Rathnan Prapancha Movie Review: ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ

|

Updated on: Oct 22, 2021 | 1:09 PM

Dhananjaya | Rathnan Prapancha: ‘ರತ್ನನ್​ ಪ್ರಪಂಚ’ ಚಿತ್ರದಲ್ಲಿ ಉಮಾಶ್ರೀ ಮತ್ತು ಧನಂಜಯ ಕಾಂಬಿನೇಷನ್​ ಉತ್ತಮವಾಗಿ ಮೂಡಿಬಂದಿದೆ. ಏನೇನೋ ಕಾರಣಗಳಿಗಾಗಿ ತಾಯಿಯನ್ನು ದೂಷಿಸುವ ಮಕ್ಕಳಿಗೆಲ್ಲ ಈ ಸಿನಿಮಾದಲ್ಲಿ ಮನಕಲಕುವ ಮೆಸೇಜ್​ ಇದೆ.

Rathnan Prapancha Movie Review: ಸಂಬಂಧಗಳ ಅರ್ಥ ತಿಳಿಯಲು ಪ್ರಪಂಚ ಸುತ್ತಿದ ರತ್ನ; ಧನಂಜಯ ಖಾತೆಗೆ ಇನ್ನೊಂದು ಭಿನ್ನ ಸಿನಿಮಾ
‘ರತ್ನನ್​ ಪ್ರಪಂಚ’ ಚಿತ್ರದಲ್ಲಿ ಡಾಲಿ ಧನಂಜಯ, ಉಮಾಶ್ರೀ
Follow us on

ಚಿತ್ರ: ರತ್ನನ್​ ಪ್ರಪಂಚ
ನಿರ್ಮಾಣ: ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​
ನಿರ್ದೇಶನ: ರೋಹಿತ್​ ಪದಕಿ
ಪಾತ್ರವರ್ಗ: ಧನಂಜಯ, ಉಮಾಶ್ರೀ, ಶ್ರುತಿ, ಪ್ರಮೋದ್​, ಅನು ಪ್ರಭಾಕರ್​, ರೆಬಾ ಮೋನಿಕಾ ಮುಂತಾದವರು.
ಸ್ಟಾರ್​: 3 / 5

ಪಾತ್ರಗಳ ಆಯ್ಕೆ ವಿಚಾರದಲ್ಲಿ ನಟ ಧನಂಜಯ ಅವರಿಗೆ ಯಾವುದೇ ಬೌಂಡರಿ ಇಲ್ಲ. ಎಲ್ಲ ಬಗೆಯ ಪಾತ್ರಕ್ಕೂ ಜೀವ ತುಂಬಬಲ್ಲ ಅಪ್ರತಿಮ ಕಲಾವಿದ ಅವರು. ‘ಟಗರು’ ಚಿತ್ರದ ಡಾಲಿಯಾಗಿ, ‘ಸಲಗ’ ಸಿನಿಮಾದ ಸಾಮ್ರಾಟ್​ ಆಗಿ ಅಬ್ಬರಿಸಿದ್ದ ಅವರು ‘ರತ್ನನ್​ ಪ್ರಪಂಚ’ ಚಿತ್ರದಲ್ಲಿ ಸಿಂಪಲ್​ ರತ್ನಾಕರನಾಗಿ ರಂಜಿಸುತ್ತಾರೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಈ ಸಿನಿಮಾ ಬಿಡುಗಡೆ ಆಗಿದೆ. ತಾಯಿ ಸೆಂಟಿಮೆಂಟ್​ ಕಥೆಯೊಂದನ್ನು ಬೇರೆಯದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರೋಹಿತ್​ ಪದಕಿ.

ಭಾವುಕವಾದ ಕಥೆಯ ಎಳೆ​​:

ರತ್ನಾಕರ (ಧನಂಜಯ) ಒಬ್ಬ ಮಧ್ಯಮವರ್ಗದ ಹುಡುಗ. ಅವನ ತಾಯಿ ಸರೋಜಾ (ಉಮಾಶ್ರೀ) ವಿಚಿತ್ರ ಸ್ವಭಾವದ ಮಹಿಳೆ. ಆ ಸ್ವಭಾವದ ಕಾರಣದಿಂದಲೇ ತಾಯಿ ಕಂಡರೆ ರತ್ನಾಕರನಿಗೆ ಸದಾ ಕಿರಿಕಿರಿ. ಆದರೆ ಆಕೆ ತನ್ನ ನಿಜವಾದ ತಾಯಿ ಅಲ್ಲ ಎಂಬುದು ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ರತ್ನಾಕರನಿಗೆ ಗೊತ್ತಾಗುತ್ತದೆ. ಹಾಗಾದರೆ ತನ್ನ ನಿಜವಾದ ತಾಯಿ ಯಾರು ಎಂಬುದನ್ನು ಕಂಡು ಹಿಡಿಯಲು ರತ್ನಾಕರ ಮಾಡುವ ಪ್ರಯತ್ನ ಕಥೆ ‘ರತ್ನನ್​ ಪ್ರಪಂಚ’ದಲ್ಲಿದೆ.

ಪ್ರೇಕ್ಷಕನಿಗೊಂದು ಉತ್ತಮವಾದ ಸಂದೇಶ:

ತಾಯಿಯ ಮಹತ್ವವನ್ನು ಸಾರುವ ಈ ಚಿತ್ರದಲ್ಲಿ ಪ್ರೇಕ್ಷಕನಿಗೊಂದು ಮೆಸೇಜ್​ ಇದೆ. ತಾಯಿ-ಮಗನ ಸಂಬಂಧವನ್ನು ಹಲವು ಆಯಾಮಗಳಲ್ಲಿ ಕಟ್ಟಿಕೊಡಲಾಗಿದೆ. ಸದಾ ವಟಗುಟ್ಟುತ್ತಿದ್ದರೂ ಕೂಡ ಹೃದಯದಲ್ಲಿ ಮಗನ ಬಗ್ಗೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಎಲ್ಲ ತಾಯಂದಿರ ಪ್ರತಿರೂಪವಾಗಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ಅಮ್ಮನ ಪ್ರೀತಿ-ತ್ಯಾಗವನ್ನು ಅರ್ಥಮಾಡಿಕೊಳ್ಳದೇ ಗೊಣಗುವ ಮಕ್ಕಳ ಪ್ರತಿನಿಧಿಯಂತೆ ಧನಂಜಯ ಅವರ ಪಾತ್ರ ಮೂಡಿಬಂದಿದೆ. ಏನೇನೋ ಕಾರಣಗಳಿಗಾಗಿ ತಾಯಿಯನ್ನು ದೂಷಿಸುವ ಮಕ್ಕಳಿಗೆಲ್ಲ ಈ ಸಿನಿಮಾದಲ್ಲಿ ಮನಕಲಕುವ ಮೆಸೇಜ್​ ಇದೆ. ಅದೇನೆಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ಕಲಾವಿದರಿಗೆ ದೊಡ್ಡ ಸಲಾಮ್​:

‘ರತ್ನನ್​ ಪ್ರಪಂಚ’ದಲ್ಲಿ ಮೊದಲ ಕ್ರೆಡಿಟ್​ ಸಲ್ಲಬೇಕಾಗಿರುವುದು ಕಲಾವಿದರಿಗೆ. ಉಮಾಶ್ರೀ ನಟನೆಗೆ ಮನಸೋಲಲೇಬೇಕು. ಅವರ ಜೊತೆಗೆ ಧನಂಜಯ ಅಭಿನಯ ಕೂಡ ಸೂಪರ್​. ನಟ ಪ್ರಮೋದ್​ ಅವರು ಈ ಚಿತ್ರದಲ್ಲಿ ಸಖತ್​ ಆಗಿ ಮಿಂಚಿದ್ದಾರೆ. ಹಲವು ದೃಶ್ಯಗಳಲ್ಲಿ ಅವರ ನಟನೆಗೆ ಒಳ್ಳೆಯ ಸ್ಕೋಪ್​ ಸಿಕ್ಕಿದೆ. ನಟಿ ಶ್ರುತಿ ಕೂಡ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾರೆ. ಅನು ಪ್ರಭಾಕರ್ ಕೆಲವೇ ಹೊತ್ತು ಕಾಣಿಸಿಕೊಂಡರೂ ಮುದ ನೀಡುತ್ತಾರೆ. ಧನಂಜಯ ಮತ್ತು ರೆಬಾ ಮೋನಿಕಾ ಕಾಂಬಿನೇಷನ್​ ಚೆನ್ನಾಗಿದೆ.

ನಿಜವಾದ ಸಂಬಂಧ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಹಲವು ಪಾತ್ರಗಳ ಮೂಲಕ ಅದಕ್ಕೆ ಉತ್ತರ ದೊರಕಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಆದರೆ ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ಚಿತ್ರಕಥೆ ಕೊಂಚ ಅತ್ತಿತ್ತ ಸಾಗಿದೆ. ಹೇಳಬೇಕಾದ ವಿಚಾರವನ್ನು ಅವರು ಸುತ್ತಿಬಳಸಿ ಹೇಳಿದ್ದಾರೆ. ಸಂಬಂಧವನ್ನು ಹುಡುಕಿಕೊಂಡು ರತ್ನಾಕರ ಊರೂರು ಸುತ್ತುವ ರೀತಿಯಲ್ಲಿಯೇ ನಿರೂಪಣೆ ಕೂಡ ಗಿರಕಿ ಹೊಡೆದಿದೆ. ಕೆಲವು ದೃಶ್ಯಗಳನ್ನು ತುಂಬ ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿರುವ ನಿರ್ದೇಶಕರು ಕೆಲವು ಕಡೆಗಳಲ್ಲಿ ಮೆಲೋಡ್ರಾಮಾಕ್ಕೆ ಗಂಟು ಬಿದ್ದಿದ್ದಾರೆ.

ಕಥೆಯೊಳಗಿನ ಕೆಲವು ಪ್ರಶ್ನೆಗಳಿಗೆ ಸಿನಿಮಾ ಮುಗಿದರೂ ಉತ್ತರ ಸಿಗುವುದಿಲ್ಲ. ಕಥೆಯ ಮಧ್ಯೆ ತುರುಕಿದಂತೆ ಭಾಸವಾಗುವ ‘ಗಿಚ್ಚಿ ಗಿಲಿಗಿಲಿ..’ ಹಾಡಿನಿಂದ ಚಿತ್ರಕ್ಕೇನೂ ಪ್ರಯೋಜನ ಆದಂತಿಲ್ಲ. ಅನವಶ್ಯಕ ಎಳೆದಾಟಕ್ಕೆ ಕತ್ತರಿ ಹಾಕಿದ್ದರೆ ಸಿನಿಮಾದ ಅವಧಿಯನ್ನು ಕೊಂಚ ತಗ್ಗಿಸಬಹುದಿತ್ತು. ಇಂಥ ಕೆಲವು ಮೈನಸ್​ ಪಾಯಿಂಟ್​ಗಳ ನಡುವೆಯೂ ಡಾಲಿ ಧನಂಜಯ ಅವರ ಖಾತೆಯಲ್ಲಿ ಒಂದು ಭಿನ್ನ ಚಿತ್ರವಾಗಿ ‘ರತ್ನನ್ ಪ್ರಪಂಚ’ ಗುರುತಿಸಿಕೊಳ್ಳುತ್ತದೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​