿಲ್ಲಿ ಲಲ್ಲಿ ಆನಂದ್ ಮುಂತಾದವರು. ಸ್ಟಾರ್: 3/5
ಗ್ರಾಮೀಣ ಸೊಗಡಿನ ಕಥೆ ಇರುವ ‘ಮೂರನೇ ಕೃಷ್ಣಪ್ಪ’ (Moorane Krishnappa) ಸಿನಿಮಾಗೆ ನವೀನ್ ನಾರಾಯಣಘಟ್ಟ ಅವರು ನಿರ್ದೇಶನ ಮಾಡಿದ್ದಾರೆ. ಒಂದು ಗ್ರಾಮದಲ್ಲಿ ತಾನೇ ಪಂಚಾಯಿತಿ ಅಧ್ಯಕ್ಷ ಆಗಬೇಕು ಎಂಬ ಆಸೆಯಿಂದ ಹತ್ತಾರು ಕುತಂತ್ರಗಳನ್ನು ಮಾಡುವ ರಾಜಕಾರಣಿಗಳ ಕಥೆ ಈ ಸಿನಿಮಾದಲ್ಲಿ ಇದೆ. ಒಂದು ರೀತಿಯಲ್ಲಿ ನೋಡಿದರೆ ‘ಮೂರನೇ ಕೃಷ್ಣಪ್ಪ’ ಸಿನಿಮಾದ ಕಥೆ ಪ್ರತಿ ಗ್ರಾಮಕ್ಕೂ ಅನ್ವಯ ಆಗುತ್ತದೆ ಎನ್ನಬಹುದು.
ನಾರಾಯಣಪುರ ಎಂಬ ಕಾಲ್ಪನಿಕ ಊರಿನಲ್ಲಿ ವೀರಣ್ಣ ಎಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ (ರಂಗಾಯಣ ರಘು) ಇನ್ನೇನು ಚುನಾವಣೆಗೆ ಕೆಲವೇ ದಿನ ಇದೆ ಎನ್ನುವಾಗ ಒಂದು ದೇವಸ್ಥಾನ ಕಟ್ಟಿಸಿ ಜನರ ಮತ ಸೆಳೆಯುವ ಪ್ರಯತ್ನ ಮಾಡುತ್ತಾನೆ. ದೇವಸ್ಥಾನದ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡಿದರೆ ಜನರು ಖಂಡಿತವಾಗಿಯೂ ತನಗೇ ಓಟ್ ಹಾಕುತ್ತಾರೆ ಎಂಬುದು ಆತನ ಪ್ಲ್ಯಾನ್. ಆದರೆ ದೇವಸ್ಥಾನದ ಉದ್ಘಾಟನೆಗೆ ಬರಬೇಕಾಗಿದ್ದ ಅತಿಥಿ ಬರದೇ ಇದ್ದಾಗ ಊರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತದೆ. ಈ ಸಮಸ್ಯೆ ಪರಿಹರಿಸಲು ಬರುವ ಆ ಊರಿನ ಶಾಲೆಯ ಶಿಕ್ಷಕನೇ ಕೃಷ್ಣಪ್ಪ (ಸಂಪತ್ ಮೈತ್ರೇಯ). ಆತನಿಗೆ ಮೂರನೇ ಕೃಷ್ಣಪ್ಪ ಅಂತ ಯಾಕೆ ಕರೆಯುತ್ತಾರೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಉದ್ಘಾಟನೆಗೆ ಮುಖ್ಯಮಂತ್ರಿಯನ್ನು ಕರೆಸುವ ಜವಾಬ್ದಾರಿ ಹೊತ್ತುಕೊಂಡ ಆತನಿಗೆ ಹಲವು ಕಷ್ಟಗಳು ಎದುರಾಗುತ್ತವೆ.
ವೀರಣ್ಣನ ಎದುರು ಎಲೆಕ್ಷನ್ಗೆ ನಿಂತ ಲೋಕಿ (ಉಗ್ರಂ ಮಂಜು) ತಂತ್ರಗಳು ಇನ್ನೂ ವಿಚಿತ್ರ. ಸದಾಕಾಲ ಪರಸ್ತ್ರೀಯರ ಜೊತೆ ಹಾಸಿಗೆಯಲ್ಲೇ ಕಾಲ ಕಳೆಯುವ ಆತನ ದೃಶ್ಯಗಳನ್ನು ನೋಡಿದರೆ ಸದ್ಯದ ರಾಜಕೀಯ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಕಾಣುತ್ತದೆ. ದೇವಸ್ಥಾನ ಕಟ್ಟಿಸಿ ಜನರನ್ನು ಸೆಳೆಯಬೇಕು ಎಂದುಕೊಂಡಿದ್ದ ವೀರಣ್ಣನ ಪ್ಲ್ಯಾನ್ ಯಶಸ್ವಿ ಆಗುತ್ತಾ? ಸಿಎಂ ಕರೆಸಲು ಮೂರನೇ ಕೃಷ್ಣಪ್ಪನಿಗೆ ಸಾಧ್ಯವಾಗುತ್ತಾ? ಕುತಂತ್ರಿ ರಾಜಕಾರಣಿಗಳಿಗೆ ಆತ ಹೇಗೆ ಬುದ್ದಿ ಕಲಿಸುತ್ತೇನೆ ಎಂಬುದನ್ನು ಹಾಸ್ಯದ ಶೈಲಿಯಲ್ಲಿ ‘ಮೂರನೇ ಕೃಷ್ಣಪ್ಪ’ ಸಿನಿಮಾ ವಿವರಿಸುತ್ತದೆ.
ಪ್ರತಿ ಹಳ್ಳಿಯಲ್ಲಿಯೂ ನಡೆಯಬಹುದಾದ ಗ್ರಾಮ ಪಂಚಾಯಿತಿ ರಾಜಕೀಯವನ್ನು ‘ಮೂರನೇ ಕೃಷ್ಣಪ್ಪ’ ಸಿನಿಮಾದಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ. ರಂಗಾಯಣ ರಘು ಇರುವುದರಿಂದ ನಗುವಿಗೆ ಕೊರತೆ ಇಲ್ಲ. ಸಂಪತ್ ಮೈತ್ರೇಯ ಅವರು ಕೃಷ್ಣಪ್ಪನ ಪಾತ್ರದಲ್ಲಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಪ್ರಧಾನವಾಗಿದೆ. ಸಂಪತ್ ಮತ್ತು ರಂಗಾಯಣ ರಘು ಜುಗಲ್ಬಂದಿಯಿಂದ ಸಿನಿಮಾದ ಮೆರುಗು ಹೆಚ್ಚಿದೆ. ತುಕಾಲಿ ಸಂತೋಷ್, ಉಗ್ರಂ ಮಂಜು, ಸಿಲ್ಲಿ ಲಲ್ಲಿ ಆನಂದ್ ಮುಂತಾದವರು ಆಗಾಗ ಕಾಣಿಸಿಕೊಂಡರೂ ನೆನಪಿನಲ್ಲಿ ಉಳಿಯುತ್ತಾರೆ. ಸಿಎಂ ಪಾತ್ರದಲ್ಲಿ ಅನಂತ ವೇಲು, ಅತಿಥಿ ಪಾತ್ರದಲ್ಲಿ ಆರೋಹಿ ನಾರಾಯಣ್ ಅವರು ನಟಿಸಿದ್ದಾರೆ.
ಇದನ್ನೂ ಓದಿ: Scam 1770 Review: ಮೆಡಿಕಲ್ ಸೀಟ್ ಹಗರಣ ತೆರೆದಿಡುವ ‘ಸ್ಕ್ಯಾಮ್ 1770’ ಸಿನಿಮಾ
ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತಲೂ ಡಿಫರೆಂಟ್ ಆಗಿ ‘ಮೂರನೇ ಕೃಷ್ಣಪ್ಪ’ ಚಿತ್ರ ಮೂಡಿಬಂದಿದೆ. ಗ್ರಾಮೀಣ ಭಾಗದ ಭಾಷೆಯನ್ನು ಬಳಸಿಕೊಳ್ಳಲಾಗಿದೆ. ಪ್ರತಿ ದೃಶ್ಯದಲ್ಲೂ ಹಳ್ಳಿ ಸೊಗಡು ಕಾಣಿಸುತ್ತದೆ. ರಾಜಕಾರಣಿಗಳ ಕುತಂತ್ರ ಬುದ್ಧಿಯನ್ನು ಟೀಕಿಸುತ್ತಲೇ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವ ಮೂಲಕ ಈ ಸಿನಿಮಾ ಇಷ್ಟ ಆಗುತ್ತದೆ. ಕೆಲವು ದೃಶ್ಯಗಳಲ್ಲಿ ಲಾಜಿಕ್ ಹುಡುಕುವುದು ಕಷ್ಟ. ಒಟ್ಟಾರೆ ಸಿನಿಮಾದ ನಿರೂಪಣೆ ಕೊಂಚ ನಿಧಾನಗತಿಯಲ್ಲಿದೆ. ಆ ರೀತಿಯ ಸಣ್ಣ ಪುಟ್ಟ ಕೊರತೆಗಳನ್ನು ಬಿದಿಗಿಟ್ಟರೆ ‘ಮೂರನೇ ಕೃಷ್ಣಪ್ಪ’ ಸಿನಿಮಾ ಖುಷಿ ನೀಡುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.