Retired ಮರೆಸಿ Re try ಎಂದು ಹೇಳುವಷ್ಟು ಇಳಿವಯಸ್ಸಿನವರಿಗೆ ಸ್ಪೂರ್ತಿಯಾಗುತ್ತದೆ ಜೈಲರ್ ಸಿನಿಮಾ! ಏನಿದರ ಒಳಮರ್ಮ, ಓದಿ

| Updated By: ಸಾಧು ಶ್ರೀನಾಥ್​

Updated on: Aug 28, 2023 | 12:29 PM

Jailer movie review: ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡುವ ಕೌಟುಂಬಿಕ ಚಿತ್ರವಾಗಿರುತ್ತದೆ. 6 ರಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಜೈಲರ್ ಸಿನಿಮಾದಲ್ಲಿರುವ ಕ್ರೌರ್ಯ ಹಾಗೂ ರಕ್ತದೋಕುಳಿ ಇದನ್ನು ಸುಳ್ಳಾಗಿಸಿದೆ. ಅದರಲ್ಲೂ ಕೆಲವು ಭಯಾನಕ ದೃಶ್ಯಗಳು ಮಕ್ಕಳು ಮಹಿಳೆಯರು ಕಣ್ಣು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಕ್ರೌರ್ಯವಿದೆ‌.

Retired ಮರೆಸಿ Re try ಎಂದು ಹೇಳುವಷ್ಟು ಇಳಿವಯಸ್ಸಿನವರಿಗೆ ಸ್ಪೂರ್ತಿಯಾಗುತ್ತದೆ ಜೈಲರ್ ಸಿನಿಮಾ! ಏನಿದರ ಒಳಮರ್ಮ, ಓದಿ
ಜೈಲರ್ ಸಿನಿಮಾ! ಏನಿದರ ಒಳಮರ್ಮ, ಓದಿ
Follow us on

Rajinikanth Jailer movie review: ಜೈಲರ್ ಜೀವನದ ಉತ್ಸಾಹವನ್ನು 10 ಪಟ್ಟು ಹೆಚ್ಚಿಸುವ ಅತ್ಯುತ್ತಮ ಚಿತ್ರ. ರಜನಿ ಚಿತ್ರ (Superstar Rajinikanth) ಅಂದ್ರೆ ಅದರಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅದೇ ರೀತಿ ಜೈಲರ್ ಸಿನಿಮಾ ಸಹಾ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಎಲ್ಲಾ ವಿಶೇಷತೆಗಳಲ್ಲಿ ನನ್ನ ಗಮನಕ್ಕೆ ಬಂದಿದ್ದು ಮತ್ತು ನಾನು ಗ್ರಹಿಸಿದ್ದು ಇಳಿವಯಸ್ಸಿನಲ್ಲಿರುವವರಿಗೆ ಇದು ಹೇಳಿ ಮಾಡಿಸಿದ ಸಿನಿಮಾ. 60 ವರ್ಷ ದಾಟಿದ ಹಾಗೂ ನಿವೃತ್ತ ಜೀವನ ನಡೆಸುತ್ತಿರುವ ಎಲ್ಲರೂ ಕಡ್ಡಾಯವಾಗಿ ನೋಡಲೇಬೇಕು. ಕಾರಣ ಅಂತವರು ಜೈಲರ್ ಸಿನಿಮಾ (Jailer Movie) ನೋಡುವುದರಿಂದ ಅವರ ಜೀವನದ ಉತ್ಸಾಹ ಇಮ್ಮಡಿಯಾಗುತ್ತದೆ. ಖಂಡಿತಾ Retired ಅನ್ನೋದನ್ನು ಮರೆಸಿ Re try ಅನ್ನೋ ಅಷ್ಟರಮಟ್ಟಿಗೆ ಇಳಿವಯಸ್ಸಿನವರಿಗೆ ಸಿನಿಮಾ ಸ್ಪೂರ್ತಿಯಾಗುತ್ತದೆ.

Jailer movie review:ತಂದೆಯ ಪ್ರೀತಿ – ಇಳಿ ವಯಸ್ಸಿನ ಅಸಹಾಯಕತೆ…….!

ಸಿನಿಮಾ ಮಧ್ಯಮ ವರ್ಗದ ಕುಟುಂಬ ಹಾಗೂ ಪೊಲೀಸ್ ಕುಟುಂಬದಲ್ಲಿ ಪ್ರತಿ ನಿತ್ಯ ನಡೆಯುವ ಕಥೆಯ ಹಂದರವನ್ನು ಜೈಲರ್ ಸಿನಿಮಾ ಹೊಂದಿದೆ. ಜೈಲರ್ ಆಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಜನಿಕಾಂತ್‌. ತಾನು ತನ್ನ ಹೆಂಡತಿ, ಮಗ, ಸೊಸೆ, ಮೊಮ್ಮಗ ಅಷ್ಟೇ ಅದೇ ರಜನಿಕಾಂತ್ ಪ್ರಪಂಚ. ಇನ್ನು ರಜನಿಯ ಮಗ ಸಹಾ ಅಪ್ಪನಂತೆ ಪ್ರಾಮಾಣಿಕ ಪೊಲೀಸ್ ಅಧಿಕಾರಿ. ಸಮಾಜಘಾತುಕ ಶಕ್ತಿಗಳ ವಿರುದ್ದ ಸೆಣೆಸುವ ಮಗ. ಮಗನನ್ನು ಟಾರ್ಗೆಟ್ ಮಾಡಿದ ಸಮಾಜಘಾತುಕ ಶಕ್ತಿಗಳು. ಈ ಬಗ್ಗೆ ರಜನಿಗೆ ಹೇಳುವ ಪೊಲೀಸ್ ಸಿಬ್ಬಂದಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಪ್ಪ, ಮಗ. ಈ ಮಧ್ಯೆ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಮಗ. ಒಬ್ಬ ಪೊಲೀಸ್ ಅಧಿಕಾರಿ ನಾಪತ್ತೆಯಾದರೂ ತಲೆ ಕೆಡಿಸಿಕೊಳ್ಳದ ಇಲಾಖೆ. ಒಂದು ಕಡೆ ನಾಪತ್ತೆಯಾದ ತಮ್ಮದೇ ಅಧಿಕಾರಿ ಪ್ರಕರಣವನ್ನು ಆತ್ಮಹತ್ಯೆ ಅಂತಾ ಬಿಂಬಿಸಿ ರಜನಿ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುವ ಪೊಲೀಸರು. ಮತ್ತೊಂದು ಕಡೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗ ನಾಪತ್ತೆಯಿಂದಾಗಿ ತಂದೆಯ ಒದ್ದಾಟ, ತೊಳಲಾಟ. ಇಳಿ ವಯಸ್ಸಿನಲ್ಲಿ ಇಡೀ ಕುಟುಂಬವನ್ನು ಸಂತೈಸುವ ಜವಾಬ್ದಾರಿ ಜೊತೆಗೆ ಮಗನ ಬಗ್ಗೆ ಹುಡುಕಾಟ. ಈ ನಡುವೆ ಮಗ ಕೊಲೆ ಆಗಿರುವ ಬಗ್ಗೆ ರಜನಿಗೆ ಮಾಹಿತಿ. ಕೊಲೆ ಮಾಡಿದವರ ಪತ್ತೆ ಹಚ್ಚಿ ಬೆನ್ನು ಹತ್ತುವ ರಜನಿ. ಸೇಡು ತೀರಿಸಿಕೊಳ್ಳುವ ರಜನಿ. ಇದರಿಂದ ರಜನಿಯ ಹಿಂದೆ ಬೀಳುವ ಮಗನ ಶತೃಗಳು, ರಜನಿ ಕುಟುಂಬದ ಬೇಟೆಗೆ ಸ್ಕೆಚ್. ಈ ಹಾವು ಏಣಿ ಆಟಕ್ಕೆ ಜೊತೆಯಾಗುವವರು ಹ್ಯಾಟ್ರಿಕ್ ಹೀರೋ ಡಾ ಶಿವಣ್ಣ ಹಾಗೂ ಮಲಯಾಳಂ ಮಾಂತ್ರಿಕ ಮೋಹನ್ ಲಾಲ್. ಇವರಿಬ್ಬರ ನೆರವನಿಂದ ರಜನಿ ಆಡುವ ಹಾವು ಏಣಿ ಆಟವೇ ರೋಚಕ, ಮನಮೋಹಕ.

Jailer movie review: ಟ್ವಿಸ್ಟ್, ಟ್ವಿಸ್ಟ್ & ಟ್ವಿಸ್ಟ್………!

ಹಾವು ಏಣಿ ಆಟದಲ್ಲಿ ಬಹುತೇಕ ಗೆದ್ದು ಮಗನ ಕೊಂದವನ ಕುತ್ತಿಗೆಯನ್ನು ಇನ್ನೇನು ತೆಗೆಯುವ ವೇಳೆಗೆ ಸಿನಿಮಾ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ಸತ್ತಿದ್ದಾನೆ ಅಂತಾ ಭಾವಿಸಿದ್ದ ಮಗ ಸತ್ತಿರದೆ ಬಂಧಿಯಾಗಿರುತ್ತಾನೆ. ಬಂಧಿಯಾದ ಮಗನನ್ನು ಬಂಧ ಮುಕ್ತ ಮಾಡಲು ರಜನಿಗೆ ಅಮೂಲ್ಯ ಅಪರೂಪದ ಒಂದು ಕಿರೀಟ ಕಳವು‌ ಮಾಡುವ ಟಾಸ್ಕ್‌ನ್ನು ವಿಲನ್ ನೀಡುತ್ತಾನೆ. ಆ ಟಾಸ್ಕ್ ಪೂರ್ಣ ಮಾಡುವುದೇ ರೋಚಕ. ಅದನ್ನು ಹೇಳುವುದಕ್ಕಿಂತ ನೋಡಿದರೇನೇ ಮಜಾ. ಟಾಸ್ಕ್ ಪೂರ್ಣಗೊಳಿಸಿ ಇನ್ನೇನು ಮಗನನ್ನು ಬಂಧ ಮುಕ್ತಗೊಳಿಸಬೇಕು ಅಷ್ಟರಲ್ಲಿ ಮತ್ತೊಂದು ಟ್ವಿಸ್ಟ್. ಪ್ರಾಮಾಣಿಕ ಮಗ ಗೋಮುಖ ವ್ಯಾಘ್ರ ಅನ್ನೋ ಸತ್ಯ ಬಟಾಬಯಲು. ಆಘಾತವಾದರೂ ಚೇತರಿಸಿಕೊಂಡು ಮಗನಿಗೆ ತಿದ್ದುಕೊಳ್ಳಲು ಒಂದಲ್ಲ ಎರಡಲ್ಲ ಮೂರು ಅವಕಾಶ ನೀಡುವ ರಜನಿ. ಆದರೆ ತಪ್ಪು ತಿದ್ದಿಕೊಳ್ಳದೆ ತಂದೆಯನ್ನೇ ಕೊಲ್ಲಲು ಮುಂದಾಗುವ ಮಗ. ಅನಿವಾರ್ಯವಾಗಿ ಮಗನನ್ನು ಸಾಯಿಸುವ ದಿಟ್ಟ ನಿರ್ಧಾರದೊಂದಿಗೆ ಸಿನಿಮಾ ಅಂತ್ಯವಾಗುತ್ತದೆ.

Jailer movie review: ರಜನಿಮಯ – ನಿರ್ದೇಶಕರ ಚಿತ್ರ……!

ಜೈಲರ್ ಸಿನಿಮಾ ಸಂಪೂರ್ಣ ರಜನಿಮಯವಾಗಿದೆ. ಆರಂಭದಿಂದ ಕೊನೆಯವರೆಗೂ ಸಿನಿಮಾವನ್ನು ರಜನಿ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ರಜನಿ ಎನರ್ಜಿ 72ರ ಹರೆಯದಲ್ಲೂ 22ರ ಯುವಕರನ್ನು ನಾಚಿಸುವಂತಿದೆ. ರಜನಿ ಲುಕ್ ನಗು, ನಡಿಗೆ, ಡೈಲಾಗ್ ಸ್ಟೈಲ್, ಫೈಟ್ ವಾವ್ ಅದ್ಬುತ.‌ ರಜನಿ ನಿಜಕ್ಕೂ ಸೂಪರ್ ಸ್ಟಾರ್ ಅನ್ನೋದನ್ನಾ ಮತ್ತೆ ಸಾಬೀತು ಮಾಡಿದ್ದಾರೆ. ರಜನಿ ಚಿತ್ರ ಅಂದರೆ ಲಾಜಿಕ್ ಇಲ್ಲವಾದರೂ ಪರ್ವಾಗಿಲ್ಲ ಮ್ಯಾಜಿಕ್ ಇದ್ದರೆ ಸಾಕು ಅನ್ನೋ ಜನರೇ ಹೆಚ್ಚು ಆದ್ರೆ ಜೈಲರ್‌ ಸಿನಿಮಾದಲ್ಲಿ ಯಂಗ್ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಲಾಜಿಕ್ ಮ್ಯಾಜಿಕ್ ಎರಡನ್ನು ಸಮನಾಗಿ ಮಿಶ್ರಣ ಮಾಡಿ ಉಣಬಡಿಸಿದ್ದಾರೆ. ಅದರಲ್ಲೂ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ,ಬಾಲಿವುಡ್, ಟಾಲಿವುಡು, ಮಾಲಿವುಡ್, ಕಾಲಿವುಡ್‌ನ್ನು ಅತ್ಯುತ್ತಮವಾಗಿ ಒಂದುಗೂಡಿಸಿದ್ದಾರೆ. ಹೇಗೆ ಅನ್ನೋದನ್ನು ನೀವು ಸಿನಿಮಾದಲ್ಲೇ ನೋಡಬೇಕು.

Jailer movie review: ವಿಲನ್‌ಗಳ ವಿಲನ್ – ವಿನಾಯಕನ್

ಇತ್ತೀಚಿನ ಸಿನಿಮಾಗಳಲ್ಲಿ ಹೀರೋಗೆ ಸರಿ ಸಮಾನಾಗಿ ಅಥವಾ ಹೀರೋಗಿಂತ ಒಂದು ಕೈ ಮೇಲಾಗಿ ವಿಲನ್‌ಗಳು ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಜೈಲರ್ ಸಿನಿಮಾದ ವಿಲನ್ ಮಲಯಾಳಿ ವಿನಾಯಕನ್. ಹೌದು ಸಿನಿಮಾ ಆರಂಭವಾಗುವುದೇ ಸಿನಿಮಾದ ವಿಲನ್ ವಿನಾಯಕನ್ ಅಬ್ಬರ ಹಾಗೂ ವಿಶೇಷ ಮ್ಯಾನರಿಸಂನಿಂದ. ರಜನಿಗಿಂತ ಮುಂಚೆ ಕಾಣಿಸಿಕೊಳ್ಳುವ ವಿನಾಯಕನ್ ಸಿನಿಮಾದ ಕೊನೆಯವರೆಗೂ ಮಾತ್ರವಲ್ಲ ನೀವು ಸಿನಿಮಾ ನೋಡಿ ಹೊರಬಂದಾಗಲೂ ನಿಮ್ಮ ಕಣ್ಮುಂದೆ ಬಂದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: ‘ಜೈಲರ್​’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ಕೇಳದೇ ಮನಶಾಂತಿಗಾಗಿ ಹಿಮಾಲಯಕ್ಕೆ ತೆರಳಿದ ರಜನಿಕಾಂತ್​

ಉಳಿದಂತೆ ಚಿತ್ರದ ಎಲ್ಲಾ ಪಾತ್ರಧಾರಿಗಳು ಸಿನಿಮಾಗೆ ಜೀವ ತುಂಬಿದ್ದಾರೆ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ರಮ್ಯಾಕೃಷ್ಣಗೆ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಒಬ್ಬ ಮಧ್ಯಮ ವರ್ಗದ ಗೃಹಿಣಿಯಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಬ್ಲ್ಯಾಸ್ಟ್ ಮೋಹನನಾಗಿ ನಟ ಸುನೀಲ್ ಕಾಮಿಡಿಯನ್ ಯೋಗಿಬಾಬು ಕನ್ನಡದ ಕಿಶೋರ್ ಸೇರಿ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

Jailer movie review: ವಿಜೃಂಭಿಸಿದ ಕ್ರೌರ್ಯ – ರಕ್ತದೋಕುಳಿ

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಅಂದರೆ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡುವ ಕೌಟುಂಬಿಕ ಚಿತ್ರವಾಗಿರುತ್ತದೆ. 6 ರಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಜೈಲರ್ ಸಿನಿಮಾದಲ್ಲಿರುವ ಕ್ರೌರ್ಯ ಹಾಗೂ ರಕ್ತದೋಕುಳಿ ಇದನ್ನು ಸುಳ್ಳಾಗಿಸಿದೆ. ಅದರಲ್ಲೂ ಕೆಲವು ಭಯಾನಕ ದೃಶ್ಯಗಳು ಮಕ್ಕಳು ಮಹಿಳೆಯರು ಕಣ್ಣು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಕ್ರೌರ್ಯವಿದೆ‌. ಇದನ್ನು ಹೊರತಪಡಿಸಿದರೆ ಸಿನಿಮಾ ತಾಂತ್ರಿಕವಾಗಿ ಅತ್ಯುತ್ತಮವಾಗಿ ಮೂಡಿಬಂದಿದೆ. ಕ್ಯಾಮೆರಾ ಕೈಚಳಕ ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತದೆ. ರಜನಿಯಷ್ಟೇ ಸುಂದರವಾಗಿರುವುದು ಜೈಲರ್ ಚಿತ್ರದ ಮ್ಯೂಸಿಕ್. ರಜನಿಯ ವರ್ಚಸ್ಸನ್ನು ಹತ್ತುಪಟ್ಟು ಹೆಚ್ಚಿಸುವಲ್ಲಿ ಸಿನಿಮಾದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಾಕಷ್ಟು ಕೆಲಸ ಮಾಡಿದೆ. ಒಟ್ಟಾರೆ ಜೈಲರ್ ಸಿನಿಮಾ ಒಮ್ಮೆ ಎಲ್ಲರೂ ನೋಡಲೇಬೇಕಾದ ಸಿನಿಮ ಅನ್ನೋದರಲ್ಲಿ ಎರಡು ಮಾತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ