ಸಿನಿಮಾ: ರೇಮೊ
ನಿರ್ಮಾಣ: ಸಿ.ಆರ್. ಮನೋಹರ್
ನಿರ್ದೇಶನ: ಪವನ್ ಒಡೆಯರ್
ಪಾತ್ರವರ್ಗ: ಇಶಾನ್, ಆಶಿಕಾ ರಂಗನಾಥ್, ಶರತ್ ಕುಮಾರ್, ರಾಜೇಶ್ ನಟರಂಗ, ಮಧುಬಾಲಾ, ಅಚ್ಯುತ್ ಕುಮಾರ್ ಮುಂತಾದವರು.
ಸ್ಟಾರ್: 3.5/5
ನಿರ್ದೇಶಕ ಪವನ್ ಒಡೆಯರ್ ಸಿನಿಮಾಗಳೆಂದರೆ ಟಿಸ್ಟ್ಗಳು ಇರಲೇಬೇಕು. ಈಗ ಅವರು ನಿರ್ದೇಶನ ಮಾಡಿರುವ ‘ರೇಮೊ’ ಚಿತ್ರ ಕೂಡ ಅಂತಹ ಹಲವು ಟ್ವಿಸ್ಟ್ಗಳಿಂದ ತುಂಬಿರುವ ಸಿನಿಮಾ. ಚಂದದ ಒಂದು ಲವ್ ಸ್ಟೋರಿಯನ್ನು ಅವರು ಹೆಣೆದಿದ್ದಾರೆ. ಎರಡು ತದ್ವಿರುದ್ಧ ಪಾತ್ರಗಳ ನಡುವೆ ಪ್ರೀತಿ ಚಿಗುರುವ ನೂರಾರು ಸಿನಿಮಾಗಳ ರೀತಿಯೇ ಈ ಚಿತ್ರದ ಕಥೆ ಕೂಡ ಇದೆ ಎನಿಸುತ್ತದೆ. ಅದರ ನಡುವೆಯೂ ತಮ್ಮದೇ ಆದಂತಹ ಮೇಕಿಂಗ್ ಶೈಲಿಯಿಂದಾಗಿ ಈ ಚಿತ್ರವನ್ನು ಪವನ್ ಒಡೆಯರ್ ಭಿನ್ನವಾಗಿಸಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅವರ ನಟನೆಗೆ ಈ ಸಿನಿಮಾದಲ್ಲಿ ಹೆಚ್ಚಿನ ಸ್ಕೋಪ್ ಸಿಕ್ಕಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ..
ಕಥೆಯ ಎಳೆ ಹೀಗಿದೆ..
ಕೋಟ್ಯಾಧೀಶರ ಮನೆಮಗ ರೇವಂತ್ (ಇಶಾನ್) ಓರ್ವ ರಾಕ್ ಸ್ಟಾರ್. ‘ರೇಮೊ’ ಎಂಬ ಹೆಸರಿನಿಂದ ಆತ ಸಿಕ್ಕಾಪಟ್ಟೆ ಫೇಮಸ್. ಹೆಣ್ಣು, ಹೆಂಡ, ಮಾದಕ ವಸ್ತುಗಳ ದಾಸ ಕೂಡ ಹೌದು. ಅವನಿಗೆ ವಿರುದ್ಧವಾದ ವ್ಯಕ್ತಿತ್ವ ಹೊಂದಿರುವವಳು ಕಥಾನಾಯಕಿ ಮೋಹನಾ (ಆಶಿಕಾ). ಅಪ್ಪಟ ಸಂಪ್ರದಾಯಸ್ಥ ಮನೆತನದ ಆಕೆ ಕೂಡ ಗಾಯಕಿ. ಸಂಗೀತದ ಕಾರಣಕ್ಕಾಗಿ ರೇಮೊ ಮತ್ತು ಮೋಹನಾ ಭೇಟಿ ಆಗುತ್ತಾರೆ. ಆ ಭೇಟಿ ಪ್ರೀತಿಗೆ ತಿರುಗುತ್ತದೆ. ನಂತರ ದ್ವೇಷ ಹುಟ್ಟುತ್ತದೆ. ಅದಕ್ಕೆಲ್ಲ ಕಾರಣ ಏನು? ಅಂತಿಮವಾಗಿ ಗೆಲ್ಲೋದು ಯಾರು? ಈ ಪ್ರಶ್ನೆಗೆ ಉತ್ತರ ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಡಬಲ್ ಶೇಡ್ ಪಾತ್ರದಲ್ಲಿ ಇಶಾನ್, ಆಶಿಕಾ:
ಈ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಯ ಪಾತ್ರಗಳಿಗೆ ನಿರ್ದೇಶಕ ಪವನ್ ಒಡೆಯರ್ ಅವರು ಸಮಾನ ಪ್ರಾಮುಖ್ಯತೆ ನೀಡಿದ್ದಾರೆ. ಕೇವಲ ಹೀರೋ ಜೊತೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಪಾತ್ರ ನಾಯಕಿಯದ್ದಲ್ಲ. ಇಶಾನ್ ಮತ್ತು ಆಶಿಕಾ ರಂಗನಾಥ್ ಅವರಿಗೆ ಎರಡು ಶೇಡ್ ಇರುವಂತಹ ಪಾತ್ರವಿದೆ. ಆ ಪಾತ್ರಗಳನ್ನು ಅವರಿಬ್ಬರು ಚೆನ್ನಾಗಿ ನಿಭಾಯಿಸಿದ್ದಾರೆ. ಆರಂಭದಲ್ಲಿ ಅಬ್ಬರಿಸುವ ಇಶಾನ್ ಅವರು ನಂತರದಲ್ಲಿ ಸೂಕ್ಷ್ಮ ನಟನೆಯಿಂದ ಸೆಳೆಯುತ್ತಾರೆ. ಶುರುವಿನಲ್ಲಿ ಸೈಲೆಂಟ್ ಹುಡುಗಿಯಂತೆ ಕಾಣುವ ಆಶಿಕಾ, ನಂತರದಲ್ಲಿ ವೈಲೆಂಟ್ ಆಗಿ ಅಬ್ಬರಿಸುತ್ತಾರೆ.
ಭಾವನೆಗಳೇ ಈ ಚಿತ್ರದ ಜೀವಾಳ:
ಒಟ್ಟಾರೆಯಾಗಿ ‘ರೇಮೊ’ ಸಿನಿಮಾ ಭಾವನೆಗಳ ಹಾವು-ಏಣಿ ಆಟದಂತಿದೆ. ರೋಷಾವೇಷದಲ್ಲಿ ಅಬ್ಬರಿಸುತ್ತ ಮೇಲೇರುವ ಪಾತ್ರಗಳು ಯಾವುದೋ ಹಂತದಲ್ಲಿ ಆಘಾತಕ್ಕೆ ಒಳಗಾಗಿ ನೆಲಕಚ್ಚುತ್ತವೆ. ಸೈಲೆಂಟ್ ಆಗಿ ಕೆಳಗೆ ಇದ್ದ ಪಾತ್ರಗಳು ಒಮ್ಮೆಲೇ ಏಣಿ ಹಿಡಿದು ಮೇಲೇರುತ್ತವೆ. ಪ್ರತಿ ಬಾರಿ ಟ್ವಿಸ್ಟ್ ಎದುರಾದಾಗಲೂ ಪ್ರೇಕ್ಷಕರಿಗೆ ಈ ಹಾವು-ಏಣಿ ಆಟವೇ ಮನರಂಜನೆ ನೀಡುತ್ತದೆ.
ಅದ್ದೂರಿತನಕ್ಕೆ ಕೊರತೆ ಇಲ್ಲ:
ತುಂಬ ಅದ್ದೂರಿಯಾಗಿ ಈ ಚಿತ್ರವನ್ನು ಚಿತ್ರಿಸಲಾಗಿದೆ. ದುಬಾರಿ ಸೆಟ್ಗಳು, ವಿದೇಶಿ ಲೊಕೇಷನ್ಗಳು, ಅದ್ದೂರಿ ಸಾಹಸ ದೃಶ್ಯಗಳಿಂದಾಗಿ ಈ ಚಿತ್ರ ಶ್ರೀಮಂತವಾಗಿದೆ. ಹಾಗಂತ ಬರೀ ಅದರಲ್ಲೇ ಮುಳುಗಿ ಹೋಗಿಲ್ಲ. ಎಲ್ಲವನ್ನೂ ಕಥೆಯ ಅವಶ್ಯಕತೆಗೆ ಬೇಕಾಗುವಷ್ಟೇ ಹಿತ-ಮಿತವಾಗಿ ಬಳಸಲಾಗಿದೆ.
ಸಿಂಗರ್ ಬದುಕಿನ ಏರಿಳಿತಗಳನ್ನು ತೋರಿಸಲು ಹಾಡುಗಳು ಬಳಕೆ ಆಗಿವೆ. ಇಡೀ ಸಿನಿಮಾದ ಕಥೆಯಲ್ಲಿ ಸಂಗೀತಕ್ಕೆ ಹೆಚ್ಚು ಸ್ಪೇಸ್ ಇದೆ. ಆದ್ದರಿಂದ ಚಿತ್ರದ ಹಾಡುಗಳ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು. ದ್ವಿತೀಯಾರ್ಧ ಕೊಂಚ ಎಳೆದಾಡಿದಂತಾಗಿದೆ. ಒಂಚೂರು ಟ್ರಿಮ್ ಮಾಡಿದ್ದರೆ ‘ರೇಮೊ’ ಇನ್ನಷ್ಟು ಆಪ್ತವಾಗುತ್ತಿತ್ತು.
ಭರವಸೆ ಮೂಡಿಸಿದ ಇಶಾನ್:
ನಟ ಇಶಾನ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟನೆಯಲ್ಲೂ, ಫೈಟಿಂಗ್ನಲ್ಲೂ ಅವರು ಭರವಸೆ ಮೂಡಿಸಿದ್ದಾರೆ. ಶರತ್ ಕುಮಾರ್ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ತೂಕದ ಅಭಿನಯ ನೀಡಿದ್ದಾರೆ. ಮಧುಬಾಲಾ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್ ಅವರು ಎಂದಿನಂತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:02 pm, Fri, 25 November 22