Tenant Movie Review: ಟೆನಂಟ್ ಚಿತ್ರದಲ್ಲಿ ಇಮೇಜ್ ಬದಲಿಸಿದ ಧರ್ಮ, ಸೋನು ಗೌಡ

|

Updated on: Nov 22, 2024 | 3:24 PM

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುತ್ತಿರುವ ನಟ ಧರ್ಮ ಕೀರ್ತಿರಾಜ್ ಅವರು ‘ಟೆನಂಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸೋನು ಗೌಡ, ತಿಲಕ್, ರಾಕೇಶ್ ಮಯ್ಯ, ಉಗ್ರಂ ಮಂಜು ಕೂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಅವರು ಬಿಗ್ ಬಾಸ್​ ಮನೆಯಲ್ಲಿ ಇರುವಾಗ, ಅವರ ಗಮನಕ್ಕೇ ಬಾರದಂತೆ ಈ ಸಿನಿಮಾ ಬಿಡುಗಡೆ ಆಗಿದೆ.

Tenant Movie Review: ಟೆನಂಟ್ ಚಿತ್ರದಲ್ಲಿ ಇಮೇಜ್ ಬದಲಿಸಿದ ಧರ್ಮ, ಸೋನು ಗೌಡ
ಧರ್ಮ ಕೀರ್ತಿರಾಜ್​, ಸೋನು ಗೌಡ
Follow us on

ಸಿನಿಮಾ: ಟೆನಂಟ್. ನಿರ್ಮಾಣ: ನಾಗರಾಜ್​ ಟಿ., ಪೃಥ್ವಿರಾಜ್ ಸಾಗರ್. ನಿರ್ದೇಶನ: ಶ್ರೀಧರ್​ ಶಾಸ್ತ್ರಿ. ಪಾತ್ರವರ್ಗ: ಧರ್ಮ ಕೀರ್ತಿರಾಜ್​, ಸೋನು ಗೌಡ, ಉಗ್ರಂ ಮಂಜು, ರಾಕೇಶ್ ಮಯ್ಯ, ತಿಲಕ್ ಮುಂತಾದವರು. ಸ್ಟಾರ್​: 3/5

ನಟ ಧರ್ಮ ಕೀರ್ತಿರಾಜ್​ ಅವರು ಚಾಕೊಲೇಟ್​ ಹೀರೋ ರೀತಿಯ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ‘ನವಗ್ರಹ’ ಸಿನಿಮಾದಲ್ಲಿ ಕ್ಯಾಡ್ಬರೀಸ್ ಎಂದೇ ಅವರು ಫೇಮಸ್ ಆಗಿದ್ದರು. ಅವರ ರಿಯಲ್ ಲೈಫ್ ಲುಕ್ ಕೂಡ ಹಾಗೆಯೇ ಇದೆ. ಆದರೆ ಈಗ ಅವರು ‘ಟೆನಂಟ್’ ಸಿನಿಮಾದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. ಟ್ರೇಲರ್​ನಲ್ಲಿಯೇ ಅವರ ಪಾತ್ರದ ಝಲಕ್ ನೋಡಿದ ಪ್ರೇಕ್ಷಕರಿಗೆ ಅಚ್ಚರಿ ಎನಿಸಿತ್ತು. ಈ ಚಿತ್ರದಲ್ಲಿ ಅವರ ಪಾತ್ರ ಹೇಗೆ ಮೂಡಿಬಂದಿದೆ? ಸಿನಿಮಾದ ಕಥೆ ಏನು? ಒಟ್ಟಾರೆ ಸಿನಿಮಾ ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ.

ಲಾಕ್​ ಡೌನ್​ ಸಮಯದ ಒಂದು ಕಥೆಯನ್ನು ‘ಟೆನಂಟ್’ ಸಿನಿಮಾದಲ್ಲಿ ಹೇಳಲಾಗಿದೆ. ಮೊದಲ ಲಾಕ್​ಡೌನ್ ಆಗುವುದಕ್ಕೂ ಮುನ್ನ ಆ ಪರಿಕಲ್ಪನೆಯೇ ಬಹುತೇಕರಿಗೆ ಇರಲಿಲ್ಲ. ಲಾಕ್​ಡೌನ್​ನಲ್ಲಿ ಜನರ ಜೀವನ ಕಷ್ಟ ಆಯಿತು. ಆದರೆ ಕೆಲವರು ಆ ಅವಕಾಶವನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ಅಂಥ ಕೆಲವು ಪಾತ್ರಗಳ ಕಥೆ ‘ಟೆನಂಟ್’ ಸಿನಿಮಾದಲ್ಲಿದೆ. ಲಾಕ್​ಡೌನ್ ವೇಳೆ ನಡೆಯುವ ಕಥೆ ಆದ್ದರಿಂದ ಸಿನಿಮಾದ ಭಾಗಶಃ ದೃಶ್ಯಗಳು ಒಂದೇ ಮನೆಯಲ್ಲಿ ನಡೆಯುತ್ತವೆ.

ಮನೆ ಓವನ್ ಆಗಿರುವ ದಂಪತಿ (ಸೋನು ಗೌಡ-ರಾಕೇಶ್ ಮಯ್ಯ) ಖುಷಿಯಾಗಿ ಸಂಸಾರ ನಡೆಸುತ್ತಾ ಇರುತ್ತಾರೆ. ಅದೇ ಮನೆಯ ಮೊದಲ ಮಹಡಿಗೆ ಬಾಡಿಗೆಗೆ ಬರುವ ಯುವಕ (ಧರ್ಮ ಕೀರ್ತಿರಾಜ್) ಆ ದಂಪತಿಯ ಸಂಸಾರದಲ್ಲಿ ಹುಳಿ ಹಿಂಡಲು ಪ್ರಯತ್ನಿಸುತ್ತಾನೆ. ನಂತರ ಏನಾಗುತ್ತದೆ ಎಂಬುದು ಟೆನಂಟ್ ಕಥೆ. ಆದರೆ ಈ ಕಥೆ ಬರೀ ಇಷ್ಟು ಸಿಂಪಲ್ ಆಗಿಲ್ಲ. ದಿನಗಳು ಸಾಗಿದಂತೆಲ್ಲ ಆ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತದೆ. ಒಂದು ಕೊಲೆ ಕೂಡ ನಡೆಯುತ್ತದೆ! ಆ ಜಾಗಕ್ಕೆ ಪೊಲೀಸ್ (ತಿಲಕ್) ಎಂಟ್ರಿ ನೀಡಿದ ಬಳಿಕ ಹೊಸ ಟ್ವಿಸ್ಟ್​ಗಳು ತೆರೆದುಕೊಳ್ಳುತ್ತವೆ.

ಮೊದಲೇ ಹೇಳಿದಂತೆ ಧರ್ಮ ಕೀರ್ತಿರಾಜ್​ ಅವರು ನೆಗೆಟಿವ್ ಶೇಡ್ ಇರುವ ಪಾತ್ರವನ್ನು ಮಾಡಿದ್ದಾರೆ. ಈವರೆಗೂ ತಮಗೆ ಇದ್ದ ಇಮೇಜ್​ ಬದಿಗಿಟ್ಟು ಅವರು ಸಂಪೂರ್ಣ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ನಟಿ ಸೋನು ಗೌಡ ಕೂಡ ತಮ್ಮ ಇಮೇಜ್ ಬದಲಿಸಿದ್ದಾರೆ. ಸಿನಿಮಾ ಪ್ರೀ-ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಎಲ್ಲ ಪಾತ್ರಗಳ ಇನ್ನೊಂದು ಮುಖ ಅನಾವರಣ ಆಗುತ್ತದೆ. ಇದರಿಂದಾಗಿ ಸಿನಿಮಾಗೆ ಸಸ್ಪೆನ್ಸ್ ಗುಣ ಬಂದಿದೆ.

ನಿರ್ದೇಶಕ ಶ್ರೀಧರ್​ ಶಾಸ್ತ್ರಿ ಅವರು ಚಿತ್ರಕಥೆಯ ಮೂಲಕ ಟೆನಂಟ್ ಕಥೆಯನ್ನು ರೋಚಕವಾಗಿಸಲು ಪ್ರಯತ್ನಿಸಿದ್ದಾರೆ. ಕಥೆ ಒಂದು ಹಂತಕ್ಕೆ ಸಾಗಿದ ಬಳಿಕ ಇಷ್ಟು ಹೊತ್ತು ಪ್ರೇಕ್ಷಕರು ನೋಡಿದ್ದು ನಿಜವೋ ಸುಳ್ಳೋ ಎಂಬ ಪ್ರಶ್ನೆ ಮೂಡುತ್ತದೆ. ಅಂತಹ ಟ್ವಿಸ್ಟ್​ಗಳ ಮೂಲಕ ಅವರು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ನಟ ರಾಕೇಶ್ ಮಯ್ಯ ಅವರು ಎಂದಿನಂತೆ ಸಹಜಾಭಿನಯ ತೋರಿದ್ದಾರೆ. ಉಗ್ರಂ ಮಂಜು ಅವರು ಕೆಲವೇ ದೃಶ್ಯಗಳಲ್ಲಿ ಬಂದರೂ ಕಥೆಗೆ ತಿರುವು ನೀಡುತ್ತಾರೆ.

ಇದನ್ನೂ ಓದಿ: Bhairathi Ranagal Review: ರಣಗಲ್ ಸಾಮ್ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡ ಶಿವಣ್ಣ

ಇಡೀ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು ಹಾಗೂ ಒಂದೇ ಲೊಕೇಷನ್​. ಆ ದೃಷ್ಟಿಯಿಂದ ನೋಡಿದರೆ, ಇಂಥ ಕಥೆಯನ್ನು ಇಂಟರೆಸ್ಟಿಂಗ್ ಆಗಿ ಹೇಳುವುದು ನಿರ್ದೇಶಕರಿಗೆ ಸವಾಲಿನ ಕೆಲಸ. ಶ್ರೀಧರ್​ ಶಾಸ್ತ್ರಿ ಅವರು ಅಂಥ ಸವಾಲು ಸ್ವೀಕರಿಸಿದ್ದಾರೆ. ಹಾಗಿದ್ದರೂ ಕೂಡ ಕೆಲವು ಕಡೆ ಪ್ರೇಕ್ಷಕರಿಗೆ ಏಕತಾನತೆ ಕಾಡಬಹುದು. ಮೇಕಿಂಗ್ ಗುಣಮಟ್ಟದ ಬಗ್ಗೆ ಇನ್ನಷ್ಟು ಗಮನ ಹರಿಸುವುದು ಅಗತ್ಯವಿತ್ತು ಎನಿಸುತ್ತದೆ. ಅನಗತ್ಯವಾಗಿ ಏನನ್ನೂ ಸೇರಿಸಿಲ್ಲ. ಹಾಗಾಗಿ ಚಿತ್ರದ ಅವಧಿ 1 ಗಂಟೆ 39 ನಿಮಿಷ ಇದೆ. ಇದು ಸಿನಿಮಾಗೆ ಪ್ಲಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.