Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್​ ನೀಡುವ ‘ಓಲ್ಡ್​ ಮಾಂಕ್​’

|

Updated on: Feb 25, 2022 | 3:06 PM

Old Monk Kannada Movie Review: ‘ಓಲ್ಡ್​ ಮಾಂಕ್​’ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಈ ವಿಚಾರದಲ್ಲಿ ಹೀರೋ/ನಿರ್ದೇಶಕ ಶ್ರೀನಿಗೆ ನಟ ಸುಜಯ್​ ಶಾಸ್ತ್ರಿ ಹಾಗೂ ಸಂಭಾಷಣಕಾರ ವಿ.ಎಂ. ಪ್ರಸನ್ನ ಅತ್ಯುತ್ತಮವಾಗಿ ಸಾಥ್​ ನೀಡಿದ್ದಾರೆ.

Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್​ ನೀಡುವ ‘ಓಲ್ಡ್​ ಮಾಂಕ್​’
ಓಲ್ಡ್ ಮಾಂಕ್ ಸಿನಿಮಾ
Follow us on

ಚಿತ್ರ: ಓಲ್ಡ್​ ಮಾಂಕ್​
ನಿರ್ದೇಶನ: ಶ್ರೀನಿ
ನಿರ್ಮಾಣ: ಸಿದ್ಧಿ ಎಂಟರ್​ಟೇನ್ಮೆಂಟ್ಸ್​, ಎಸ್​ ಒರಿಜಿನಲ್ಸ್​
ಪಾತ್ರವರ್ಗ: ಶ್ರೀನಿ, ಅದಿತಿ ಪ್ರಭುದೇವ, ಸುಜಯ್​ ಶಾಸ್ತ್ರಿ, ಎಸ್​. ನಾರಾಯಣ್​, ಸುದೇವ್​ ನಾಯರ್​, ಸಿಹಿ-ಕಹಿ ಚಂದ್ರು ಮುಂತಾದವರು.
ಸ್ಟಾರ್​: 3.5 / 5

ನಟನೆ ಮತ್ತು ನಿರ್ದೇಶನ ಎರಡಲ್ಲೂ ಪಳಗಿರುವವರು ಶ್ರೀನಿ (Srini) ಅವರು ‘ಓಲ್ಡ್​ ಮಾಂಕ್​’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ಜೊತೆಗೆ ಅನೇಕ ಹಿರಿ-ಕಿರಿಯ ಕಲಾವಿದರನ್ನು ಸೇರಿಸಿಕೊಂಡು ಅವರು ಈ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ (Aditi Prabhudeva) ಸಾಥ್​ ನೀಡಿದ್ದಾರೆ. ಹಲವು ತಿಂಗಳ ಹಿಂದೆ ‘ಓಲ್ಡ್​ ಮಾಂಕ್​’ ಟ್ರೇಲರ್​ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಭರಪೂರ ಮನರಂಜನೆ ಇರಲಿದೆ ಎಂಬುದಕ್ಕೆ ಆ ಟ್ರೇಲರ್​ ಸುಳಿವು ನೀಡಿತ್ತು. ಆ ಭರವಸೆ ಸುಳ್ಳಾಗಿಲ್ಲ. ಫೆ.25ರಂದು ಬಿಡುಗಡೆ ಆಗಿರುವ ‘ಓಲ್ಡ್​ ಮಾಂಕ್​’ (Old Monk Movie) ಸಿನಿಮಾದಲ್ಲಿ ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಅನೇಕ ಅಂಶಗಳಿವೆ. ನಕ್ಕು ಹಗುರಾಗಲು ಹಲವು ಹಾಸ್ಯದ ಸನ್ನಿವೇಶಗಳಿವೆ. ತಂದೆ-ತಾಯಿ ಬಗ್ಗೆ ಇನ್ನಷ್ಟು ಗೌರವ ಮೂಡಿಸುವಂತಹ ಸೆಂಟಿಮೆಂಟಲ್​ ದೃಶ್ಯಗಳಿವೆ. ಒಟ್ಟಾರೆಯಾಗಿ ‘ಓಲ್ಡ್​ ಮಾಂಕ್​’ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..

ಲವ್​ ಮಾಡಿ ಮದುವೆ ಆಗಬೇಕು ಎಂಬುದು ಅಪ್ಪಣ್ಣನ ಅಲಿಯಾಸ್​ ಅಪ್ಪು (ಶ್ರೀನಿ) ಆಸೆ. ಆದರೆ ಅವನ ಆಸೆಗೆ ಅಪ್ಪನೇ (ಎಸ್​. ನಾರಾಯಣ್​) ಅಡ್ಡಗಾಲು ಹಾಕ್ತಾರೆ. ಎಷ್ಟೇ ಕಷ್ಟಪಟ್ಟರೂ ಅಪ್ಪಣ್ಣನಿಗೆ ಹುಡುಗಿ ಸಿಗದೇ ಇರಲಿ ಎಂಬ ದೇವರ ಶಾಪ ಕೂಡ ಕಾರಣ ಆಗಿದೆ. ಇಂಥ ಹುಡುಗನ ಬಾಳಿನಲ್ಲಿ ಸುಂದರಿ ಅಭಿಜ್ಞಾ (ಅದಿತಿ ಪ್ರಭುದೇವ) ಎಂಟ್ರಿ ನೀಡುತ್ತಾಳೆ. ಅವಳನ್ನು ಪಡೆಯಬೇಕು ಎಂದರೆ ಅಪ್ಪಣ್ಣ ಎಲೆಕ್ಷನ್​ ಗೆದ್ದು ಎಂಎಲ್​ಎ ಆಗಬೇಕು ಎಂಬುದು ಹುಡುಗಿ ಅಪ್ಪನ ಕಂಡೀಷನ್. ದೇವರ ಶಾಪ, ಅಪ್ಪನ ಶಪಥ ಮತ್ತು ಭಾವಿ ಮಾವನ ಕಂಡೀಷನ್​ ಮೀರಿ ಅಪ್ಪಣ್ಣ ತನ್ನ ಪ್ರೀತಿ ಪಡೆಯುತ್ತಾನೋ ಇಲ್ಲವೋ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಓಲ್ಡ್​ ಮಾಂಕ್​’ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಪ್ರಸನ್ನ ವಿ.ಎಂ. ಬರೆದಿರುವ ಕಚಗುಳಿ ಇಡುವಂತಹ ಸಂಭಾಷಣೆಗಳು ಈ ಸಿನಿಮಾಗೆ ಪ್ಲಸ್​ ಪಾಯಿಂಟ್​. ನಟನೆ ಮತ್ತು ಡೈಲಾಗ್​ ಡೆಲಿವರಿ ಎರಡೂ ವಿಚಾರದಲ್ಲಿ ಹೀರೋ ಶ್ರೀನಿಗೆ ಅತ್ಯುತ್ತಮವಾಗಿ ಸಾಥ್​ ನೀಡಿರುವುದು ನಟ ಸುಜಯ್​ ಶಾಸ್ತ್ರಿ. ಇಡೀ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್​ ರಾರಾಜಿಸಿದೆ. ಹೀರೋ ಮತ್ತು ಹೀರೋಯಿನ್​ ಜೋಡಿಗಿಂತಲೂ ಸುಜಯ್​ ಶಾಸ್ತ್ರಿ ಮತ್ತು ಶ್ರೀನಿ ನಡುವಿನ ದೃಶ್ಯಗಳು ಹೆಚ್ಚು ಹೈಲೈಟ್​ ಆಗಿವೆ ಎಂದರೆ ತಪ್ಪಿಲ್ಲ.

ಓಲ್ಡ್​ ಈಸ್​ ಗೋಲ್ಡ್​ ಎಂಬ ಸೂತ್ರವನ್ನು ಶ್ರೀನಿ ಅವರು ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ. ಟೈಟಲ್​ ಕಾರ್ಡ್​ನಿಂದ ‘ಶುಭಂ’ವರೆಗೆ ಅದನ್ನು ಅವರು ಪಾಲಿಸಿದ್ದಾರೆ. ಈ ಸಿನಿಮಾದ ಕಥೆ ಸಿಂಪಲ್​ ಆಗಿದೆ. ಅದನ್ನು ನಿರೂಪಿಸಿರುವ ಶೈಲಿ ಕೂಡ ಸಾಂಪ್ರದಾಯಿಕವಾಗಿಯೇ ಇದೆ. ಟಿಪಿಕಲ್​ ಇಂಡಿಯನ್​ ಸಿನಿಮಾಗಳಲ್ಲಿ ಪ್ರೇಕ್ಷಕರು ಬಯಸುವ ಮನರಂಜನೆಯನ್ನು ನೀಡಲು ಶ್ರೀನಿ ಪ್ರಯತ್ನಿಸಿದ್ದಾರೆ. ಹೀರೋ ಮತ್ತು ವಿಲನ್​ ನಡುವಿನ ಜಿದ್ದಾಜಿದ್ದಿ ಒಂದು ರೀತಿಯ ಹಾವು-ಏಣಿ ಆಟದಂತಿದೆ. ಟಾಮ್​ ಆ್ಯಂಡ್​ ಜೆರ್ರಿ ಫೈಟ್​ ರೀತಿಯೇ ಹಲವು ದೃಶ್ಯಗಳು ಪ್ರೇಕ್ಷಕರನ್ನು ನಗಿಸುತ್ತವೆ.

ಪ್ರೇಕ್ಷಕರನ್ನು ಭರ್ಜರಿಯಾಗಿ ನಗಿಸಬೇಕು ಎಂಬುದೇ ‘ಓಲ್ಡ್​ ಮಾಂಕ್​’ ಚಿತ್ರದ ಪ್ರಮುಖ ಉದ್ದೇಶ. ಈ ಉದ್ದೇಶ ಈಡೇರಿಸಲು ಶ್ರೀನಿ ಅವರು ಹಲವು ಕಾಮಿಡಿ ದೃಶ್ಯಗಳನ್ನು ಹೆಣೆದಿದ್ದಾರೆ. ಅವುಗಳಲ್ಲಿ ಲಾಜಿಕ್​ ಹುಡುಕಿದರೆ ಮ್ಯಾಜಿಕ್​ ಮಾಯವಾಗಬಹುದು. ಆ ಕ್ಷಣಕ್ಕೆ ಪ್ರೇಕ್ಷಕರನ್ನು ನಕ್ಕು ನಲಿಯುವಂತಹ ಹಲವು ಸನ್ನಿವೇಶಗಳಿಂದ ‘ಓಲ್ಡ್​ ಮಾಂಕ್​’ ಚಿತ್ರದ ಮೈಲೇಜ್​ ಹೆಚ್ಚಿದೆ.

ಈ ಸಿನಿಮಾದಲ್ಲಿ ಅನುಭವಿ ಕಲಾವಿದರ ಕೊಡುಗೆ ದೊಡ್ಡದಿದೆ. ಲವ್​ ಮ್ಯಾರೇಜ್​ ವಿರೋಧಿಸುವ ಅಪ್ಪನಾಗಿ ಎಸ್​. ನಾರಾಯಣ್​ ಅವರು ಉತ್ತಮ ಅಭಿನಯ ನೀಡಿದ್ದಾರೆ. ಕಾಮಿಡಿ ದೃಶ್ಯಗಳಲ್ಲಿ ಅವರು ಹೆಚ್ಚು ಅಂಕ ಗಿಟ್ಟಿಸುತ್ತಾರೆ. ವಿಲನ್​ ಪಾತ್ರ ಮಾಡಿರುವ ಸುದೇವ್​ ನಾಯರ್​ ನಟನೆ ಕೂಡ ಗಮನ ಸೆಳೆಯುತ್ತದೆ. ಸಿಹಿ-ಕಹಿ ಚಂದ್ರು ಅವರು ಎಂದಿನಂತೆ ಕಾಮಿಡಿ ಕಚಗುಳಿ ಇಡುತ್ತಾರೆ. ನಾಯಕಿ ಅದಿತಿ ಪ್ರಭುದೇವ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಇಲ್ಲದಿದ್ದರೂ ಕೂಡ ಸಿಕ್ಕ ಅವಕಾಶದಲ್ಲಿ ಅವರು ಮಿಂಚಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್​ ಇಷ್ಟವಾಗುತ್ತಾರೆ. ಕೃಷ್ಣನಾಗಿ ಸುನೀಲ್​ ರಾವ್​ ಹಾಗೂ ಕಾಲನಾಗಿ ಪಿ.ಡಿ. ಸತೀಶ್​ಚಂದ್ರ ನಟಿಸಿದ್ದಾರೆ.

ಕಥೆಯಲ್ಲಿನ ಲಾಜಿಕಲ್ ಅಂಶಗಳ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ವಹಿಸಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ನಿರೂಪಣೆಯ ವೇಗ ಕೊಂಚ ತಗ್ಗಿದೆ. ಉಳಿದಂತೆ ಒಂದು ಉತ್ತಮ ಸಿನಿಮಾವಾಗಿ ‘ಓಲ್ಡ್​ ಮಾಂಕ್​’ ಮೂಡಿಬಂದಿದೆ. ತಾಂತ್ರಿಕವಾಗಿಯೂ ಈ ಚಿತ್ರ ಗುಣಮಟ್ಟ ಕಾಯ್ದುಕೊಂಡಿದೆ. ಭರತ್​ ಪರಶುರಾಮ್​ ಛಾಯಾಗ್ರಹಣ, ಸೌರಭ್​-ವೈಭವ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಅವರ ಸಂಕಲನದಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಫ್ಯಾಮಿಲಿ ಪ್ರೇಕ್ಷಕರನ್ನು ಮಾತ್ರವಲ್ಲದೇ ಕ್ಲಾಸ್​ ಸಿನಿಮಾವನ್ನು ಬಯಸುವ ಎಲ್ಲರಿಗೂ ‘ಓಲ್ಡ್​ ಮಾಂಕ್​’ ಇಷ್ಟ ಆಗಲಿದೆ.

ಇದನ್ನೂ ಓದಿ:

Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?

‘ಇದು ಬರೀ ಸಿನಿಮಾ ಅಲ್ಲ, ಮ್ಯಾಜಿಕ್​’: ‘ಗಂಗೂಬಾಯಿ ಕಾಠಿಯಾವಾಡಿ’ ನೋಡಿದ ಸೆಲೆಬ್ರಿಟಿಗಳ ವಿಮರ್ಶೆ

Published On - 1:36 pm, Fri, 25 February 22