Saramsha Review: ಅವರವರ ಗ್ರಹಿಕೆಗೆ ತಕ್ಕಂತಿದೆ ಬದುಕಿನ ಫಿಲಾಸಫಿ ಹೇಳುವ ‘ಸಾರಾಂಶ’

|

Updated on: Feb 19, 2024 | 2:14 PM

ಜೀವನ ಮತ್ತು ಸಂಬಂಧಗಳ ಕುರಿತ ಒಂದು ಸಂವಾದದ ರೀತಿ ‘ಸಾರಾಂಶ’ ಸಿನಿಮಾ ಮೂಡಿಬಂದಿದೆ. ಪ್ರೇಕ್ಷಕರಿಗೆ ಈ ಸಿನಿಮಾದಿಂದ ಸಿಗುವ ಅರ್ಥಗಳು ಹಲವು. ಆ ಕಾರಣದಿಂದ ಇದೊಂದು ಭಿನ್ನ ಪ್ರಯತ್ನದಂತಿದೆ. ಅಪರೂಪದ ಸಿನಿಮಾವಾಗಿ ‘ಸಾರಾಂಶ’ ಗಮನ ಸೆಳೆಯುತ್ತದೆ. ಸೂರ್ಯ ವಸಿಷ್ಠ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Saramsha Review: ಅವರವರ ಗ್ರಹಿಕೆಗೆ ತಕ್ಕಂತಿದೆ ಬದುಕಿನ ಫಿಲಾಸಫಿ ಹೇಳುವ ‘ಸಾರಾಂಶ’
ಶ್ರುತಿ ಹರಿಹರನ್, ಸೂರ್ಯ ವಸಿಷ್ಠ
Follow us on

ಸಿನಿಮಾ: ಸಾರಾಂಶ. ನಿರ್ಮಾಣ: ಆರ್.‌‌ ನಲ್ಲಂ, ರವಿ ಕಶ್ಯಪ್. ನಿರ್ದೇಶನ: ಸೂರ್ಯ ವಸಿಷ್ಠ. ಪಾತ್ರವರ್ಗ: ಶ್ರುತಿ ಹರಿಹರನ್, ಸೂರ್ಯ ವಸಿಷ್ಠ, ದೀಪಕ್ ಸುಬ್ರಹ್ಮಣ್ಯ, ಆಸಿಫ್ ಕ್ಷತ್ರಿಯ, ಶ್ರುತಿ ಪ್ರದೀಪ್ ಮುಂತಾದವರು. ಸ್ಟಾರ್: 3/5

ಸಿನಿಮಾ ಎಂದರೆ ಹೀಗೇ ಇರಬೇಕು ಎಂಬ ಯಾವ ನಿಯಮವೂ ಇಲ್ಲ. ಮಾಮೂಲಿ ಕಮರ್ಷಿಯಲ್ ಚಿತ್ರಗಳ ಸೂತ್ರಗಳನ್ನು ಬದಿಗಿಟ್ಟು ಕೂಡ ಸಿನಿಮಾ ಮಾಡಬಹುದು ಎಂಬುದನ್ನು ಈಗಾಗಲೇ ಅನೇಕರು ಸಾಬೀತುಪಡಿಸಿದ್ದಾರೆ. ಆ ಸಾಲಿಗೆ ಕನ್ನಡದ ‘ಸಾರಾಂಶ’ ಸಿನಿಮಾ (Saramsha Movie) ಕೂಡ ಸೇರ್ಪಡೆ ಆಗಿದೆ. ಈ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು ಮಾತ್ರ. ಸೂರ್ಯ ವಸಿಷ್ಠ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶ್ರುತಿ ಹರಿಹರನ್ (Sruthi Hariharan), ದೀಪಕ್ ಸುಬ್ರಹ್ಮಣ್ಯ, ವಸಿಷ್ಠ, ಆಸಿಫ್ ಕ್ಷತ್ರಿಯಾ, ಶ್ರುತಿ ಪ್ರದೀಪ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಒಟ್ಟಾರೆ ‘ಸಾರಾಂಶ’ ಚಿತ್ರ ಹೇಗಿದೆ ತಿಳಿಯಲು ಈ ವಿಮರ್ಶೆ (Saramsha Movie Review) ಓದಿ..

ಒಂದು ಫ್ಯಾಂಟಸಿಯ ರೀತಿಯಲ್ಲಿ ‘ಸಾರಾಂಶ’ ಸಿನಿಮಾ ಮೂಡಿಬಂದಿದೆ. ಚಿಕ್ಕ ವಸ್ಸಿನಿಂದಲೇ ಲೇಖಕನಾಗಬೇಕು ಎಂಬ ಆಸೆ ಇಟ್ಟುಕೊಂಡಿರುವ ಬಾಲಕ, ಬೆಳೆದು ದೊಡ್ಡವನಾದ ಮೇಲೆ ಏನಾಗುತ್ತಾನೆ ಎಂಬುದು ಈ ಸಿನಿಮಾದಲ್ಲಿ ಮೇಲ್ನೋಟಕ್ಕೆ ಕಾಣುವ ಕಥೆ. ತನ್ನದೇ ಕಥೆಯನ್ನು ಆತ ಬೇರೆ ಪಾತ್ರಗಳ ಮೂಲಕ ಬರೆಯುತ್ತಿದ್ದಾನಾ ಅಥವಾ ಅವನು ಬರೆದ ಪಾತ್ರಗಳು ಬೇರೆ ಎಲ್ಲದರೂ ರಿಯಲ್​ ಜಗತ್ತಿನಲ್ಲಿ ವಾಸಿಸುತ್ತಿವೆಯಾ ಎಂಬ ಕೌತುಕ ಮೂಡಿಸುವ ರೀತಿಯಲ್ಲಿ ‘ಸಾರಾಂಶ’ ಚಿತ್ರದ ಕಥೆ ಸಾಗುತ್ತದೆ.

ಕಥೆಗೆ ಆರಂಭ, ಮಧ್ಯಂತರ, ಅಂತ್ಯ ಹೀಗೆಯೇ ಇರಬೇಕು ಎಂಬ ಯಾವ ನಿಯಮಕ್ಕೂ ಕಟ್ಟುಬೀಳದ ರೀತಿಯಲ್ಲಿ ‘ಸಾರಾಂಶ’ ಸಿನಿಮಾವನ್ನು ಸೂರ್ಯ ವಸಿಷ್ಠ ನಿರ್ದೇಶಿಸಿದ್ದಾರೆ. ಇಡೀ ಸಿನಿಮಾ ಒಂದು ರಂಗಪ್ರಯೋಗದ ಹಾಗೆ ಭಾಸವಾಗುತ್ತದೆ. ಅದಕ್ಕೆ ತಕ್ಕಂತಹ ಬೆಳಕಿನ ವಿನ್ಯಾಸ, ಹಿನ್ನೆಲೆ ಸಂಗೀತ ಬಳಕೆ ಆಗಿದೆ. ಒಂದು ನಾಟಕ ನೋಡಿದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಕಥೆಯ ಜೊತೆಜೊತೆಗೆ ಬದುಕಿನ ಕುರಿತ ಫಿಲಾಸಫಿಯನ್ನು ಈ ಸಿನಿಮಾದಲ್ಲಿ ಹೇರಳವಾಗಿ ಹೇಳಲಾಗಿದೆ. ಆ ಫಿಲಾಸಪಿಗೆ ಒಂದೇ ಅರ್ಥವಿದೆ ಎಂದೇನೂ ಇಲ್ಲ. ಪ್ರೇಕ್ಷಕರ ಗ್ರಹಿಕೆಗೆ ತಕ್ಕಂತೆ ಹಲವು ಅರ್ಥಗಳನ್ನು ಹೊಮ್ಮಿಸುವ ಗುಣ ಈ ಸಿನಿಮಾಗೆ ಇದೆ.

ಮಾಮೂಲಿ ಸಿನಿಮಾಗಳಲ್ಲಿ ಇರುವಂತಹ ಸಂಭಾಷಣೆಗಳು ‘ಸಾರಾಂಶ’ ಸಿನಿಮಾದಲ್ಲಿ ಕೇಳಿಸುವುದಿಲ್ಲ. ದಿನನಿತ್ಯದ ಬದುಕಿನಲ್ಲಿ ತೀರಾ ಸಹಜವಾಗಿ ಬಂದುಹೋಗುವ ಮಾತುಕತೆಗಳೇ ಇಲ್ಲಿನ ಡೈಲಾಗ್​ಗಳಾಗಿವೆ. ಅವುಗಳ ನಡುವೆಯೇ ತಿಳಿಸಬೇಕಾದ್ದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕೆಲವೊಮ್ಮೆ ಮಾತ್ರ ಕೊಂಚ ಡ್ರಮ್ಯಾಟಿಕ್​ ಆದಂತಹ ಫೀಲ್​ ನೀಡಲಾಗಿದೆ. ಅಬ್ಬರವಿಲ್ಲದೇ ಎಲ್ಲವನ್ನೂ ಸೂಕ್ಷ್ಮವಾಗಿಯೇ ಅಭಿನಯಿಸಿ ತೋರಿಸುವಂತಹ ಕಲಾವಿದರಿಂದಾಗಿ ‘ಸಾರಾಂಶ’ ಚಿತ್ರಕ್ಕೆ ರಿಯಲಿಸ್ಟಿಕ್​ ಮೆರುಗು ಸಿಕ್ಕಿದೆ.

ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

ಸಾವು, ಸಂಬಂಧ, ಬಾಂಧವ್ಯ, ಬಯಕೆ, ಒಂಟಿತನ ಮುಂತಾದ ವಿಚಾರಗಳ ಬಗ್ಗೆ ಪಾತ್ರಗಳ ಮೂಲಕ ಈ ಸಿನಿಮಾದುದ್ದಕ್ಕೂ ಒಂದು ಬಗೆಯ ಸಂವಾದವೇ ನಡೆಯುತ್ತದೆ. ಅವುಗಳಲ್ಲಿ ಪ್ರೇಕ್ಷಕರಿಗೆ ಸಿಗುವ ಅರ್ಥಗಳು ಹಲವು. ಒಟ್ಟಿನಲ್ಲಿ ಇದೊಂದು ಡಿಫರೆಂಟ್​ ಸಿನಿಮಾ. ಅಪರೂಪದ ಪ್ರಯತ್ನವಾಗಿ ‘ಸಾರಾಂಶ’ ಗಮನ ಸೆಳೆಯುತ್ತದೆ. ಮಸಾಲಾ ಅಂಶಗಳ ಜೊತೆ ಟ್ವಿಸ್ಟ್​, ಆ್ಯಕ್ಷನ್​, ಕಾಮಿಡಿ, ಮೆಲೋಡ್ರಾಮಾ ಹೊಂದಿರುವ ಮೂಮೂಲಿ ಕಮರ್ಷಿಯಲ್​ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡುವವರಿಗೆ ‘ಸಾರಾಂಶ’ ರೀತಿಯ ಸಿನಿಮಾ ಹಿಡಿಸದೇ ಇರಬಹುದು. ಆದರೆ, ಭಿನ್ನವಾದ ಅನುಭೂತಿ ಪಡೆಯುವ ಹಂಬಲ ಇದ್ದರೆ ಈ ಸಿನಿಮಾ ರುಚಿಸುತ್ತದೆ. ಆದರೆ ತಾಳ್ಮೆಯಿಂದ ವೀಕ್ಷಿಸುವ ಗುಣ ಪ್ರೇಕ್ಷಕರಿಗೆ ಬೇಕು. ಯಾಕೆಂದರೆ, ಈ ಚಿತ್ರದ ನಿರೂಪಣೆಯಲ್ಲಿ ಅವಸರವಿಲ್ಲ.

ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

ಮಾಯಾ ಎಂಬ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್​ ಅಭಿನಯಿಸಿದ್ದಾರೆ. ಅಭಯ್​ ಎಂಬ ಪಾತ್ರದಲ್ಲಿ ಸೂರ್ಯ ವಸಿಷ್ಠ ಕಾಣಿಸಿಕೊಂಡಿದ್ದಾರೆ. ಬರಹಗಾರನಾಗುವ ಹಂಬಲ ಹೊಂದಿರುವ ಚಾರ್ಟರ್ಡ್​ ಅಕೌಂಟೆಂಟ್​ ಪಾತ್ರಕ್ಕೆ ದೀಪಕ್​ ಸುಬ್ರಹ್ಮಣ್ಯ ಬಣ್ಣ ಹಚ್ಚಿದ್ದಾರೆ. ‘ನೀ ಮಾಯೆಯೊಳಗೋ.. ಮಾಯೆ ನಿನ್ನೊಳಗೋ..’ ಎಂಬ ಪ್ರಶ್ನೆಯನ್ನು ಆಗಾಗ ನೆನಪಿಸುವಂತಹ ಪಾತ್ರಗಳಿಗೆ ಈ ಕಲಾವಿದರು ನ್ಯಾಯ ಒದಗಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ‘ಲೂಸಿಯಾ’ ಚಿತ್ರವನ್ನು ಈ ಸಿನಿಮಾ ನೆನಪಿಸುತ್ತದೆ. ತಂದೆ-ತಾಯಿಯಾಗಿ ಆಶಿಷ್​ ಕ್ಷತ್ರಿಯಾ ಹಾಗೂ ಶ್ರುತಿ ಪ್ರದೀಪ್​ ಅಭಿನಯ ಇಷ್ಟವಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:13 pm, Mon, 19 February 24