ಚಿತ್ರ: ಸಖತ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್
ನಿರ್ದೇಶನ: ಸಿಂಪಲ್ ಸುನಿ
ಪಾತ್ರವರ್ಗ: ಗಣೇಶ್, ನಿಶ್ವಿಕಾ ನಾಯ್ಡು, ಸುರಭಿ, ಸಾಧು ಕೋಕಿಲ ಮೊದಲಾದವರು
ಸ್ಟಾರ್: 3.5/5
ಪುನೀತ್ ರಾಜ್ಕುಮಾರ್ ಇತ್ತೀಚೆಗೆ ನಿಧನ ಹೊಂದಿದ್ದರು. ಅವರ ನಿಧನದ ನಂತರ ಎರಡೂ ಕಣ್ಣುಗಳನ್ನು ದಾನ ಮಾಡಿದ್ದರು. ಇದರಿಂದ ಒಂದಷ್ಟು ಅಂಧರ ಬಾಳಲ್ಲಿ ಬೆಳಕು ಮೂಡಿತ್ತು. ಇದರಿಂದ ಸಾಕಷ್ಟು ಜನರು ಕಣ್ಣುಗಳನ್ನು ದಾನ ಮಾಡೋಕೆ ಮುಂದೆ ಬಂದಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಹಾಗೂ ನಟ ಗಣೇಶ್ ಕಾಂಬಿನೇಷನ್ನಲ್ಲಿ ಮೂಡಿಬಂದ ಎರಡನೇ ಚಿತ್ರ ‘ಸಖತ್’ ಕೂಡ ಇದೇ ಸಂದೇಶದೊಂದಿಗೆ ಬಂದಿದೆ ಅನ್ನೋದು ವಿಶೇಷ.
ಬಾಲು (ಗಣೇಶ್) ಆರ್ಕೆಸ್ಟ್ರಾದಲ್ಲಿ ಹಾಡುವ ಕಲಾವಿದ. ಆತ ಅಂಧನ ರೀತಿಯಲ್ಲಿ ಬಂದು ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಸೇರಿಕೊಳ್ಳುತ್ತಾನೆ. ಅಂಧನಂತೆ ಆ್ಯಕ್ಟ್ ಮಾಡೋಕೆ ಒಪ್ಪಿಕೊಂಡ ಬಾಲುನ ಜೀವನದಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತವೆ. ಇದನ್ನು ಬಾಲು ಹೇಗೆ ಎದುರಿಸುತ್ತಾನೆ? ಆತ ಅಂಧನಂತೆ ನಟಿಸೋದೇಕೆ? ಸಿನಿಮಾದಲ್ಲಿರುವ ಇಬ್ಬರು ನಾಯಕಿಯರ ಪೈಕಿ (ಸುರಭಿ, ನಿಶ್ವಿಕಾ ನಾಯ್ಡು) ಬಾಲು ಯಾರನ್ನು ವರಿಸುತ್ತಾನೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.
ಸುನಿ ಸಿನಿಮಾ ಎಂದರೆ ಅಲ್ಲಿ ಪಂಚಿಂಗ್ ಡೈಲಾಗ್, ಕಾಮಿಡಿಗಳು ಸಾಕಷ್ಟು ಇರುತ್ತವೆ. ‘ಸಖತ್’ ಚಿತ್ರದಲ್ಲೂ ಅದು ಮುಂದುವರಿದಿದೆ. ಕೆಲ ದೃಶ್ಯಗಳು ಕಚುಗುಳಿ ಇಟ್ಟರೆ, ಇನ್ನೂ ಕೆಲ ದೃಶ್ಯಗಳು ಗಂಭೀರವಾಗಿ ಸಾಗುತ್ತವೆ. ಎರಡರ ಮಿಶ್ರಣವನ್ನು ಹದವಾಗಿ ಬೆರೆಸಿದ್ದಾರೆ ಸುನಿ. ಇದೆಲ್ಲದರ ಜತೆಗೆ ನೇತ್ರ ದಾನದ ಬಗ್ಗೆ ಸಂದೇಶ ನೀಡಲಾಗಿದೆ. ಅಲ್ಲದೆ, ನಮ್ಮ ದೌರ್ಬಲ್ಯಗಳನ್ನೇ ನಮ್ಮ ಶಕ್ತಿಯನ್ನಾಗಿ ಮಾಡಿಕೊಂಡು ಮುಂದೆ ಸಾಗಬೇಕು ಎನ್ನುವ ಸಂದೇಶವೂ ಇದೆ.
ಒಂದು ಅಪಘಾತದ ಸುತ್ತವೂ ಕಥೆ ಸಾಗುತ್ತದೆ. ಈ ಮೂಲಕ ಮನರಂಜನೆ ಜತೆಗೆ ಸಸ್ಪೆನ್ಸ್ ಕೂಡ ನಿರ್ದೇಶಕರು ಬೆರೆಸಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಧರ್ಮಣ್ಣ, ಗಿರೀಶ್ ಶಿವಣ್ಣ, ಕುರಿ ಪ್ರತಾಪ್ ಇಷ್ಟೂ ಹಾಸ್ಯ ನಟರು ಒಂದು ಕಡೆ ಸೇರಿದ್ದಾರೆ. ಹೀಗಾಗಿ, ನಗುವಿಗೆ ಎಲ್ಲೂ ಬರ ಇಲ್ಲ. ಶೋಭರಾಜ್ ನೆಗೆಟಿವ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.
ಗಣೇಶ್ ಇದೇ ಮೊದಲ ಬಾರಿಗೆ ಅಂಧನ ರೀತಿಯಲ್ಲಿ ನಟಿಸಿದ್ದಾರೆ. ಕೊಟ್ಟ ಪಾತ್ರವನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಶ್ವಿಕಾ ಕೂಡ ಅಂಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ಪಡೆಯುತ್ತಾರೆ. ನಟಿ ಸುರಭಿ ಉತ್ತಮವಾಗಿ ನಟಿಸಿದ್ದಾರೆ. ಗಣೇಶ್ ಮಗ ವಿಹಾನ್ ಕೂಡ ಸಿನಿಮಾದಲ್ಲಿ ನಟಿಸಿದ್ದಾನೆ. ಮೊದಲ ಚಿತ್ರದಲ್ಲೇ ಅವನು ಎಲ್ಲರ ಗಮನ ಸೆಳೆದಿದ್ದಾನೆ. ಸಂಭಾಷಣೆ ಇಡೀ ಚಿತ್ರದ ಜೀವಾಳ ಎಂದರೂ ತಪ್ಪಾಗಲಾರದು. ಎಲ್ಲ ದೃಶ್ಯದಲ್ಲೂ ನಗು ಹುಟ್ಟಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಸಂಭಾಷಣೆ ಬರೆದಂತಿದೆ. ಜೂಡ ಸ್ಯಾಂಡಿ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ.
ರಿಯಾಲಿಟಿ ಶೋಗಳು ಟಿಆರ್ಪಿ ಪಡೆಯೋಕೆ ಕಣ್ಣೀರನ್ನೇ ಬಂಡವಾಳ ಮಾಡಿಕೊಳ್ಳುತ್ತವೆ ಎನ್ನುವ ಆರೋಪ ಇದೆ. ಈ ವಿಚಾರದಮೇಲೆ ಕಥೆಯ ಮೊದಲಾರ್ಧ ಸಾಗುತ್ತದೆ. ಫಸ್ಟ್ಹಾಫ್ ನಿಧಾನ ಎನಿಸೋಕೆ ಇದು ಕೂಡ ಪ್ರಮುಖ ಕಾರಣ. ಕೆಲ ದೃಶ್ಯಗಳು ಎಳೆದಾಡಿದಂತಿದೆ. ಅವುಗಳಿಗೆ ಕತ್ತರಿ ಹಾಕುವ ಪ್ರಯತ್ನವನ್ನು ನಿರ್ದೇಶಕರು ಮಾಡಬಹುದಿತ್ತು. ಟ್ವಿಸ್ಟ್ ನೀಡುವ ದೃಶ್ಯಗಳನ್ನು ಇನ್ನಷ್ಟು ಕಟ್ಟುಕೊಟ್ಟಿದ್ದರೆ ಸಿನಿಮಾ ಮತ್ತಷ್ಟು ಆಪ್ತವಾಗುತ್ತಿತ್ತು.
ಇದನ್ನೂ ಓದಿ: ‘ಸಖತ್’ ಸಿನಿಮಾ ಫಸ್ಟ್ ಹಾಫ್ ರಿಪೋರ್ಟ್; ಗಣೇಶ್-ಸುನಿ ಚಿತ್ರದ ಮೊದಲಾರ್ಧದಲ್ಲಿ ಏನುಂಟು, ಏನಿಲ್ಲ?
Published On - 2:50 pm, Fri, 26 November 21