
ಜಾಗತಿಕ ಮಟ್ಟದಲ್ಲಿ ಯಶಸ್ವಿಯಾದ ಸಿನಿಮಾ ಸರಣಿಗಳಲ್ಲಿ ಬಾಂಡ್ ಚಿತ್ರಗಳ ಸಾಧನೆ ಗಮನಾರ್ಹ. ಜೇಮ್ಸ್ ಬಾಂಡ್ ಪಾತ್ರವನ್ನೇ ಇಟ್ಟುಕೊಂಡು ಈವರೆಗೂ 25 ಸಿನಿಮಾಗಳು ಮೂಡಿಬಂದಿವೆ. 25ನೇ ಚಿತ್ರವಾದ ‘ನೋ ಟೈಮ್ ಟು ಡೈ’ ಸೆ.30ರಂದು ಬಿಡುಗಡೆಯಾಗಿ ಎಲ್ಲೆಡೆ ಪ್ರದರ್ಶನ ಕಾಣುತ್ತಿದೆ. ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ಸೆ.28ರಂದು ಪ್ರೀಮಿಯರ್ ಪ್ರದರ್ಶನವಾಯಿತು. ಯುನೈಡೆಟ್ ಕಿಂಗ್ಡಮ್, ಭಾರತ ಸೇರಿ ಜಗತ್ತಿನ ಹಲವೆಡೆ ಈ ಚಿತ್ರ ಸೆ.30ರಂದು ರಿಲೀಸ್ ಆಗಿದೆ. ಅಮೆರಿಕದಲ್ಲಿ ಅ.8ರಂದು ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಜೇಮ್ಸ್ ಬಾಂಡ್ ಸಿನಿಮಾ ಎಂದರೆ ನಿರೀಕ್ಷೆ ಜೋರಾಗಿಯೇ ಇರುತ್ತದೆ. ಐದು ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಪಾತ್ರವನ್ನು ಡೇನಿಯಲ್ ಕ್ರೇಗ್ ಮಾಡಿದ್ದಾರೆ. ಈ ಪಾತ್ರದಲ್ಲಿ ಅವರ ಕೊನೇ ಸಿನಿಮಾ ‘ನೋ ಟೈಮ್ ಟು ಡೈ’. ಆ ಕಾರಣದಿಂದಲೂ ಕೂಡ ನಿರೀಕ್ಷೆ ಜೋರಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಅವಧಿ 2 ಗಂಟೆ 43 ನಿಮಿಷ ಇದೆ. ಇದು ಕೊಂಚ ದೀರ್ಘವಾಯಿತು ಎಂಬುದು ಬಹುತೇಕರ ದೂರು. ಕಳೆದ 15 ವರ್ಷದಿಂದ ಬಾಂಡ್ ಪಾತ್ರವನ್ನು ಮಾಡುತ್ತ ಬಂದಿರುವ ಡೇನಿಯಲ್ ಕ್ರೇಗ್ ಅವರು ಆ ಪಾತ್ರಕ್ಕೆ ವಿದಾಯ ಹೇಳಲು ಇದು ಸೂಕ್ತ ಸಿನಿಮಾ ಎಂಬುದನ್ನು ಹಲವರು ಒಪ್ಪಿಕೊಂಡಿದ್ದಾರೆ.
‘ಡೇನಿಯಲ್ ಕ್ರೇಗ್ ಅವರ ಆ್ಯಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅತ್ಯುತ್ತಮವಾಗಿದೆ. ಚಿತ್ರದಲ್ಲಿನ ಟ್ವಿಸ್ಟ್ಗಳು ಮತ್ತು ಎಮೋಷನ್ಗಳು ಚೆನ್ನಾಗಿವೆ. ಬೇಗ ಹೋಗಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಬರುವ ಆ್ಯಕ್ಷನ್ ದೃಶ್ಯಕ್ಕಿಂತಲೂ ಚಿತ್ರದ ಪ್ರಾರಂಭದಲ್ಲಿ ಬರುವ ಸಾಹಸ ಸನ್ನಿವೇಶಗಳೇ ಹೆಚ್ಚು ಚೆನ್ನಾಗಿವೆ ಎಂದು ಕೆಲವರು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.
ಭಾರತದಲ್ಲಿರುವ ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 5ಕ್ಕೆ 5 ಅಂಕ ಕೊಟ್ಟು ಹೊಗಳುತ್ತಿದ್ದಾರೆ. ಬಾಂಡ್ ಸಿನಿಮಾ ಎಂಬುದನ್ನು ಬದಿಗಿಟ್ಟು, ಬರೀ ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಎಂದು ನೋಡಿದರೂ ಕೂಡ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
ಮತ್ತೆ ಕೆಲವರಿಗೆ ಈ ಸಿನಿಮಾ ಹೆಚ್ಚೇನೂ ಇಷ್ಟ ಆಗಿಲ್ಲ. ಭಾರಿ ನಿರೀಕ್ಷೆ ಇಟ್ಟುಕೊಂಡು ‘ನೋ ಟೈಮ್ ಟು ಡೈ’ ನೋಡಬೇಡಿ ಎಂಬ ಸೂಚನೆಯೂ ಕೆಲ ಪ್ರೇಕ್ಷಕರಿಂದ ಬಂದಿದೆ. ಕನ್ನಡಕ್ಕೂ ಈ ಚಿತ್ರ ಡಬ್ ಆಗಿ ಬಿಡುಗಡೆ ಆಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮುಂಬರುವ ಜೇಮ್ಸ್ ಬಾಂಡ್ ಸರಣಿಯಲ್ಲಿ ಯಾರು ಹೀರೋ ಆಗುತ್ತಾರೆ ಎಂಬುದರ ಬಗ್ಗೆ ಸಿನಿಪ್ರಿಯರು ಈಗಲೇ ಚರ್ಚೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ಟೈಗರ್ ಶ್ರಾಫ್ ಸಿನಿಮಾಗೆ ಜೇಮ್ಸ್ ಬಾಂಡ್ ಸ್ಟಂಟ್ ಡೈರೆಕ್ಟರ್; ರಷ್ಯಾದಲ್ಲಿ ನಡೆಯಲಿದೆ ಶೂಟ್
‘ನೆನಪಿರಲಿ’ ಪ್ರೇಮ್ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್; ಹಾಲಿವುಡ್ ಹಾದಿಯತ್ತ ‘ಲವ್ಲಿ ಸ್ಟಾರ್’