
ಸಿನಿಮಾ: ಅನ್ಲಾಕ್ ರಾಘವ. ನಿರ್ಮಾಣ: ಮಂಜುನಾಥ ಡಿ, ಗಿರೀಶ್ ಕುಮಾರ್ ಎನ್. ನಿರ್ದೇಶನ: ದೀಪಕ್ ಮಧುವನಹಳ್ಳಿ. ಪಾತ್ರವರ್ಗ: ಮಿಲಿಂದ್, ರೇಚಲ್ ಡೇವಿಡ್, ಶೋಭರಾಜ್, ಸಾಧು ಕೋಕಿಲ, ಧರ್ಮಣ್ಣ, ಅವಿನಾಶ್, ಭೂಮಿ ಶೆಟ್ಟಿ, ರಮೇಶ್ ಭಟ್ ಮುಂತಾದವರು.
ಹೊಸ ನಟ ಮಿಲಿಂದ್ ಅವರು ‘ಅನ್ಲಾಕ್ ರಾಘವ’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆ್ಯಕ್ಷನ್ ಹೀರೋ ಆಗಿ ಕೂಡ ಮಿಂಚಿದ್ದಾರೆ. ಈ ಸಿನಿಮಾದ ಶೀರ್ಷಿಕೆಯಲ್ಲಿಯೇ ಕಥೆಯ ಬಗ್ಗೆ ಸುಳಿವು ಇದೆ. ಯಾವುದೇ ಬೀಗವನ್ನಾದರೂ ಸುಲಭವಾಗಿ ತೆಗೆಯುವ ಕಲೆ ಗೊತ್ತಿರುವ ಹುಡುಗನ ಕಥೆ ಇದು. ಆದರೆ ಆ ಹುಡುಗನೇ ಒಂದು ಪರಿಸ್ಥಿತಿಯಲ್ಲಿ ಲಾಕ್ ಆಗಿಬಿಟ್ಟರೆ ಏನಾಗುತ್ತದೆ ಎಂಬುದು ಈ ಸಿನಿಮಾದ ಮುಖ್ಯ ತಿರುಳು.
‘ಅನ್ಲಾಕ್ ರಾಘವ’ ಸಿನಿಮಾಗೆ ದೀಪಕ್ ಮಧುವನಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಅವರು ಕಥೆ ಬರೆದಿದ್ದಾರೆ. ‘ಲವ್ ಮಾಕ್ಟೇಲ್ 2’ ಖ್ಯಾತಿಯ ನಟಿ ರೇಚಲ್ ಡೇವಿಡ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಅನೂಪ್ ಸಿಳೀನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ. ಒಟ್ಟಿನಲ್ಲಿ ಹೊಸಬರು ಮತ್ತು ಹಿರಿಯರ ಸಂಗಮ ಈ ಸಿನಿಮಾದಲ್ಲಿ ಆಗಿದೆ.
ಇಡೀ ಸಿನಿಮಾದ ಕತೆ ಸಿಂಪಲ್ ಆಗಿದೆ. ಹಾಗಿದ್ದರೂ ಕೂಡ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆ ವಿಚಾರದಲ್ಲಿ ನಟ ಸಾಧು ಕೋಕಿಲ ಅವರಿಗೆ ಹೆಚ್ಚು ಅಂಕ ಸಲ್ಲುತ್ತದೆ. ಸಿನಿಮಾದ ಆರಂಭದಿಂದ ಕ್ಲೈಮ್ಯಾಕ್ಸ್ ತನಕ ಸಾಧು ಕೋಕಿಲ ಅವರ ಪಾತ್ರ ಸಾಗುತ್ತದೆ. ತಲೆಗೆ ಪೆಟ್ಟು ಬಿದ್ದು ಅರ್ಥವಿಲ್ಲದ ಭಾಷೆ ಮಾಡಲು ಆರಂಭಿಸಿದಾಗಿ ಪ್ರೇಕ್ಷಕರಿಗೆ ಡಬಲ್ ಮನರಂಜನೆ ಸಿಗುತ್ತದೆ. ಸಾಧು ಕೋಕಿಲ ಅವರ ಕಾಮಿಡಿಯನ್ನು ಎಂಜಾಯ್ ಮಾಡುವ ಪ್ರೇಕ್ಷಕರಿಗೆ ‘ಅನ್ಲಾಕ್ ರಾಘವ’ ಸಿನಿಮಾ ಸಖತ್ ನಗಿಸುತ್ತದೆ.
ರಾಘವನ (ಮಿಲಿಂದ್) ಬಾಲ್ಯದಿಂದ ಈ ಚಿತ್ರದ ಕತೆ ಆರಂಭ ಆಗುತ್ತದೆ. ಶಾಲೆಯಲ್ಲಿ ಓದುತ್ತಿರುವಾಗಲೇ ಜಾನಕಿ (ರೇಚಲ್) ಎಂಬ ಹುಡುಗಿಯ ಮೇಲೆ ಆತನಿಗೆ ಲವ್ ಆಗುತ್ತದೆ. ಆದರೆ ಹುಡುಗಿಯ ಅಪ್ಪ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿದ್ದರಿಂದ ರಾಘವನಿಗೆ ಸಂಪರ್ಕ ತಪ್ಪಿ ಹೋಗುತ್ತದೆ. ಹಲವು ವರ್ಷಗಳು ಕಳೆದ ನಂತರ ಅದೇ ಹುಡುಗಿ ಬಂದು ಎದುರಲ್ಲಿ ನಿಂತರೂ ಅದು ಜಾನಕಿ ಎಂಬುದು ರಾಘವನಿಗೆ ತಿಳಿಯುವುದಿಲ್ಲ. ಇನ್ನೇನು ಸತ್ಯ ಗೊತ್ತಾಯಿತು ಎನ್ನುವಾಗ ಹೊಸ ಸಮಸ್ಯೆ ಶುರುವಾಗುತ್ತದೆ. ಆ ಸಮಸ್ಯೆ ಏನು? ಅದಕ್ಕೆ ರಾಘವ ಹೇಗೆ ಪರಿಹಾರ ಕಂಡುಕೊಳ್ಳುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಮಿಲಿಂದ್ ಅವರು ಆ್ಯಕ್ಷನ್ ಮತ್ತು ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಲವರ್ ಬಾಯ್ ರೀತಿಯ ಪಾತ್ರದ ಜೊತೆ ಮಾಸ್ ಆಗಿಯೂ ಕಾಣಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ಅವರು ರಾಘವನ ಪಾತ್ರದ ಮೂಲಕ ತೋರಿಸಿದ್ದಾರೆ. ನಟ ಶೋಭರಾಜ್ ಅವರು ಮುಖ್ಯ ವಿಲನ್ ಆಗಿ ಎಂದಿನ ಖದರ್ನಲ್ಲಿ ನಟಿಸಿದ್ದಾರೆ. ಧರ್ಮಣ್ಣ ಅವರ ಕಾಮಿಡಿ ಕಚಗುಳಿ ಕೂಡ ಈ ಸಿನಿಮಾದಲ್ಲಿದೆ.
ಇದನ್ನೂ ಓದಿ: Adhipatra Review: ಮರ್ಡರ್ ಮಿಸ್ಟರಿ ಜತೆ ತುಳುನಾಡಿನ ಕಥೆ ಹೇಳುವ ‘ಅಧಿಪತ್ರ’ ಸಿನಿಮಾ
ಹಲವೆಡೆ ಲಾಜಿಕ್ ಮಿಸ್ ಆಗಿರುವುದು ಎದ್ದು ಕಾಣುತ್ತದೆ. ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸಬಹುದಿತ್ತು. ಇಂಥ ಕೆಲವು ಲೋಪಗಳ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಉಳಿದಂತೆ, ಹೊಸ ನಟನ ಪರಿಚಯಕ್ಕೆ ಬೇಕಾದ ಎಲ್ಲ ಅಂಶಗಳು ‘ಅನ್ಲಾಕ್ ರಾಘವ’ ಸಿನಿಮಾದಲ್ಲಿದೆ. ಮಿಲಿಂದ್ ಹಾಗೂ ರೇಚಲ್ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಆದರೆ ಪ್ರೇಮಕಥೆಯಲ್ಲಿ ತೀವ್ರತೆ ಕಾಣಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.